ಕಡಬ: ಗುಜರಾತ್ನಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವಾರ್ಪಣೆ ಸಲ್ಲಿಸುವ ಪರೇಡ್ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಯಿಲ ಆನೆಗುಂಡಿ ಅನುಜ್ಞಾ ವೈ.ಟಿ.ಅವರು ಭಾಗವಹಿಸಿ, ಕರ್ನಾಟಕ-ಗೋವಾ ಡೈರೆಕ್ಟರೇಟ್ ಅನ್ನು ಮುನ್ನಡೆಸಿ ಡಿಜಿ ಎಪ್ರಿಷಿಯೇಶನ್ ಪಡೆದ ಕೆಡೆಟ್ ಆಗಿ ಗುರುತಿಸಿಕೊಂಡಿದ್ದಾರೆ.
ಇವರು ಕಡಬ ತಾಲೂಕು ಕೊಯಿಲ ಗ್ರಾಮದ ಆನೆಗುಂಡಿ ನಿವಾಸಿ ಯದುಶ್ರೀ ಮತ್ತು ಮಮತಾ ದಂಪತಿಯ ಪುತ್ರಿ. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ 3ನೇ ವರ್ಷದ ಮನಶಾಸ್ತ್ರ ಹಾಗೂ ಎನ್ಸಿಸಿ ವಿದ್ಯಾರ್ಥಿನಿಯಾಗಿದ್ದಾರೆ. ಆಲಂಕಾರು ಶ್ರೀ ಭಾರತಿ ಶಾಲೆ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.
ದೇಶದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಮನೋಭಾವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಭಾರತದ ಮೊದಲ ಗೃಹ ಸಚಿವ ದಿ.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಗುತ್ತದೆ. ಆ.15 ಸ್ವಾತಂತ್ರ್ಯ ಮತ್ತು ಜ.26 ಗಣ್ಯರಾಜ್ಯ ದಿನವಾಗಿ ವಿಶೇಷತೆಯನ್ನು ಪಡೆದಂತೆ ಅ.31ರಂದು ದೇಶದಾದ್ಯಂತ ಏಕತೆಯ ಹಬ್ಬವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ, ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಪರೇಡ್ ಮತ್ತು ನರ್ಮದಾ ನದಿಯ ದಡದಲ್ಲಿರುವ ಏಕತಾ ಪ್ರತಿಮೆಯಲ್ಲಿನ ರಾಷ್ಟ್ರೀಯ ಏಕತಾ ದಿನಾಚರಣೆಗಳು ರಾಷ್ಟ್ರದ ಮೂರು ಪ್ರಮುಖ ಉತ್ಸವಗಳಾಗಿ ಮಾರ್ಪಟ್ಟಿವೆ. ರಾಷ್ಟ್ರೀಯ ಏಕತಾ ದಿವಸ್ ಪರೇಡ್ನಲ್ಲಿ ಎನ್ಎಸ್ಜಿ, ಬಿಎಸ್ಎಫ್, ಎನ್ಸಿಸಿ ಮತ್ತು ವಿವಿಧ ರಾಜ್ಯ ಪೊಲೀಸ್ಗಳ 16 ಕವಾಯತು ತಂಡಗಳು, ಎಲ್ಲಾ ಮಹಿಳಾ ಸಿಆರ್ಪಿಎಫ್ ಬೈಕರ್ಗಳಿಂದ ಡೇರ್ಡೆವಿಲ್ ಶೋ, ಬಿಎಸ್ಎಫ್ನ ಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ ಕಾರ್ಯಕ್ರಮ, ವಿಶೇಷ ಎನ್ಸಿಸಿ ಸಾಂಸ್ಕೃತಿಕ ಪ್ರದರ್ಶನ, ಶಾಲಾ ಬ್ಯಾಂಡ್ಗಳ ಪ್ರದರ್ಶನ, ಭಾರತೀಯ ವಾಯುಪಡೆಯಿಂದ ವಿಶೇಷ ಹಾರಾಟ ಇತ್ಯಾದಿ ಸಂಭ್ರಮಗಳು ನಡೆದವು.