ಬಜೆಟ್ ಮಂಡನೆಯಾಗಿ 8 ತಿಂಗಳಾದರೂ ರೈತರಿಗೆ ಸಾಲ ನೀಡದೆ ಸರಕಾರದಿಂದ ರೈತರಿಗೆ ವಂಚನೆ – ಸಂಜೀವ ಮಠಂದೂರು

0

ಪುತ್ತೂರು: ಸಿದ್ದರಾಮಯ್ಯ ಸರಕಾರ 2024-25ನೇ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಅಲ್ಪಾವಧಿ ಬಡ್ಡಿ ರಹಿತ ಅಲ್ಪಾವಧಿ ಸಾಲವನ್ನು ರೂ.3 ಲಕ್ಷದಿಂದ ರೂ.5ಲಕ್ಷ ರೂಗಳಿಗೆ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಶೇ.3ರ ಬಡ್ಡಿ ದರದಲ್ಲಿ ರೂ.10 ಲಕ್ಷದಿಂದ 15 ಲಕ್ಷಕ್ಕೆ ಏರಿಸುವ ಕುರಿತು ಘೋಷಣೆ ಮಾಡಿದ್ದರು. ಆದರೆ ಬಜೆಟ್ ಮಂಡನೆಯಾಗಿ 8 ತಿಂಗಳದರೂ ಇಲ್ಲಿನ ತನಕ ಅನುಷ್ಠಾನ ಆಗಿಲ್ಲ. ಈ ಸರಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದಕ್ಕೆ ಇದೊಂದು ಜ್ವಲಂತ ಕಾರಣ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಬಜೆಟ್ ಮಂಡನೆ ಮಾಡುವಾಗ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನಲ್ಲಿ 27ಸಾವಿರ ಕೋಟಿ ರೂ.ದಾಖಲೆ ಸಾಲ ನೀಡುವ ಗುರಿ ಹೊಂದಲಾಗಿದೆ. ನಮ್ಮ ಸರಕಾರ ನುಡಿದಂತೆ ನಡೆದ ಸರಕಾರ. ಬಜೆಟ್‌ನ ಎಲ್ಲಾ ಘೋಷಣೆಗಳನ್ನು ಅನುಷ್ಠಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರ ಘೋಷಣೆಗೆ ತಕ್ಕಂತೆ ಮೇ.27ಕ್ಕೆ ಬಜೆಟ್‌ನ ನಿರ್ಣಯವನ್ನು ಸಹಕಾರಿ ಸಂಘಗಳ ನಿಬಂಧಕರಿಗೆ ಕಳುಹಿಸಿಕೊಡುತ್ತಾರೆ. ಅದೇ ಸಹಕಾರ ಸಂಘಗಳ ನಿಬಂಧಕರು ಆ.1ಕ್ಕೆ ಸಹಕಾರ ಸಂಘಗಳಿಗೆ ಆದೇಶ ಮಾಡುತ್ತಾರೆ. ಆದರೆ ಇವತ್ತಿನ ತನಕ ಶೇ.3 ಬಡ್ಡಿಯಲ್ಲಿ ರೂ. 15 ಲಕ್ಷ ತನಕ ಸಾಲ ಕೊಡುವಂತೆ ಮತ್ತು ಬಡ್ಡಿ ರತಹಿ ಗರಿಷ್ಠ ರೂ. 5 ಲಕ್ಷ ಸಾಲ ನೀಡುವ ಕುರಿತು ಅನುಷ್ಠಾನ ಆಗಿಲ್ಲ ಎಂದವರು ಹೇಳಿದರು. ಬಜೆಟ್ ಮಂಡನೆಯಾಗಿ 8 ತಿಂಗಳಲ್ಲಿ ಕವಡೆಕಿಮ್ಮತ್ತಿನ ಕಾಸು ಕೂಡಾ ಈ ಸರಕಾರದ ಅದೇಶಕ್ಕಿಲ್ಲ. ಈ ಕುರಿತು ಇದೀಗ ಪ್ರಶ್ನಿಸಿದರೆ ನಬಾರ್ಡ್‌ನವರು ದುಡ್ಡು ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸರಕಾರ ನಬಾರ್ಡ್‌ನಲ್ಲಿ ಕೇಳಿ ಈ ಸಾಲ ಘೋಷಣೆ ಮಾಡಿದ್ದಾ?, ನಬಾರ್ಡ್‌ನಿಂದ ಕೇಳದೆ ಯಾಕೆ ಈ ಆದೇಶ ಮಾಡಬೇಕಾಗಿತ್ತು. ರೈತರನ್ನು ಯಾಕೆ ರೀತಿಯಾಗಿ ವಂಚನೆ ಮಾಡಬೇಕಾಗಿತ್ತು. ರೈತರ ಬಗ್ಗೆ ಈ ಸರಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದಕ್ಕೆ ಇದೊಂದು ಜ್ವಲಂತ ಕಾರಣ. ಈ ರೀತಿಯಲ್ಲಿ ಕರ್ನಾಟಕದಲ್ಲಿ ರೈತರನ್ನು ಶೋಷಣೆ ಮಾಡುವ ಕೆಲಸ ನೇರವಾಗಿ ಸರಕಾರ ಮಾಡುತ್ತಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪುತ್ತೂರು ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here