ಒಳಮೊಗ್ರು ಗ್ರಾಪಂ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ವಿಶೇಷ ಗ್ರಾಮಸಭೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತು ಇದರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2025-26ನೇ ಸಾಲಿನ ಕಾರ್ಮಿಕರ ಆಯ-ವ್ಯಯ ತಯಾರಿಸಲು “ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ” ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನ.25ರಂದು ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಮುಂದಿನ ಆರ್ಥಿಕ ವರ್ಷದಲ್ಲಿ (2025-26ನೇ ಸಾಲಿನಲ್ಲಿ) ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು. ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಇಂಜಿನಿಯರ್ ಆಕಾಂಕ್ಷರವರು ಮಾಹಿತಿ ನೀಡುತ್ತಾ, ಗ್ರಾಮಸ್ಥರು ಉದ್ಯೋಗ ಖಾತರಿಯ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ತಮ್ಮ ಜಮೀನಿನಲ್ಲಿ ಮಲ್ಲಿಗೆ, ವೀಳ್ಯದೆಲೆ, ಗೇರು ಕೃಷಿ, ಡ್ರಾಗನ್ ಫ್ರುಟ್, ರಂಬುಟಾನ್ ಇತ್ಯಾದಿಗಳನ್ನು ಕೂಡ ಬೆಳೆಯಬಹುದು ಎಂದರು. ಬಾಳೆಯಲ್ಲಿ ಅಂಗಾಂಶ ಕೃಷಿ ಬಾಳೆಗೆ ಮಾತ್ರ ಅವಕಾಶವಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಬಹುವಾರ್ಷಿಕ ಬೆಳೆಗಳಿಗೆ ಮಾತ್ರ ಅವಕಾಶವಿದ್ದು ಕನಿಷ್ಠ 3 ವರ್ಷಗಳ ಬೆಳೆಯಾದರೂ ಆಗಿರಬೇಕು ಪ್ರಸ್ತುತ ಇದರ ಅವಧಿಯನ್ನು 5 ವರ್ಷಕ್ಕೆ ಏರಿಸಿದ್ದಾರೆ ಎಂದು ತಿಳಿಸಿದರು. ತೋಟಗಾರಿಕಾ ಬೆಳೆಗಳಿಗೆ ಅಳವಡಿಸಿದ ಬೋರ್ಡ್‌ನ ಹಣವನ್ನು ರೈತರೇ ಭರಿಸತಕ್ಕದ್ದಾಗಿದೆ ಎಂದ ಅವರು ಉದ್ಯೋಗ ಖಾತರಿ ಯೋಜನೆಯಲ್ಲಿ ಕೊರೆದ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದು ಮುಚ್ಚಬೇಡಿ ಈ ಬಗ್ಗೆ ಪಂಚಾಯತ್ ಗಮನಕ್ಕೆ ತನ್ನಿ ಎಂದರು. ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಲು ನ.30ರ ತನಕ ಅವಕಾಶವಿದೆ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆಕಾಂಕ್ಷರವರು ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಮಾಹಿತಿ ನೀಡುತ್ತಾ, ಸರಕಾರಕ್ಕೆ ಇನ್‌ಕಂ ಟ್ಯಾಕ್ಸ್ ಪಾವತಿ ಮಾಡುವವರು, ಶಾಲಾ ಮಕ್ಕಳು ಹಾಗೂ ಹೊರ ದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಉದ್ಯೋಗ ಚೀಟಿ ಮಾಡಿಸಲು ಅವಕಾಶವಿಲ್ಲ, ಇನ್ನು ಇತರರ ಉದ್ಯೋಗ ಚೀಟಿ ಪಡೆದುಕೊಂಡು ಕೆಲಸ ಮಾಡಿದ ಮೇಲೆ ಅವರ ಅಕೌಂಟ್‌ಗೆ ಹಣ ಬಂದು ಅವರು ಕೆಲಸ ಮಾಡಿಸಿದವರಿಗೆ ಕೊಡದಿದ್ದರೆ ಅದಕ್ಕೆ ಪಂಚಾಯತ್ ಜವಾಬ್ದಾರಿಯಲ್ಲ ಎಂಬ ವಿಷಯವನ್ನು ಈ ಸಂದರ್ಭದಲ್ಲಿ ತಿಳಿಸಿದರು.


ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಲತೀಫ್ ಕುಂಬ್ರ, ಸುಂದರಿ, ನಳಿನಾಕ್ಷಿ, ರೇಖಾ, ಶಾರದಾ, ಚಿತ್ರಾ ಹಾಗೂ ಉದ್ಯೋಗ ಖಾತರಿ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಲೋಕನಾಥ ಸಹಕರಿಸಿದ್ದರು.

ʼಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಎಂಬಂತೆ ಗ್ರಾಮದ ಪ್ರತಿಯೊಬ್ಬರು ಜಾಬ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ ತಮ್ಮ ಜಮೀನಿನಲ್ಲಿ ವೈಯುಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕಾಗಿ ಕೋರಿಕೆ. ನರೇಗಾ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಪಂಚಾಯತ್ ಅನ್ನು ಸಂಪರ್ಕಿಸಬಹುದಾಗಿದೆ.’
-ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here