ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಎಂಎಲ್ಸಿ ಕಿಶೋರ್ ಬೊಟ್ಯಾಡಿ
ಪುತ್ತೂರು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಸಮಾಜ ಮೈಮರೆತಿದೆ. ಆ ಕಾರಣದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಕ್ ಮೂಲಕ ರೈತರ ಜಾಗ ಕಬಳಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತ ಹಾಗೂ ಹಿಂದೂ ವಿರೋಧಿ ಎಂಬುದು ಗೊತ್ತಾಗಿದೆ. ನಾವಂತು ಒಂದಿಂಚೂ ಜಾಗವನ್ನು ವಕ್ಪ್ ಗೆ ಬಿಟ್ಟು ಕೊಡುವ ಪ್ರಶ್ನಯೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ.
ಅವರು ಪುತ್ತೂರು ವಿವೇಕಾನಂದ ಕಾಲೇಜು ಕ್ಯಾಂಪಸ್ ಮತ್ತು ಕ್ಯಾಂಪ್ರೋ ಚಾಕಲೇಟ್ ಕಾರ್ಖಾನೆಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಕಳೆದ ಸಲ ಬಿಟ್ಟಿ ಭಾಗ್ಯಗಳನ್ನು ದ.ಕ., ಉಡುಪಿ ಜಿಲ್ಲೆಯ ಮತದಾರರು ತಿರಸ್ಕರಿಸಿದ್ದಾರೆ. ಉಳಿದ ಜಿಲ್ಲೆಯವರು ಬಿಟ್ಟಿ ಭಾಗ್ಯಗಳಿಗೆ ಸೋತು ಕಾಂಗ್ರೆಸ್ಗೆ ಮತ ಹಾಕಿದ ಪರಿಣಾಮ ಈಗ ಚಡಪಡಿಸುವ ಪರಿಸ್ಥಿತಿ ಬಂದಿದೆ. ಇಡೀ ಹಿಂದೂ ಸಮಾಜದ ವಿರುದ್ಧ ದಬ್ಬಾಳಿಕೆ ಮಾಡುವುದರಲ್ಲಿ ಸಿದ್ದರಾಮಯ್ಯ ಅವರು ಎತ್ತಿದ ಕೈ. ಮುಸಲ್ಮಾನರ ಮತಕ್ಕಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರೈತರ ಜಾಗದ ಆರ್ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಎಂಟ್ರಿ ಮಾಡಿರೋದು ಸರಿಯಲ್ಲ. ಈ ಮೂಲಕ ಸಿದ್ಧರಾಮಯ್ಯ ರೈತ ವಿರೋಧಿ ಎಂಬುದು ಸಾಬೀತಾಗಿದೆ. ಅಷ್ಟೇ ಅಲ್ಲದೇ ಮಠ, ಮಂದಿರಗಳ ಆಸ್ತಿಯಲ್ಲೂ ಇಂತದ್ದೇ ಎಂಟ್ರಿಯಾಗಿದೆ. ಇದು ಹಿಂದೂ ಸಮಾಜಕ್ಕೆ ಮಾಡಿದ ಅನ್ಯಾಯ. ಹಿಂದೂಗಳ ಆಸ್ತಿಯನ್ನು ಕಬಳಿಸುವ ಕೆಲಸವನ್ನು ಸಚಿವ ಜಮೀರ್ ಅಹ್ಮದ್ ಅವರ ಮೂಲಕ ಮಾಡಿದ್ದಾರೆ. ರೈತರ ಹಾಗೂ ಹಿಂದೂಗಳ ಒಂದಿಂಚೂ ಜಾಗವನ್ನು ವಕ್ಪ್ ಗೆ ಬಿಟ್ಟು ಕೊಡುವುದಿಲ್ಲ. ಇದಕ್ಕಾಗಿ ಯಾವ ಹೋರಾಟಕ್ಕೂ ಸಿದ್ಧ, ಪ್ರಾಣತ್ಯಾಗಕ್ಕೂ ಸಿದ್ಧ ಎಂದವರು ಹೇಳಿದರು.
ಈ ಸಂದರ್ಭ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಶಶಿಧರ್ ನಾಯಕ್, ನಾಗೇಶ್ ಟಿ.ಎಸ್, ಸತೀಶ್ ನಾೖಕ್ ಸಹಿತ ಹಲವಾರು ಮಂದಿ ಜೊತೆಗಿದ್ದರು.