ಪುತ್ತೂರು: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2024ರ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿದಂತೆ ಪಂಚಾಯತ್ನ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಆಲಂಕಾರು ಗ್ರಾಮ ಪಂಚಾಯತ್ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿದೆ. ಆಲಂಕಾರು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯ ಮನೆಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ, ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ. ಅಲ್ಲದೆ ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂ ಆರ್ ಸ್ಕ್ಯಾನ್ ಅಳವಡಿಸಿಕೊಂಡಿದೆ. ಈ ಎಲ್ಲಾ ಕಾರ್ಯಕ್ರಮ ಗಳನ್ನು ಅನುಷ್ಟಾನಿಸಿದ ಬಾಬ್ತು 2ನೇ ಬಾರಿಗೆ 2023-24ನೇ ಸಾಲಿನಲ್ಲಿ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಶಿವರಾಮ ಪ್ರಶಸ್ತಿಗೆ ಆಯ್ಕೆಗೊಂಡಿರುತ್ತದೆ.
ಅದಲ್ಲದೆ ಈ ಮೊದಲು 2014-15 ನೇ ಸಾಲಿನಲ್ಲಿ 100 % ತೆರಿಗೆ ಸಂಗ್ರಹಣೆ ಗೆ ಶಿವರಾಮ ಪ್ರಶಸ್ತಿ, 2021-2022 ಸಾಲಿನಲ್ಲಿ ಅಮೃತ ಗ್ರಾಮ ಪಂಚಾಯತ್ ಪ್ರಶಸ್ತಿ ಮತ್ತು 2021-22ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಆಲಂಕಾರು ಗ್ರಾಮ ಪಂಚಾಯತ್ ತನ್ನ ಮುಡಿಗೇರಿಸಿಕೊಂಡಿತ್ತು.
ನ.10: ಪ್ರಶಸ್ತಿ ಪ್ರದಾನ
ನ.10ರಂದು ಕೋಟತಟ್ಟುವಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.