ಪುತ್ತೂರು: ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2024ರ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಸಮಗ್ರ ಆಡಳಿತ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ ಆರ್ಯಾಪು ಹಾಗೂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಆಗಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್, ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್ ಆಯ್ಕೆಯಾಗಿವೆ.
ಆರ್ಯಾಪು ಗ್ರಾ.ಪಂ:
ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿದಂತೆ ಪಂಚಾಯತ್ನ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಆರ್ಯಾಪು ಗ್ರಾಮ ಪಂಚಾಯತ್ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿದೆ. ಆರ್ಯಾಪು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯ ಮನೆಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ, ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ. ಅಲ್ಲದೆ ವಿನೂತನ ಚಟುವಟಿಕೆಗಳಾದ ಗ್ರಾ.ಪಂನ ಕುಡಿಯುವ ನೀರಿನ ಘಟಕಗಳಿಗೆ ಸೋಲಾರ್ ಅಳವಡಿಕೆ, ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ನಿಯಂತ್ರಣಕ್ಕೆ ಮೊಬೈಲ್ ತಂತ್ರಾಂಶ ಬಳಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂ ಆರ್ ಸ್ಕ್ಯಾನ್ ಅಳವಡಿಸಿಕೊಂಡಿದೆ. 2009ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರವನ್ನು, 2022ರಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಆರ್ಯಾಪು ಗ್ರಾಮ ಪಂಚಾಯತ್ ತನ್ನ ಮುಡಿಗೇರಿಸಿಕೊಂಡಿತ್ತು.
ಕೋಡಿಂಬಾಡಿ ಗ್ರಾ.ಪಂ:
ತೆರಿಗೆ ವಸೂಲಿ, ವಿದ್ಯುತ್ ಮತ್ತು ಸೋಲಾರ್ ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ನಿರ್ವಹಣೆ, ಘನತ್ಯಾಜ್ಯ ವಾಹನಕ್ಕೆ ಮಹಿಳಾ ಚಾಲಕಿ ಹಾಗೂ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಣೆ, ಸಾಮಾನ್ಯ ಸಭೆ, ವಾರ್ಡ್ಸಭೆ, ಗ್ರಾಮಸಭೆ, ಮಕ್ಕಳ ಗ್ರಾಮಸಭೆ ಹಾಗೂ ಇತರ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಲಾಗಿದೆ. ವಿಶೇಷ ಚೇತನರಿಗೆ ಮತ್ತು ಪ.ಜಾತಿ ಪ.ಪಂಗಡದ ಅನುದಾನ ಸಂಪೂರ್ಣ ಬಳಕೆ, ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ವಿದ್ಯುತ್ ಬಿಲ್ಲು ಶೇ.100 ಪಾವತಿ ಮಾಡಿ ಉಳಿಕೆ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗೆ ಬಳಕೆ, ವೈಯಕ್ತಿಕ ಇಂಗು ಗುಂಡಿ ರಚನೆ, ಶಾಲೆಗಳಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ರಚನೆ, ಶಾಲೆಗೆ ಕಂಪೌಂಡು ರಚನೆ, ಸೋಲಾರ್ ಬೀದಿ ದೀಪ ಹಾಗೂ ಎಲ್.ಇ.ಡಿ ವಿದ್ಯುತ್ ಬಲ್ಬುಗಳ ಅಳವಡಿಕೆ, ಪ.ಜಾತಿ ಪ.ಪಂಗಡ ಕಾಲೋನಿಗಳಿಗೆ ದಾರಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ಸಾಫ್ಟ್ವೇರ್, ತೆರಿಗೆ ವಸೂಲಿಗೆ ಸ್ಕ್ಯಾನರ್ ಅಳವಡಿಕೆ, ಆರೋಗ್ಯ ಅಮೃತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಅಗ್ನಿನಿರೋಧಕ ಸಾಧನವನ್ನು ಕಛೇರಿ, ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ. ಅರಿವು ಕೇಂದ್ರದ ಡಿಜಿಟಲೀಕರಣ ಮತ್ತು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಕೋಡಿಂಬಾಡಿ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸುಗೊಂಡಿದ್ದು ಇದೀಗ ಡಾ| ಶಿವರಾಮ ಕಾರಂತ ಪ್ರಶಸ್ತಿಗೂ ಆಯ್ಕೆಯಾಗಿದೆ.
ಆಲಂಕಾರು ಗ್ರಾ.ಪಂ:
ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿದಂತೆ ಪಂಚಾಯತ್ನ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಆಲಂಕಾರು ಗ್ರಾಮ ಪಂಚಾಯತ್ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿದೆ. ಆಲಂಕಾರು ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯ ಮನೆಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಸೋಲಾರ್ ಬೀದಿ ದೀಪಗಳ ಅಳವಡಿಕೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ವಿಲೇವಾರಿಯ ಸಮರ್ಪಕ ನಿರ್ವಹಣೆ, ಗ್ರಾಮ ಸಭೆ, ವಾರ್ಡ್ಸಭೆ, ಸಾಮಾನ್ಯ ಸಭೆ ಹಾಗೂ ಇತರ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿರುತ್ತದೆ. ಯುವಜನ ಮತ್ತು ಕ್ರೀಡೆಗೆ ಅನುದಾನ ಬಳಕೆ, ವಿಶೇಷ ಚೇತನರಿಗೆ ಮೀಸಲು ಅನುದಾನದ ಸಂಪೂರ್ಣ ಬಳಕೆ, ಪ.ಜಾತಿ, ಪ. ಪಂಗಡದ ಅನುದಾನ ಸಂಪೂರ್ಣ ಬಳಕೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಎಲ್ಲಾ ಮನೆಗಳಿಗೆ ಶೌಚಾಲಯ ಹಾಗೂ ತ್ಯಾಜ್ಯ ನೀರು ನಿರ್ವಹಣೆಗೆ ಇಂಗುಗುಂಡಿ ಅಳವಡಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದೆ. ಅಲ್ಲದೆ ಬೀದಿ ದೀಪಗಳ ವಿದ್ಯುತ್ ಉಳಿತಾಯಕ್ಕೆ ಟೈಮರ್ ಅಳವಡಿಕೆ, ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ತಂತ್ರಾಂಶ ಬಳಕೆ ಹಾಗೂ ತೆರಿಗೆ ವಸೂಲಿಗೆ ಕ್ಯೂ ಆರ್ ಸ್ಕ್ಯಾನ್ ಅಳವಡಿಸಿಕೊಂಡಿದೆ. ಈ ಎಲ್ಲಾ ಕಾರ್ಯಕ್ರಮ ಗಳನ್ನು ಅನುಷ್ಟಾನಿಸಿದ ಬಾಬ್ತು 2ನೇ ಬಾರಿಗೆ 2023-24ನೇ ಸಾಲಿನಲ್ಲಿ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಶಿವರಾಮ ಪ್ರಶಸ್ತಿಗೆ ಆಯ್ಕೆಗೊಂಡಿರುತ್ತದೆ.
ಅದಲ್ಲದೆ ಈ ಮೊದಲು 2014-15 ನೇ ಸಾಲಿನಲ್ಲಿ 100 % ತೆರಿಗೆ ಸಂಗ್ರಹಣೆ ಗೆ ಶಿವರಾಮ ಪ್ರಶಸ್ತಿ, 2021-2022 ಸಾಲಿನಲ್ಲಿ ಅಮೃತ ಗ್ರಾಮ ಪಂಚಾಯತ್ ಪ್ರಶಸ್ತಿ ಮತ್ತು 2021-22ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಆಲಂಕಾರು ಗ್ರಾಮ ಪಂಚಾಯತ್ ತನ್ನ ಮುಡಿಗೇರಿಸಿಕೊಂಡಿತ್ತು.
ನ.10: ಪ್ರಶಸ್ತಿ ಪ್ರದಾನ
ನ.10ರಂದು ಕೋಟತಟ್ಟುವಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.