ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೀಪಾವಳಿ ಸಂಮ್ರಾಮಾಚರಣೆ- ಬಲಿಯೇಂದ್ರ ಪೂಜೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.31ರಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಸಂಭ್ರಮಾಚರಣೆ, ದೀಪೋತ್ಸವ ಹಾಗೂ ಬಲಿಯೇಂದ್ರ ಪೂಜೆ ಸಂಭ್ರಮದಿಂದ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಉಪಸ್ಥಿತಿಯಲ್ಲಿ ಪವಿತ್ರಪಾಣಿ ಜಯರಾಮ ಶಿವತ್ತಾಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.


ಭವ್ಯ ಮೆರವಣಿಗೆ:
ಸಾಯಂಕಾಲ ಪುಣಚ ಪರಿಯಾಲ್ತಡ್ಕ ಪೇಟೆಯಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಕ ವಯೋಲಿನ್, ಚೆಂಡೆ ವಾದನದ ಭವ್ಯ ಮೆರವಣಿಗೆ ದೇವಸ್ಥಾನಕ್ಕೆ ಸಾಗಿ ಬಂದು ದೇವಸ್ಥಾನದ ವಠಾರದಲ್ಲಿ ಕುಣಿತ ಭಜನೆ, ವಯೋಲಿನ್ ಚೆಂಡೆವಾದನ ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮ: ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ ನಾವು ರಾಷ್ಟ್ರ ಚಿಂತನೆ ಮಾಡಬೇಕು ರಾಷ್ಟ್ರದಲ್ಲಿರುವ ಹಿಂದುಗಳು ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆಗೆ ಜಾಗೃತರಾದರೆ ನಾವು ಜೀವನದಲ್ಲಿ ಒಳಿತನ್ನು ಸಾಧಿಸಬಹುದು. ಶ್ರದ್ಧೆ ಭಕ್ತಿಯಿಂದ ದೇವರನ್ನು ಭಜಿಸಿದರೆ ದೈವಿಕವಾಗಿ ಆರಾಧನೆಯ ಫಲ ಲಭಿಸಬಹುದು ಎಂದರು.


ಸಭಾಧ್ಯಕ್ಷತೆ ವಹಿಸಿದ್ದ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ, ಉದ್ಯಮಿ ಸಂತೋಷ್ ರೈ ಬೈಲುಗುತ್ತು, ಶರಣಂ ಕನ್‌ಸ್ಟ್ರಕ್ಷನ್‌ನ ಮಾಲಕ ರವಿ ಬಿ.ಕೆ, ಸಿಂಗಾರಿ ಮೇಳದ ಮುಖ್ಯಗುರು ಚಂದ್ರಹಾಸ ಮಣಿಯಾಣಿ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತಂಡದ ವಿನುತ್,ಧನುಷ್,ಪ್ರಜ್ವಲ್ ಪ್ರಾರ್ಥಿಸಿದರು. ತಂಡದ ಸದಸ್ಯ ಸೃಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ,ವಂದಿಸಿದರು. ಅಜೇಯ್ ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡರು. ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ಪದಾಧಿಕಾರಿಗಳು ಹಾಗೂ ಸದಸ್ಯರು ಭಕ್ತಾದಿಗಳನ್ನು ಸ್ವಾಗತಿಸಿ, ಸಹಕರಿಸಿದರು.


ದೀಪೋತ್ಸವ- ಬಲಿಯೇಂದ್ರ ಪೂಜೆ:
ದೇವಸ್ಥಾನದ ಒಳಾಂಗಣ, ಹೊರಾಂಗಣದಲ್ಲಿ ಏಕಕಾಲದಲ್ಲಿ 2000 ಹಣತೆ ದೀಪದ ಪ್ರಜ್ವಲನೆಯ ಮುಖಾಂತರ ಬಲಿಯೇಂದ್ರ ಪೂಜೆ, ಚೆಂಡೆ ಪೂಜೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು.

LEAVE A REPLY

Please enter your comment!
Please enter your name here