ಆಧುನಿಕ ಶಿಕ್ಷಣದೊಂದಿಗೆ ಧರ್ಮದ ಜ್ಞಾನವೂ ಅಗತ್ಯ : ಬಾಲಚಂದ್ರ ನಟ್ಟೋಜ
ಪುತ್ತೂರು: ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮದ ಜ್ಞಾನವೂ ಸಿಕ್ಕಿದಾಗ ಶಿಕ್ಷಣ ವ್ಯವಸ್ಥೆಗೆ ನ್ಯಾಯ ಕೊಟ್ಟಂತಾಗುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರದಂತಹ ವಿಷಯಗಳ ಜತೆಗೆ ಧರ್ಮ ಶಿಕ್ಷಣವನ್ನೂ ಕೊಟ್ಟಾಗ ನಿಜವಾದ ಶಿಕ್ಷಣ ಸಾಕಾರಗೊಳ್ಳುತ್ತದೆ. ಧರ್ಮದ ಜೊತೆಗೆ ಜಾಗೃತಿಯನ್ನೂ ಮೂಡಿಸುವುದು ಅಗತ್ಯ ಎಂದು ಪುಣೆಯ ದೀಪಕ್ ಫರ್ಟಿಲೈಝರ್ಸ್ ಆಂಡ್ ಕೆಮಿಕಲ್ಸ್‌ನ ವಿಶ್ರಾಂತ ಜನರಲ್ ಮ್ಯಾನೇಜರ್ ಬಾಲಚಂದ್ರ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆರಂಭಿಸಲಾದ ಧಾರ್ಮಿಕ ಶಿಕ್ಷಣ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಪರಪೀಡನೆ ಮಾಡದೆ ಪರೋಪಕಾರ ಮಾಡುತ್ತಾ ಮುಕ್ತಿಯತ್ತ ಸಾಗುವ ಜೀವನ ಮಾರ್ಗವೇ ಧರ್ಮ. ನಮ್ಮ ಹಿರಿಯರು ತೋರಿಸಿದ ದಾರಿಯಂತೆ ನಡೆಯುವುದನ್ನು ಬಿಟ್ಟು ಕೇವಲ ಯಂತ್ರದಂತೆ ಜೀವನ ಸಾಗಿಸಬಾರದು. ಸನಾತನ ಧರ್ಮದಂತೆ ನಡೆದು ಒಳಿತು ಕೆಡುಕುಗಳ ಬಗ್ಗೆ ಯೋಚಿಸಿ ಬಾಳುವ ಕ್ರಮ ಕಲಿಯಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವು ದೊರೆತಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಿಂದುತ್ವ, ಭಗವದ್ಗೀತೆಯಂತಹ ವಿಚಾರಗಳ ಬಗೆಗೆ ಜ್ಞಾನ ದೊರಕುತ್ತದೆ ಎಂದರು.
ವಿದ್ಯಾರ್ಥಿನಿಯರಾದ ಧರಣಿ ಮತ್ತು ಸುಮೇಧಾ ಪ್ರಾರ್ಥಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ ಧಾರ್ಮಿಕ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.