ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಆಸ್ತಿ ರಕ್ಷಣೆಗೆ ಒತ್ತಾಯಿಸಿ ನ.11 ರಿಂದ ಅನಿರ್ಧಿಷ್ಟಾವಧಿ ಧರಣಿ

0

ಮಂಗಳೂರು: ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್‌ಗಳಿಗೆ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ದೇವಾಲಯದ ಆಸ್ತಿಯನ್ನು ರಕ್ಷಿಸಲು ಸೂಕ್ತ ಕ್ರಮಕ್ಕೆ ಆಗ್ರಹಿಸಿ ನ.11ರಿಂದ ದೇವಸ್ಥಾನದ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ತಿಳಿಸಿದ್ದಾರೆ. ನ.5ರಂದು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.


2004ರಲ್ಲಿ ದೇವಸ್ಥಾನದ ಆಗಿನ ವಾಸುದೇವ ಶಬರಾಯ ಅಧ್ಯಕ್ಷರಾಗಿದ್ದ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಸ್ಥಳಾವಕಾಶದ ಕೊರತೆಯ ಕಾರಣ ಜಾಗ ಹೊಂದಬೇಕು ಎಂದು ಚಿಂತಿಸಿ, 31-2-2004ರ ಆಡಳಿತ ಮಂಡಳಿಯ ನಿರ್ಣಯ ಸಂಖ್ಯೆ 12ರಂತೆ ದೇವಳ, ಭಕ್ತರ ಅನುಕೂಲಕ್ಕಾಗಿ ಪಕ್ಕದ ಜಮೀನು ಖರೀದಿಸಲು ತೀರ್ಮಾನಿಸಿತ್ತು. ದೇವಸ್ಥಾನದ ಎದುರು ಬಲಭಾಗದಲ್ಲಿ ಮ್ಯಾಕ್ಸಿಂ ಥೋಮಸ್ ಲೋಬೊ ಕೊಕ್ಕಡ ಗ್ರಾಮದ 215/2ರಲ್ಲಿ 3.46 ಎಕರೆ ಪಟ್ಟಾಜಾಗ ಹೊಂದಿದ್ದು, ಈ ಜಾಗವನ್ನು ದೇವಸ್ಥಾನಕ್ಕೆ ಕೊಡುತ್ತೇನೆ ಎಂದು ಆಡಳಿತ ಮಂಡಳಿಯಲ್ಲಿ ಕೇಳಿಕೊಂಡಿದ್ದರು. ಆ ಸಂದರ್ಭದಲ್ಲಿ ದೇವಸ್ಥಾನದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ಹಾಗಾಗಿ ಸಮಿತಿಯಲ್ಲಿದ್ದ ವಾಸುದೇವ ಶಬರಾಯ, ರಾಘವ ಕೊಲ್ಲಾಜೆ, ಕೆ.ವಿಶ್ವನಾಥ ತಮ್ಮ ಸ್ವಂತ ಭೂಮಿಯನ್ನು ಸಿಂಡಿಕೇಟ್ ಬ್ಯಾಂಕಿನಲ್ಲಿ ಅಡವಿರಿಸಿ ಒಟ್ಟು 3.46 ಎಕರೆ ಭೂಮಿ ಖರೀದಿಸಿದ್ದರು. ಅದನ್ನು ವಾಸುದೇವ ಶಬರಾಯರ ಹೆಸರಿನಲ್ಲಿ 1.26 ಎಕರೆ, ರಾಘವ ಕೊಲ್ಲಾಜೆ 1.26 ಎಕರೆ ಹಾಗೂ ವಿಶ್ವನಾಥ ಕೆ. ಹೆಸರಿನಲ್ಲಿ 1 ಎಕರೆಯಂತೆ ನೋಂದಣಿ ಮಾಡಿಕೊಂಡಿದ್ದರು.


ಟ್ರಸ್ಟ್ ಮೂಲಕ ಆದಾಯ ದೇವಸ್ಥಾನಕ್ಕೆ:
ಮೂವರು ಖರೀದಿಸಿದ ಜಾಗಕ್ಕೆ ಸಂಬಂಧಿಸಿ ಮಾಡಿದ್ದ ಬ್ಯಾಂಕ್ ಸಾಲವನ್ನು ದೇವಳದ ಭಕ್ತಾದಿಗಳ ನೆರವಿನಿಂದ ಸಂದಾಯ ಮಾಡಲಾಗಿತ್ತು. ನಂತರ ದೇವರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಲು ಹೋದಾಗ ಕೃಷಿ ಭೂಮಿ ನೋಂದಣಿ ಆಗಲಿಲ್ಲ. ಆಗ ಭಕ್ತರು ಮತ್ತು ಊರಿನವರು ಸೇರಿ ದೇವರ ಹೆಸರಿನಲ್ಲಿ ಖರೀದಿಸಿದ ಭೂಮಿಯನ್ನು ಮೂವರು ತಮ್ಮ ಹೆಸರಿನಲ್ಲಿ ಮಾಡಿಕೊಂಡು ದುರುಪಯೋಗವಾಗುತ್ತಿದೆ ಎಂದು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು. ತನಿಖೆಯೂ ಆಗಿತ್ತು. ಆಗ ಆಡಳಿತ ಮಂಡಳಿಯವರು ಕಾನೂನಿನಲ್ಲಿ ತೊಡಕಿನಿಂದ ದೇವಸ್ಥಾನದ ಹೆಸರಿನಲ್ಲಿ ಕೃಷಿಭೂಮಿ ನೋಂದಣಿ ಅಸಾಧ್ಯವಾಗಿದೆ. ಹಾಗಾಗಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಹೆಸರಿನ ಟ್ರಸ್ಟ್ ರಚನೆ ಮಾಡಿ, ಅದರ ಮೂಲಕ ಭೂಮಿಯನ್ನು ನಿರ್ವಹಣೆ ಮಾಡಿ, ಅದರ ಆದಾಯವನ್ನು ದೇವಸ್ಥಾನಕ್ಕೆ ಸಂದಾಯ ಮಾಡಿ ಜನರಿಗೆ ಕೊಟ್ಟ ಭರವಸೆಯಂತೆ ಹೋರಾಟ ಸ್ಥಗಿತವಾಗಿತ್ತು.


ಟ್ರಸ್ಟ್-ದೇವಳ ಬೇರ್ಪಟ್ಟು ಸಮಸ್ಯೆ:
ಈ ಜಮೀನಿನಲ್ಲಿ ಭಕ್ತರ ನೆರವಿನಿಂದ ವಾಣಿಜ್ಯ ಕಟ್ಟಡ, ವಸತಿ ಗೃಹ ನಿರ್ಮಾಣವಾಯಿತು. ಅದರ ಆದಾಯ ಹಲವು ವರ್ಷಗಳ ಕಾಲ ದೇವಸ್ಥಾನದ ನಿಽಗೆ ಬರುತ್ತಿತ್ತು. ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಪ್ರಾರಂಭದಿಂದಲೂ ಕೃಷ್ಣ ಭಟ್ ಇದ್ದು, ಅವರೇ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದಾಗ ಟ್ರಸ್ಟ್ ಮತ್ತು ದೇವಳವನ್ನು ಬೇರ್ಪಡಿಸಿ, ಟ್ರಸ್ಟಿನ ಅಕೌಂಟನ್ನು ಬೇರೆಯೇ ನಿರ್ವಹಣೆ ಮಾಡಿದರು. ಆಗ ಜಾಗದ ಆದಾಯ ಎಲ್ಲವೂ ಟ್ರಸ್ಟಿಗೆ ಹೋಗಿ, ದೇವಸ್ಥಾನಕ್ಕೆ ಆದಾಯ ಬಾರದಂತೆ ಆಯಿತು. ಸುಮಾರು 10 ವರ್ಷಗಳಿಂದ ಜಾಗವನ್ನು ಟ್ರಸ್ಟ್ ನಿರ್ವಹಿಸುತ್ತಿದ್ದು, ದೇವಸ್ಥಾನಕ್ಕೆ ಆದಾಯ ಬರುತ್ತಿಲ್ಲ.


ದೇವಸ್ಥಾನದ ಹೆಸರಿಗೆ ಗಿಫ್ಟ್ ಡೀಡ್:
ವಾಸುದೇವ ಶಬರಾಯ, ರಾಘವ ಕೊಲ್ಲಾಜೆ, ವಿಶ್ವನಾಥ ಕೆ. ತಾವು ಮರಣ ಹೊಂದಿದರೆ ಜಾಗ ಸೇವಾ ಟ್ರಸ್ಟ್‌ಗೆ ಸೇರುತ್ತದೆ ಎಂದು ವಿಲ್ ಬರೆದಿದ್ದರು. ವಾಸುದೇವರು ಮೃತಪಟ್ಟಿದ್ದು, ಅವರ ಹೆಸರನಲ್ಲಿದ್ದ ಭೂಮಿ ಟ್ರಸ್ಟ್ ಹೆಸರಿಗೆ ಬಂದಿದೆ. ಬಾಕಿ ಇಬ್ಬರ ಭೂಮಿ ಅವರ ಹೆಸರಿನಲ್ಲೇ ಇತ್ತು. 2017ರಲ್ಲಿ ನಮ್ಮ ನೇತೃತ್ವದ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂತು. ಆಗ ಈ ಜಾಗವನ್ನು ದೇವಳದ ಹೆಸರಿನಲ್ಲಿ ಮಾಡುವ ಕುರಿತು ಪ್ರಸ್ತಾವಿಸಿದಾಗ ಇಬ್ಬರೂ (ರಾಘವ, ವಿಶ್ವನಾಥ) ಸಂತೋಷದಿಂದ ಒಪ್ಪಿ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಅದನ್ನು ಜಿಲ್ಲಾಧಿಕಾರಿಗಳಿಗೆ ದೇವರ ಹೆಸರಿನಲ್ಲಿ ನೋಂದಣಿಗೆ ಅನುಮತಿ ಕೋರಿದ್ದೆ. ಕಾನೂನು ತೊಡಕಿನಿಂದ ಅನುಮತಿ ಸಿಗಲಿಲ್ಲ.‌


ಪುತ್ತೂರಿನ ವಿದ್ಯಾಸಂಸ್ಥೆಗೆ ಗಿಫ್ಟ್ ಡೀಡ್:
ಇತ್ತೀಚೆಗೆ ರಾಘವ ಕೊಲ್ಲಾಜೆಯವರು ಪುತ್ತೂರಿನ ವಿದ್ಯಾಸಂಸ್ಥೆಗೆ ಗಿಫ್ಟ್ ಡೀಡ್ ಮೂಲಕ ತಮ್ಮ ಹೆಸರಿನಲ್ಲಿರುವ ಜಾಗವನ್ನು ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂತು. ಅದು ಭಕ್ತರ ನೆರವಿನಿಂದ ಖರೀದಿಸಿರುವ ಜಮೀನು. ಹಿಂದೆ ಸೌತಡ್ಕ ದೇವಸ್ಥಾನಕ್ಕೆ ಗಿಫ್ಟ್ ಡೀಡ್ ಬರೆದುಕೊಟ್ಟಿದ್ದರು. ಹಾಗಾಗಿ ವಿದ್ಯಾಸಂಸ್ಥೆ ಹೆಸರಲ್ಲಿ ಅದನ್ನು ದಾಖಲೆ ಮಾಡಬಾರದು ಎಂದು ನಾನು ತಹಶೀಲ್ದಾರ್‌ರಿಗೆ ದೂರು ಕೊಟ್ಟಿದ್ದೆ. ನಮ್ಮಲ್ಲಿರುವ ದಾಖಲೆ ಪ್ರಕಾರ ಈ ಜಮೀನು ದೇವಳದ ಉದ್ದೇಶಕ್ಕೆ ಖರೀದಿ ಮಾಡಿದ್ದು, 2004 ಹಾಗೂ 2006ರ ಆಡಳಿತ ಮಂಡಳಿಯ ನಿರ್ಣಯದ ಪ್ರತಿ ದಾಖಲೆ ನಮ್ಮಲ್ಲಿದೆ. 2017ರಲ್ಲಿ ರಾಘವ, ವಿಶ್ವನಾಥರು ಗಿಫ್ಟ್ ಡೀಡ್ ಮಾಡಿರುವ ಕಾಪಿ ಕೂಡ ಇದೆ. ಜಿಲ್ಲಾಧಿಕಾರಿಗಳಿಗೆ ಅನುಮತಿಗಾಗಿ ಬರೆದ ಪತ್ರವೂ ಇದೆ. 2006ರಲ್ಲಿ ನಡೆದ ಹೋರಾಟದ ಮಾಧ್ಯಮ ವರದಿಗಳೂ ಇವೆ. ಈ ದಾಖಲೆಗಳನ್ನು ಇಟ್ಟುಕೊಂಡು ಈ ಭೂಮಿಯಿಂದ ಬರುವ ಆದಾಯ ದೇವಸ್ಥಾನಕ್ಕೆ ಸೇರಬೇಕು, ದೇವರ ಹೆಸರಿನಲ್ಲಿ ಖರೀದಿಸಿರುವ ಎಲ್ಲ ಜಮೀನು ಕೂಡ ದೇವರ ಹೆಸರಿನಲ್ಲಿ ಆಗಬೇಕೆಂಬ ಉದ್ದೇಶದಿಂದ ನ.11ರಿಂದ ದೇವಳದ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ. ಸರಕಾರ ನಮ್ಮ ಬೇಡಿಕೆಯನ್ನು ಮನ್ನಿಸಿ, ತನಿಖೆ ನಡೆಸಿ ದೇವರ, ಭಕ್ತರ ಹೆಸರಿನಲ್ಲಿ ಖರೀದಿಸಿದ ಭೂಮಿ ದೇವರ ಹೆಸರಿನಲ್ಲಿ ಆಗಬೇಕೆಂದು ಹೋರಾಟ ಹಮ್ಮಿಕೊಂಡಿದ್ದೇವೆ. ಎಲ್ಲ ಭಕ್ತರು ಈ ಹೋರಾಟಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ಶಬರಾಯ ತಿಳಿಸಿದರು.


ಟ್ರಸ್ಟ್ ಆದಾಯ, ಖರ್ಚು ತನಿಖೆಯಾಗಲಿ:
ವಾಸುದೇವ ಶಬರಾಯ ಹೆಸರಿನಲ್ಲಿದ್ದ ಜಮೀನು ಈಗ ಟ್ರಸ್ಟ್ ಹೆಸರಿನಲ್ಲಿದೆ. ರಾಘವ ಕೊಲ್ಲಾಜೆಯವರ ಹೆಸರಿನಲ್ಲಿದ್ದ ಜಮೀನು ಪುತ್ತೂರಿನ ವಿದ್ಯಾಸಂಸ್ಥೆಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ವಿಶ್ವನಾಥ ಕೆ. ಅವರ ಹೆಸರಿನಲ್ಲಿರುವ ಜಮೀನನ್ನು ದೇವಸ್ಥಾನದ ಹೆಸರಿಗೆ ಮಾಡಿಕೊಡಲು ಅವರು ಸಿದ್ಧರಿದ್ದಾರೆ. ಈ ಕುರಿತ ಪ್ರಕ್ರಿಯೆಗಳು ನಡೆಯುತ್ತಿವೆ. ಒಟ್ಟು ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂಬಂಧಪಟ್ಟ ಎಲ್ಲ ಜಮೀನು ದೇವಸ್ಥಾನದ ಹೆಸರಿಗೇ ಆಗಬೇಕು. ಖಾಸಗಿ ಟ್ರಸ್ಟ್‌ನ ಆದಾಯ, ಖರ್ಚು ವೆಚ್ಚಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸುಬ್ರಹ್ಮಣ್ಯ ಶಬರಾಯ ಆಗ್ರಹಿಸಿದರು.‌


ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಪ್ರಶಾಂತ ರೈ ಗೋಳಿತೊಟ್ಟು, ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್, ಕೋಶಾಽಕಾರಿ ವಿಶ್ವನಾಥ ಕೊಲ್ಲಾಜೆ, ಸದಸ್ಯ ಶ್ರೀವತ್ಸ ಉಪಸ್ಥಿತರಿದ್ದರು.

ಗಿಫ್ಟ್ ಡೀಡ್ ಮಾಡಿದ್ದ ಜಾಗವನ್ನು ಹಿಂತಿರುಗಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ
ರಾಘವ ಕೊಲ್ಲಾಜೆಯವರು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದ ಜಮೀನನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ರದ್ದುಪಡಿಸಿದೆ. ಈ ಕುರಿತು ವಿದ್ಯಾವರ್ಧಕ ಸಂಘ ಅಧಿಕೃತ ಹೇಳಿಕೆ ನೀಡಿದೆ. ಪುತ್ತೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) 110ನೇ ವರ್ಷಕ್ಕೆ ಕಾಲಿಡುತ್ತಿದೆ. ಜಿಲ್ಲೆಯ ಹಿರಿಯರು 1915ರಲ್ಲಿ ಪ್ರಾರಂಭಿಸಿದ ಈ ನೋಂದಾಯಿತ ಸೊಸೈಟಿಯು ಪ್ರಥಮವಾಗಿ 1915ರಲ್ಲಿ ಪುತ್ತೂರಿನ ಬೋರ್ಡ್ ಹೈಸ್ಕೂಲ್‌ನಲ್ಲಿ ಸ್ಥಾಪಿಸಿ, ಹೈಸ್ಕೂಲ್ ಶಿಕ್ಷಣ ಪಡೆಯಲು ಮಂಗಳೂರಿಗೆ ತೆರಳಬೇಕಾಗಿದ್ದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೈಸ್ಕೂಲ್ ಶಿಕ್ಷಣವನ್ನು ಪಡೆಯಲು ವ್ಯವಸ್ಥೆ ಮಾಡಿತ್ತು. 1965ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜು ಆರಂಭಿಸಿತ್ತು. ನಂತರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ, ಬೆಳ್ತಂಗಡಿ ಹಾಗೂ ಕೇರಳದ ಕಾಸರಗೋಡಿನ ಪೆರ್ಲ ಸಹಿತ ಒಟ್ಟು 89ಕ್ಕೂ ಅಧಿಕ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ, ಗುಣಮಟ್ಟದ -ಸಂಸ್ಕಾರಯುತ ಶಿಕ್ಷಣಕ್ಕೆ ಸರ್ವ ಪ್ರಯತ್ನ ಮಾಡುತ್ತಿದೆ. ನೋಂದಾಯಿತ ಸೊಸೈಟಿಯಾಗಿ ಸರಕಾರದ ನಿಯಮ ಹಾಗೂ ಸೊಸೈಟಿಯ ಉಪ ನಿಬಂಧನೆಗಳನ್ವಯ ಕಾರ್ಯನಿರ್ವಹಿಸುತ್ತಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘವು ಬೆಳ್ತಂಗಡಿಯ ಗ್ರಾಮೀಣ ಪ್ರದೇಶ ಪಟ್ಟೂರು, ಮುಂಡಾಜೆ ಹಾಗೂ ಸುಲ್ಕೇರಿಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ತೆರೆದಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕೊಕ್ಕಡ ಪರಿಸರದ ನಾಗರಿಕರ ಒತ್ತಾಸೆ ಮತ್ತು ವಿನಂತಿಯಂತೆ ಈ ಭಾಗದಲ್ಲಿ ಹೊಸತಾಗಿ ಶಿಕ್ಷಣ ಸಂಸ್ಥೆ ತೆರೆಯಲು ಸಂಘವು ಯೋಜನೆ ಮಾಡಿತ್ತು. ಆ ಸಮಯದಲ್ಲಿ ಕೊಕ್ಕಡದ ಹಿರಿಯರು/ ಗೌರವಾನ್ವಿತರು/ ಶಿಕ್ಷಣ ಪ್ರೇಮಿಗಳು/ ಸಮಾಜ ಸೇವಕರಾದ ರಾಘವ ಅವರು ಅವರ ಸ್ವಂತ ಸಂಪೂರ್ಣ ಹಕ್ಕಿನ ನೋಂದಾಯಿತ ಕ್ರಯಚೀಟು ಪ್ರಕಾರ ಖರೀದಿಸಿದ ಜಮೀನನ್ನು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ದಾನವಾಗಿ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ರಾಘವ ಅವರ ಹಕ್ಕಿನ ಕೊಕ್ಕಡ ಗ್ರಾಮದ ಜಮೀನನ್ನು ಸ್ವ ಇಚ್ಛೆಯಿಂದ ಸೆಪ್ಟೆಂಬರ್ 17ರಂದು ಬೆಳ್ತಂಗಡಿ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ನೋಂದಣಿಯಾದ ದಾನಪತ್ರ ದಸ್ತಾವೇಜು ಸಂಖ್ಯೆ 2818/204-25ರ ದಾಖಲೆ ಪ್ರಕಾರ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ದಾನವಾಗಿ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ದಾನಪತ್ರವು ಸರಿ ಇಲ್ಲವೆಂದು ಹಲವು ಸ್ಥಾಪಿತ ಹಿತಾಸಕ್ತಿಗಳು, ಸಮಾಜ ವಿರೋಧಿ ವ್ಯಕ್ತಿಗಳು ದುರುದ್ದೇಶದಿಂದ ಮಾಡುತ್ತಿರುವ ಅಪಪ್ರಚಾರಗಳಿಂದ ನೊಂದು, ವಿವೇಕಾನಂದ ವಿದ್ಯಾವರ್ಧಕ ಸಂಘವು ದಾನಪತ್ರವನ್ನು ನವೆಂಬರ್ 4ರಂದು ರದ್ದುಪಡಿಸಿದೆ. ಸದ್ರಿ ಆಸ್ತಿಯ ಹಕ್ಕುಗಳು ರಾಘವರಿಗೆ ಹಿಂತಿರುಗಿಸಲಾಗಿದೆ ಎಂದು ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ
ಡಾ| ಕೆ.ಯಂ.ಕೃಷ್ಣ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here