ಪುತ್ತೂರು: ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ನ.17ರಂದು ಸಂಜೆ ಪೆರಮೊಗರು ಮುರಿಯಾಜೆಯಲ್ಲಿ ನಡೆದಿದೆ.
ಪೆರಮೊಗರು ಮುರಿಯಾಜೆ ನಿವಾಸಿ ಚಂದ್ರಹಾಸ ಮತ್ತು ಶುಭಾಸಿನಿ ದಂಪತಿ ಪುತ್ರ ಕಲ್ಲಡ್ಕ ಶ್ರೀರಾಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸುಭೋದ್ (16ವ) ಮೃತಪಟ್ಟವರು. ಸಂಜೆ ಮನೆಯೊಳಗೆ ತಾಯಿ ಮತ್ತು ಮೂವರು ಮಕ್ಕಳಿದ್ದು, ಸುಭೋದ್ ತನ್ನ ಸಹೋದರರೊಂದಿಗೆ ಆಟವಾಡುತ್ತಿದ್ದ ಸಂದರ್ಭ ಸಿಡಿಲು ಬಡಿದಿದೆ. ಸಿಡಿಲಿನ ಆಘಾತಕ್ಕೆ ಅಸ್ವಸ್ಥಗೊಂಡ ಸುಭೋದ್ ಅವರನ್ನು ತಕ್ಷಣ ಸ್ಥಳೀಯ ಸಂಬಂಧಿಕರು ಪುತ್ತೂರು ಆಸ್ಪತ್ರೆಗೆ ಕರೆ ತರುವಾಗಲೇ ಸುಭೋದ್ ಮೃತಪಟ್ಟಿದ್ದರು.
ಮೃತರು ತಂದೆ ಚಂದ್ರಹಾಸ, ತಾಯಿ ಶುಭಾಸಿನಿ ಹಾಗೂ ಇಬ್ಬರು ಅವಳಿ ಸಹೋದರರನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ. ವಿಟ್ಲ ಕಂದಾಯ ನಿರೀಕ್ಷಕ ಪ್ರಶಾಂತ್ ಶೆಟ್ಟಿ, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ವಾಲ್ತಾಜೆ, ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಸಹಿತ ಹಲವಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ದಾರಿ ಮಧ್ಯೆ ರಸ್ತೆಯಲ್ಲಿ ಕೃತಕ ನೆರೆಯಿಂದ ಬದಲಿ ವಾಹನ: ಸಿಡಿಲಿನಿಂದ ಅಘಾತಗೊಂಡ ಸುಭೋದ್ ಅವರನ್ನು ಆಸ್ಪತ್ರೆಗೆ ಕರೆ ತರುತ್ತಿದ್ದ ಆಟೋ ರಿಕ್ಷಾ ದಾರಿ ಮಧ್ಯೆ ರಸ್ತೆಯಲ್ಲಿ ತುಂಬಿದ ಮಳೆ ನೀರಿನಿಂದಾಗಿ ಕೆಟ್ಟು ನಿಂತಿತು. ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ನಿಲ್ಲಿಸಿ ಸುಭೋದ್ ಅವರನ್ನು ಆಸ್ಪತ್ರೆಗೆ ಕರೆತರಲಾಯಿತೆಂದು ಆಸ್ಪತ್ರೆಯಲ್ಲಿದ್ದ ಸಂಬಂಧಿಕರು ಮಾಹಿತಿ ನೀಡಿದ್ದಾರೆ.