ಪುತ್ತೂರು: ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳವನ್ನು ಮೈಸೂರು, ಮಡಿಕೇರಿ ಭಾಗದಿಂದ ಕಡಿಮೆ ಅವಧಿಯಲ್ಲಿ ಸಂಪರ್ಕಿಸುವ ಸವಣೂರು-ಪೆರುವಾಜೆ-ಬೆಳ್ಳಾರೆ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಯಲ್ಲಿನ ಕುಂಜಾಡಿಯಿಂದ ಕಾಪುಕಾಡು ತನಕದ ಸ್ಥಿತಿ ಹದಗೆಟ್ಟಿದ್ದು, 12.5 ಕೋ.ರೂ.ವೆಚ್ಚದ ಕಾಮಗಾರಿ ಕುಟುಂತ್ತಾ ಸಾಗಿದ್ದು ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗಿದೆ.
ಈ ಸೇತುವೆ ಸಂಪರ್ಕ ರಸ್ತೆ ವಾಹನ ಸವಾರರಿಗೆ ಅಪಾಯ..!
ಕುಂಜಾಡಿ ಬಳಿ 2.5 ಕೋ.ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಆರಂಭಗೊಂಡು ವರ್ಷ ಸಮೀಪಿಸುತ್ತಿದೆ. ಮಳೆಗಾಲದ ಕಾರಣದಿಂದ ತೋಡು ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅರ್ಧ ಕಾಮಗಾರಿ ಆಗಿದ್ದ ಹೊಸ ಸೇತುವೆಯಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಸೇತುವೆಯ ಎರಡು ದಿಕ್ಕಿನಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಜಲ್ಲಿ ಹಾಕಿದ್ದು ಇದೀಗ ಸಂಪೂರ್ಣ ಎದ್ದು ಹೋಗಿದೆ. ಇಳಿಜಾರಿನಲ್ಲಿ ಸೇತುವೆ ಇದ್ದು ಜಲ್ಲಿ ತುಂಬಿದ ರಸ್ತೆಯಲ್ಲಿ ಪ್ರಯಾಣ ಬಲು ಕಷ್ಟವಾಗಿದೆ.
ತಡೆಗೋಡೆ ಇಲ್ಲ
ಸೇತುವೆಯ ಒಂದು ಭಾಗದಲ್ಲಿ ತಡೆಗೋಡೆ ಅಪೂರ್ಣವಾಗಿದೆ. ಕೃಷಿ ತೋಟದ ಬದಿಯಲ್ಲಿ ಆಳೆತ್ತರದ ಕಂದಕ ನಿರ್ಮಿಸಿದ್ದು ಕಾಮಗಾರಿ ನಡೆಯದೇ ಕೆಲ ತಿಂಗಳುಗಳೇ ಕಳೆದಿದೆ. ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಮತ್ತು ಸೇತುವೆ ಇದಾಗಿದ್ದು ಈ ಹಿಂದೆ ಕಾಮಗಾರಿ ಆರಂಭಗೊಂಡ ಎರಡೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಲಾಗಿತ್ತು.
ಈಗ ಜಲ್ಲಿ ದಾಟಿ ಹೋಗುವ ಸವಾಲು
ಸುಮಾರು 10 ಕೋ.ರೂ.ವೆಚ್ಚದಲ್ಲಿ ಕುಂಜಾಡಿಯಿಂದ ಕಾಪುಕಾಡು ತನಕ ವಿಸ್ತರಿತ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಲಾಗಿತ್ತು. ಮಳೆಗಾಲದ ಮೊದಲು ಕನ್ನರ್ತ್‌ಮಜಲು, ಬೋಳಕುಮೇರು ಕ್ರಾಸ್, ಚಾಮುಂಡಿಮೂಲೆ, ಕಾಪು ಬಳಿ ರಸ್ತೆ ಅಗೆದು ಹಾಕಲಾಯಿತು. ಮಳೆಯ ಪರಿಣಾಮ ಇಲ್ಲಿ ವಾಹನ ದಾಟಿಸುವುವುದೇ ಸವಾರರ ಪಾಲಿಗೆ ಸವಾಲಾಯಿತು. ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತಾತ್ಕಾಲಿಕ ದುರಸ್ತಿ ನಡೆಸಲಾಯಿತು. ಆದರೂ ಸಮಸ್ಯೆಗೆ ಪೂರ್ತಿ ಮುಕ್ತಿ ಸಿಗಲಿಲ್ಲ. ಮಳೆ ಇಳಿದಿದೆ. ಈಗ ಜಲ್ಲಿ ದಾಟಿ ಹೋಗುವ ಸವಾಲು ಶುರುವಾಗಿದೆ.
ಮೂರು ವರ್ಷದ ಗೋಳು
ಸವಣೂರು-ಬೆಳ್ಳಾರ ತನಕ ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ಮತ್ತು ಸುಳ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದೆ. 2021 ಮಾರ್ಚ್‌ಲ್ಲಿ ಈ ಎರಡೂ ಉಪವಿಭಾಗ ವ್ಯಾಪ್ತಿಯಲ್ಲಿ 7 ಕಿ.ಮೀ. ರಸ್ತೆ ಒಟ್ಟು 7.5 ಕೋ.ರೂ. ವೆಚ್ಚದಲ್ಲಿ 5.5 ಮೀ.ಅಗಲದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಹಾಗೂ ಪುತ್ತೂರು ಉಪವಿಭಾಗಕ್ಕೆ ಸೇರಿರುವ ಕನ್ನಡಕುಮೇರಿನಿಂದ ಕಾಪುಕಾಡು ತನಕದ ವ್ತಾಪ್ತಿಯಲ್ಲಿ 4 ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಕನ್ನಡಕುಮೇರಿನಿಂದ ಬೊಬ್ಬರಕಾಡು ಚಡಾವಿನ ತನಕ ಡಾಮರು ಆಗಿದೆ. ಮುಕ್ಕೂರು-ಕಾಪುಕಾಡು ತನಕ ರಸ್ತೆಯ ಇಕ್ಕೆಲೆ ಅಗೆದು ಮೂರು ವರ್ಷ ಸಂದಿತ್ತು. ಕಳೆದ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಈ ರಸ್ತೆಯ ದುರಸ್ತಿಯನ್ನು ಮಾಡುವಂತೆ ಸಾರ್ವಜನಿಕರ ಒತ್ತಾಯವಾಗಿದೆ.