*ಗಾಂಧಿಜಿಯವರ ಆಶಯದ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮಗಳಲ್ಲಿ ಕಾರ್ಯಾಗಾರ
*ಸಾರ್ವಜನಿಕರು, ಸಂಘಸಂಸ್ಥೆಗಳು, ತಜ್ಞರು ಕೈಜೋಡಿಸಲು ಕರೆ
ಸುದ್ದಿಯ ಸಹ ಸಂಸ್ಥೆ ಅರಿವು ಕೇಂದ್ರದ ಬಗ್ಗೆ ಈಗಾಗಲೇ ಲೇಖನಗಳು ಬಂದಿವೆ. ಅದರ ಅಡಿಯಲ್ಲಿ ತರಬೇತಿ ಕಾರ್ಯಾಗಾರ ನಡೆದಿವೆ. ಅರಿವು ಎಂಬ ಸಂಸ್ಥೆಯ ಅಡಿಯಲ್ಲಿ ಉದ್ಯಮಗಳ ಆರೋಗ್ಯಕರ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಮತ್ತು ಮಾರುಕಟ್ಟೆಗೆ ಇರಿಸಲಾಗಿದೆ. ಕೃಷಿಕರಿಗೆ ಮನೆಯಲ್ಲಿ ಮಾಡುವ ಕೃಷಿಯಿಂದ ಹಿಡಿದು ದೊಡ್ಡ ಮಟ್ಟದಲ್ಲಿ ಮಾಡಬಹುದಾದ ಕೃಷಿಗಳ ಬಗ್ಗೆ ಮಾಹಿತಿ, ತರಬೇತಿ, ಬೀಜ, ಗಿಡ ಒದಗಿಸುವ ಬುಕ್ಕಿಂಗ್ ವ್ಯವಸ್ಥೆಯೊಂದಿಗೆ ಮಾರುಕಟ್ಟೆಗೆ ಬೇಕಾದ ಮಾಹಿತಿಗೆ ತಜ್ಞರ ಅನುಕೂಲತೆಯನ್ನು ಏರ್ಪಡಿಸುತ್ತಿದ್ದೇವೆ.
ಅದೇ ರೀತಿಯಲ್ಲಿ ಅರಿವು ಕೃಷಿ ಕೇಂದ್ರದಿಂದ ಮನೆ ಮನೆಯಲ್ಲಿ ಮಾಡಬಹುದಾದ ಉದ್ಯಮಕ್ಕೆ ಮಾಹಿತಿ, ತರಬೇತಿ, ಬ್ಯಾಂಕಿಂಗ್ ಸಾಲ, ಸಬ್ಸಿಡಿ ವ್ಯವಸ್ಥೆಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಮಾರುಕಟ್ಟೆಗೆ ವೇದಿಕೆ (ಪ್ಲಾಟ್ ಫಾರ್ಮ್) ಒದಗಿಸಲಿದ್ದಾರೆ. ಅದರೊಂದಿಗೆ ಮಳೆ ಕೊಯ್ಲು, ಸೌರ ವಿದ್ಯುತ್, ಫಾರ್ ಎಸ್ಟಿಂಗ್ಶರ್ ಬಗ್ಗೆ ಮಾಹಿತಿ ದೊರಕಲಿದೆ. ಈ ಎಲ್ಲಾ ಯೋಜನೆಗಳ ಯಶಸ್ವಿಗಾಗಿ ಪ್ರತಿ ತಿಂಗಳಿಗೊಂದು ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಮತ್ತು ಉದ್ಯಮದ ಮಾಹಿತಿ, ತರಬೇತಿ, ಮಾರುಕಟ್ಟೆ ಕಾರ್ಯಾಗಾರ ಹಾಕಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಂಘ ಸಂಸ್ಥೆಗಳ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆ.
|ಡಾ.ಯು.ಪಿ.ಶಿವಾನಂದ
ನಮ್ಮ ಊರು ನಮ್ಮ ಹೆಮ್ಮೆ -ನಮ್ಮ ತಾಲೂಕು ನಮ್ಮ ಹೆಮ್ಮೆ
ಈ ವಿಚಾರವನ್ನು ಒಂದೆರಡು ವರ್ಷಗಳ ಹಿಂದೆ ಪ್ರಸ್ತಾಪಿಸಿದ್ದೆ. ಅದಕ್ಕೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಉತ್ತಮ ಸ್ಪಂಧನೆ ದೊರಕಿತ್ತು. ಆದರೆ ಕಾರಣಾಂತರಗಳಿಂದ ಮುಂದುವರಿಸಲು ಸಾಧ್ಯವಾಗಲಿಲ್ಲ. ಈಗ ಅದನ್ನು ಮತ್ತೆ ಮುನ್ನಲೆಗೆ ತರುತ್ತಿದ್ದೇನೆ. ನಮ್ಮೂರು ನಮ್ಮ ಹೆಮ್ಮೆ, ನಮ್ಮ ತಾಲೂಕು ನಮ್ಮ ಹೆಮ್ಮೆ ಎಂಬ ಚಿಂತನೆಯನ್ನು ನಮ್ಮ ಊರಿನಲ್ಲಿ ಮತ್ತು ಜಗತ್ತಿನಾದ್ಯಂತ ಇರುವ ನಮ್ಮ ಊರಿನವರಿಗೆ ಹರಡುವಂತೆ ಮಾಡಬೇಕೆಂದಿದ್ದೇವೆ. ಜಗತ್ತಿನಾದ್ಯಂತ ಇರುವ ಊರಿನವರನ್ನು ಊರಿನವರೊಂದಿಗೆ, ಸಂಪರ್ಕ, ಸಂವಹನ ಇಟ್ಟುಕೊಳ್ಳುವಂತೆ ಮಾಡುವುದರೊಂದಿಗೆ ಊರಿನ ಅಭಿವೃದ್ಧಿಗೆ ಕೈಜೋಡಿಸುವಂತೆ ಮಾಡಬೇಕು. ಜಗತ್ತಿನಾದ್ಯಂತ ಮುಕ್ತ ಮಾರುಕಟ್ಟೆಗೆ ಅವಕಾಶ ದೊರಕಬೇಕು. ಆ ಮೂಲಕ ನಮ್ಮ ಊರು ಜಾಗತಿಕ ಮಟ್ಟದ ಸೌಲಭ್ಯ ಪಡೆಯಬೇಕು, ಅಭಿವೃದ್ದಿ ಹೊಂದಬೇಕು. ಜಗತ್ತಿನಲ್ಲಿರುವ ನಮ್ಮ ಊರಿನ ಎಲ್ಲರೂ ‘ನಮ್ಮ ಊರು ನಮ್ಮ ಹೆಮ್ಮೆ, ನಮ್ಮ ತಾಲೂಕು ನಮ್ಮ ಹೆಮ್ಮೆ’ ಎಂದು ಹೇಳಿಕೊಳ್ಳುವಂತೆ ಮಾಡುವ ಈ ಯೋಜನೆಗೆ ಪ್ರತೀ ಊರುಗಳಲ್ಲಿ ಮತ್ತು ತಾಲೂಕಿನಲ್ಲಿ ಬೆಂಬಲ ಯಾಚಿಸುತ್ತಿದ್ದೇನೆ. . ಅದು ದೀಪಾವಳಿಯ ಬೆಳಕಿನಂತೆ ನಮ್ಮೆಲ್ಲರ ಜೀವನ ಬೆಳಗಿಸಲಿ ಎಂದು ಆಶಿಸುತ್ತಿದ್ದೇನೆ. ಈ ಮೇಲಿನ ವಿಚಾರಧಾರೆ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ, ಸ್ವಾವಲಂಬಿ ಜೀವನದ ಆಶಯವನ್ನು ಈಡೇರಿಸಲಿದೆ.