ತಲವಾರು ತೋರಿಸಿ ಒಡವೆ, ಹಣ ನೀಡುವಂತೆ ಬೆದರಿಕೆ, ಆತಂಕದಲ್ಲಿ ಗ್ರಾಮಸ್ಥರು…!
ಪುತ್ತೂರು: ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರಂತೆಯೇ ಕೆಯ್ಯೂರಿನಲ್ಲೂ ಚಡ್ಡಿ ಗ್ಯಾಂಗ್ ದರೋಡೆಕೋರರು ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದಾರೆ.
ಕೆಯ್ಯೂರಿನ ಸಣಂಗಳದಲ್ಲಿ ನ.5 ರಂದು ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಮನೆಯಂಗಳದಲ್ಲಿ ಚಡ್ಡಿ ಬನಿಯನ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ್ದ ಸುಮಾರು ನಾಲ್ಕು ಮಂದಿಯ ತಂಡವೊಂದು ಕಾಣಸಿಕೊಂಡಿದೆ.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿರುವ ಮಾರ್ಗರೇಟ್ ಎಂಬವರ ಬಾಡಿಗೆ ಮನೆಯ ಅಂಗಳಕ್ಕೆ ಬಂದ ಈ ಗ್ಯಾಂಗ್ ಅವರನ್ನು ತಲವಾರು ತೋರಿಸಿ ಹೆದರಿಸಿ ಹಣ, ಒಡವೆ ನೀಡುವಂತೆ ಬೆದರಿಸಿದ್ದಾರೆ. ಇದೇ ವೇಳೆಗೆ ಮನೆಯಲ್ಲಿ ಇತರರು ಇದ್ದ ಕಾರಣ ಚಡ್ಡಿ ಗ್ಯಾಂಗ್‌ನವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಮಾರ್ಗರೇಟ್‌ರವರು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿದ್ದು ಅಲ್ಲದೆ ಮನೆಯ ಕಿಟಕಿಯ ಮೂಲಕ ಚಡ್ಡಿ ಗ್ಯಾಂಗ್‌ನವರ ಫೋಟೋ ತೆಗೆದಿದ್ದಾರೆ.
ಖತರ್ನಕ್ ಕಳ್ಳರ ಗ್ಯಾಂಗ್…!?
ಇದೊಂದು ಖತರ್ನಕ್ ಕಳ್ಳರ ಗ್ಯಾಂಗ್ ಆಗಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಇದೇ ರಾತ್ರಿ ಹತ್ತಿರದ ಮನೆಯೊಂದರ ಬಾಗಿಲು ಬಡಿದಿದ್ದಾರೆ ಎನ್ನಲಾಗಿದೆ. ಆದರೆ ಎಲ್ಲಿಯೂ ಕಳ್ಳತನ ನಡೆದ ಬಗ್ಗೆ ವರದಿಯಾಗಿಲ್ಲ. ವಿಚಿತ್ರ ವೇಷಭೂಷಣಗಳ ಮೂಲಕ ಕಾಣಿಸಿಕೊಂಡು ಈ ಗ್ಯಾಂಗ್‌ನಿಂದಾಗಿ ಗ್ರಾಮಸ್ಥರಲ್ಲಿ ಭಯ ತುಂಬಿಕೊಂಡಿದೆ.