ಶಿಶಿಲ: ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕಾಡಾನೆ : ತಪ್ಪಿಸುವ ಭರದಲ್ಲಿ ಬಿದ್ದು ತಂದೆ, ಮಗನಿಗೆ ಗಾಯ

0

ನೆಲ್ಯಾಡಿ: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಕಾಡಾನೆ ಕಾಣಿಸಿಕೊಂಡು ತಪ್ಪಿಸುವ ಭರದಲ್ಲಿ ತಂದೆ, ಮಗ ಕಾಂಕ್ರಿಟ್ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಉಪ್ಪಿನಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯ ಶಿಶಿಲ ಗ್ರಾಮದ ಕಲ್ಲಾಜೆ ಎಂಬಲ್ಲಿ ನ.21ರಂದು ಬೆಳಿಗ್ಗೆ 8.45ರ ವೇಳೆಗೆ ನಡೆದಿದೆ.


ಕಲ್ಲಾಜೆ ನಿವಾಸಿ ವಸಂತ ಗೌಡ(46ವ.) ಹಾಗೂ ಅವರ ಮಗ ಅದ್ವಿತ್(8ವ.) ಗಾಯಗೊಂಡವರಾಗಿದ್ದಾರೆ. ವಸಂತ ಗೌಡ ಅವರು ತನ್ನ ಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ಲಾವ್ಯ ಹಾಗೂ ಮಗ 2ನೇ ತರಗತಿಯ ವಿದ್ಯಾರ್ಥಿ ಅದ್ವಿಕ್ ಅವರನ್ನು ಪೆರ್ಲ ಸರಕಾರಿ ಶಾಲೆಗೆ ಬಿಡಲೆಂದು ಬೆಳಿಗ್ಗೆ ಮನೆಯಿಂದ ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದಂತೆ ಕಾಡಿನ ಮಧ್ಯೆ ಹಾದು ಹೋಗುವ ಪೆರ್ಲ-ಓಟ್ಲ ಗರಡಿ ಶಿಶಿಲೇಶ್ವರ ದೇವಸ್ಥಾನ ರಸ್ತೆಯ ಕಲ್ಲಾಜೆ ಎಂಬಲ್ಲಿ ಹೆದ್ದಾರಿಯಲ್ಲಿಯೇ ಕಾಡಾನೆ ಕಾಣಿಸಿಕೊಂಡಿದೆ. ಸುಮಾರು 100 ಮೀ.ದೂರದಲ್ಲಿ ಕಾಡಾನೆಯನ್ನು ಗಮನಿಸಿದ ವಸಂತ ಗೌಡ ಅವರು ದಿಢೀರ್ ಆಗಿ ಬ್ರೇಕ್ ಹಾಕಿರುವುದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಮಗ, ಮಗಳನ್ನು ಹಿಡಿದುಕೊಂಡು ಕಾಂಕ್ರಿಟ್ ರಸ್ತೆಯಲ್ಲಿಯೇ ಓಡುವ ವೇಳೆ ವಸಂತ ಗೌಡ ಹಾಗೂ ಅದ್ವಿಕ್ ಅವರು ಕಾಂಕ್ರಿಟ್ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂವರು ತುಸು ಅಂತರದಲ್ಲೇ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ವಸಂತ ಗೌಡ ಹಾಗೂ ಅದ್ವಿಕ್ ಅವರ ಮೊಣಕಾಲಿಗೆ ಗಾಯವಾಗಿದ್ದು ಅರಸಿನಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.


ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ರಾಘವೇಂದ್ರ. ಶಿಬಾಜೆ ಉಪ ವಲಯಾರಣ್ಯಾಧಿಕಾರಿ ರಾಜೇಶ್, ಅರಣ್ಯ ಪಾಲಕ ಸುನಿಲ್ ನಾಯ್ಕ್, ಗಸ್ತು ಅರಣ್ಯ ಪಾಲಕ ಶಿವಾನಂದ, ಅರಣ್ಯ ವೀಕ್ಷಕರಾದ ಸತೀಶ್, ವಿನಯ್ ಕುಮಾರ್, ಶಿಬಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಸಿ.ಮ್ಯಾಥ್ಯು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹೆದ್ದಾರಿಯಲ್ಲಿ ಕಾಡಾನೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು ಓಡಾಟ ನಡೆಸಲು ಜನರು ಭಯಭೀತರಾಗಿದ್ದು ಆನೆ ಓಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೈಕ್ ಹಾನಿಗೊಳಿಸಿದ ಕಾಡಾನೆ:
ವಸಂತ ಗೌಡ ಅವರು ಬೈಕ್ ಪಲ್ಟಿಯಾಗುತ್ತಿದ್ದಂತೆ ಬೈಕ್ ಅಲ್ಲೇ ಬಿಟ್ಟು ಜೀವ ಭಯದಿಂದ ಮಕ್ಕಳನ್ನು ಹಿಡಿದುಕೊಂಡು ಓಡಿದ್ದಾರೆ. ಬಳಿಕ ಬೈಕ್ ಬಿದ್ದಲ್ಲಿ ಬಂದ ಕಾಡಾನೆ ಬೈಕ್ ಹಾನಿಗೊಳಿಸಿ ಸ್ವಲ್ಪ ಸಮಯದಲ್ಲಿ ಕಾಡಿನೊಳಗೆ ಹೋಗಿರುವುದಾಗಿ ವರದಿಯಾಗಿದೆ. ಸಂಜೆ ತನಕವೂ ಬೈಕ್ ಸ್ಥಳದಲ್ಲೇ ಇದ್ದು ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದ ಬಳಿಕ ತೆರವುಗೊಳಿಸಲಾಗಿದೆ.

LEAVE A REPLY

Please enter your comment!
Please enter your name here