ಪುತ್ತೂರು: ಅಂತರ್ರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಲಯನ್ಸ್ ಜಿಲ್ಲೆ 317-ಡಿ, ಲಯನ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನ.17ರಂದು ಉದ್ಘಾಟನೆಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರು ದೀಪ ಬೆಳಗಿಸುವ ಮೂಲಕ ಈ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನೇತ್ರ ತಜ್ಞೆ ಡಾ. ವೈಶಾಖ, ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದಾಗಿರುವ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು ಇದಕ್ಕೆ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷ ಸುಧೇಶ್ ಅವರು ಮಾತನಾಡಿ, ಲಯನ್ಸ್ ಸಂಸ್ಥೆ ಈ ಹಿಂದಿನಿಂದಲೂ ಕಣ್ಣಿನ ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಿದೆ. ದೇಶ ಕಂಡ ಅಪ್ರತಿಮ ನೇತ್ರ ತಜ್ಞ ಡಾ. ಮೋದಿ ಅವರು ಪುತ್ತೂರಿನಲ್ಲೂ ಸಹ ಹಲವಾರು ನೇತ್ರ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಎಂಬುದನ್ನು ನೆನಪಿಸಿಕೊಂಡು, ಇಂದಿನ ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷೆ ಪ್ರೇಮಲತಾ ರಾವ್ ಮಾತನಾಡಿ, ಇಲ್ಲಿನವರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು, ಮುಂದೆಯೂ ನಮ್ಮ ಸಮಾಜಮುಖಿ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಮುಖ್ಯಸ್ಥ ಟಿ.ಸದಾನಂದ ಶೆಟ್ಟಿ ಅವರು ಪುತ್ತೂರಿನಲ್ಲಿ ಹಲವಾರು ವರ್ಷಗಳಿಂದ ಲಯನ್ಸ್ ಕ್ಲಬ್ ಉಚಿತ ನೇತ್ರ ತಪಾಸಣೆ ನಡೆಸಿಕೊಂಡು ಬರುತ್ತಿದ್ದು, ಡಾ. ಮೋದಿ ಅವರು ಪುತ್ತೂರಿನಲ್ಲಿ ನಡೆಸುತ್ತಿದ್ದ ನೇತ್ರ ತಪಾಸಣೆ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಈ ಭಾಗದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದುದನ್ನು ನೆನಪಿಸಿಕೊಂಡು, ಇದೀಗ ಜ|ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ವತಿಯಿಂದ ನಡೆಸಿಕೊಂಡು ಬರುತ್ತಿರುವ ಈ ಶಿಬಿರದ ಕಾರ್ಯವಿಧಾನಗಳ ಮಾಹಿತಿಯನ್ನು ಸಭೆಗೆ ನೀಡಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ಅರವಿಂದ ಭಗವಾನ್ ದಾಸ್ ರೈ, ಜಿಲ್ಲಾ ಕ್ಯಾಂಪ್ ಕೋ-ಆರ್ಡಿನೇಟರ್ ಟಿ. ಸದಾನಂದ ಶೆಟ್ಟಿ, ಟಿ. ಸದಾಶಿವ, ವೈದ್ಯರಾಗಿರುವ ಡಾ. ಪ್ರಿಯಾಂಕ, ಡಾ ಅಂಕಿತಾ ಮತ್ತು ಡಾ. ಶಫಾ ಉಪಸ್ಥಿತರಿದ್ದರು.
ನಯನಾ ರೈ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಟಿ. ಸದಾನಂದ ಶೆಟ್ಟಿ ಸ್ವಾಗತಿಸಿದರು. ಅರವಿಂದ ಭಗವಾನ್ ದಾಸ್ ರೈ ವಂದಿಸಿದರು. ಆನಂದ್ ರೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಲಯನ್ಸ್ ಸದಸ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಈ ಶಿಬಿರದಲ್ಲಿ ನೇತ್ರ ತಪಾಸಣೆಗಾಗಿ ಒಟ್ಟು 98 ಮಂದಿ ಹೆಸರು ನೋಂದಾಯಿಸಿದ್ದರು. ಶಸ್ತ್ರಚಿಕಿತ್ಸೆಗೆ 24 ಮಂದಿ ಆಯ್ಕೆಗೊಂಡಿದ್ದಾರೆ. 48 ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು.