ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲು: ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಡಳಿತಕ್ಕೆ ಒಳಪಟ್ಟ ಶ್ರೀ ರಾಮಕುಂಜೇಶ್ವರ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರ ಅಧೀನದಲ್ಲಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ, ಶ್ರೀ ರಾಮಕುಂಜೇಶ್ವರ ವಿದ್ಯಾಲಯ, ಶ್ರೀ ರಾಮಕುಂಜೇಶ್ವರ ವಸತಿ ನಿಲಯ ಇದರ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡ ವಿಶ್ವೇಶತೀರ್ಥ ಸೌಧ ಇದರ ಉದ್ಘಾಟನೆ ನ.28 ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ನೂತನ ಕಟ್ಟಡ ಉದ್ಘಾಟಿಸಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಮಾತೃಭೂಮಿ ಸ್ವರ್ಗಕ್ಕಿಂತ ಮಿಗಿಲು. ಆದ್ದರಿಂದ ಪರಿಸರವನ್ನು ಸ್ವರ್ಗಕ್ಕಿಂತ ಮಿಗಿಲು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಇದುವೇ ರಾಮ ರಾಜ್ಯ. ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು. ರಾಮನ ಬಂಟ ಹನುಮಂತನಂತೆ ಗುರುಗಳಾದ ಶ್ರೀ ವಿಶ್ವೇಶತೀರ್ಥರು ನೀಡಿದ ಜವಾಬ್ದಾರಿಯನ್ನು ಕೆ.ಸೇಸಪ್ಪ ರೈಯವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಲ್ಲಿನ ವಿದ್ಯಾಸಂಸ್ಥೆ ಉತ್ತಮ ವಿದ್ಯೆ, ಉತ್ತಮ ಸಂಸ್ಕೃತಿ ನೀಡುತ್ತೀವೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ನಿರ್ಲಿಪ್ತತೆಯ ಜೀವನ ನಮ್ಮದಾಗಬೇಕು, ಸಜ್ಜನರ ಜೊತೆ ಬೆಳೆಯಬೇಕು ಎಂದರು. ಮಂಗಳೂರಿನ ಲೆಕ್ಕ ಪರಿಶೋಧಕ ಗಣೇಶ್ ರಾವ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಇಹೆಚ್‌ಎಸ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ರಂಜನ್ ವಾಸುದೇವ ಕೆ., ಇಂಜಿನಿಯರ್ ಆಂಡ್ ಟೆಕ್ನಿಕಲ್ ಆರ್ಕಿಟೆಕ್ಟ್ ಬೆಂಗಳೂರು ಇಲ್ಲಿನ ಸೀನಿಯರ್ ಸೈಟ್ ರಿಲೆಯಬಿಲಿಟಿ ಆಶಿತ್ ಎ.ಎಸ್. ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು, 13 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಈಗ 1068 ವಿದ್ಯಾರ್ಥಿಗಳಿದ್ದಾರೆ. ವಸತಿ ನಿಲಯದಲ್ಲಿ ರಾಜ್ಯದ ಸುಮಾರು 20 ಜಿಲ್ಲೆಗಳ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆಗೆ ಪೂರಕವಾದ ವಾತಾವರಣ ಇದೆ. ವಿದ್ಯಾರ್ಥಿಗಳಿಗೆ ಎಲ್ಲಾ ಹಂತದಲ್ಲೂ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದೀಗ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶತೀರ್ಥ ಸೌಧ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಮಂಗಳೂರಿನ ನ್ಯಾಯವಾದಿ ಪ್ರೇಮನಾಥ ಶೆಟ್ಟಿ, ದಾನಿ ದಿನೇಶ್ ಶೆಟ್ಟಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್., ಸಂಚಾಲಕ ಟಿ ನಾರಾಯಣ ಭಟ್, ಸದಸ್ಯರಾದ ಮಾಧವ ಆಚಾರ್ಯ ಇಜ್ಜಾವು, ಲಿಂಗಪ್ಪ ಗೌಡ ಕಡೆಂಬ್ಯಾಲ್, ಹರಿನಾರಾಯಣ ಆಚಾರ್ಯ, ಸತೀಶ್ ಭಟ್, ಬಾಲಚಂದ್ರ ಮುಚ್ಚಿಂತಾಯ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರದೀಪ್ ಬಾಕಿಲ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್. ವಂದಿಸಿದರು. ಶಿಕ್ಷಕ ಹರೀಶ್ ಆಚಾರ್ಯ ನಿರೂಪಿಸಿದರು. ಆಡಳಿತ ಅಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ಹಾಗೂ ಶಿಕ್ಷಕರು, ಸಿಬ್ಬಂದಿಗಳು ಸಹಕರಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಸನ್ಮಾನ:
ಅನುದಾನ ರಹಿತ ಶಾಲೆಗಳ ಸಂಘದಿಂದ ನೀಡುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆಯ ಶಿಕ್ಷಕಿ ಸರಿತಾ ಅವರನ್ನು ಸನ್ಮಾನಿಸಲಾಯಿತು. ೨೦೨೩-೨೪ನೇ ಸಾಲಿನಲ್ಲಿ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸ್ವಾಮೀಜಿ ಗೌರವಿಸಿದರು. ಸಂಸ್ಥೆಯ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ಹಾಗೂ ಬಸ್ ಚಾಲಕರನ್ನು ಗೌರವಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲೋಹಿತಾ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್, ಶಿಕ್ಷಕಿ ಸಂಧ್ಯಾ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಿಗ್ಗೆ ಸಂಸ್ಥೆಯ ಕಾರ್ಯದರ್ಶಿ ಕೆ ಸೇಸಪ್ಪ ರೈ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಸಂಜೆ ತನಕ ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.