ನಿಮ್ಮ ಯೋಚನೆಗಳಿಗೆ ಉತ್ತಮ ರೂಪ ಕೊಟ್ಟರೆ ಸಾಧನೆ ಸಾಧ್ಯ-ಆಂಜನೇಯ ರೆಡ್ಡಿ
ಕ್ರೀಡೆಗಳು ಆರೋಗ್ಯ, ಮಾನಸಿಕ ಸಾಮರ್ಥ್ಯವನ್ನು ಕಳಿಸಿ ಕೊಡುತ್ತದೆ-ವಂ.ಲಾರೆನ್ಸ್ ಮಸ್ಕರೇನಸ್
ಸಮಗ್ರ ಪ್ರಶಸ್ತಿ ವಿಜೇತರು:
ಪ್ರಥಮ: ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ದ್ವಿತೀಯ: ದರ್ಬೆ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ
ಪುತ್ತೂರು: ಸಂತ ಫಿಲೋಮಿನ ಅನುದಾನಿತ ಪ್ರೌಢ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಎನ್ಸಿಸಿ ದಿನಾಚರಣೆ, ವಿಜ್ಞಾನ ಮಾದರಿ ಪ್ರದರ್ಶನ, ಕಬಡ್ಡಿ ಪಂದ್ಯಾಟ ಮತ್ತು ಸಾಂಸ್ಕೃತಿಕ ಹಬ್ಬಗಳ ಕಾರ್ಯಕ್ರಮ ನ.28ರಂದು ಶಾಲಾ ಆವರಣದಲ್ಲಿ ನಡೆಯಿತು.
ಬೆಳಿಗ್ಗೆ ಎನ್ಸಿಸಿ ಧ್ವಜಾರೋಹಣ ನಡೆಸಲಾಯಿತು. ಕೆಡೆಟ್ಸ್ಗಳಿಂದ ಆಕರ್ಷಕ ಪಥ ಸಂಚಲನದೊಂದಿಗೆ ಮುಖ್ಯ ಅತಿಥಿಯಾಗಿದ್ದ ಪುತ್ತೂರು ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಗೌರವ ರಕ್ಷೆ ಪಡೆದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಜನೇಯ ರೆಡ್ಡಿರವರು ದೇಶದ ಭದ್ರತೆ ಹಾಗೂ ನಾವು ನೆಮ್ಮದಿಯಿಂದ ನಿದ್ರೆ ಮಾಡಲು ದೇಶದ ಸೈನಿಕರು ನಿರಂತರವಾಗಿ ದುಡಿಯುತ್ತಿದ್ದಾರೆ. ಅವರನ್ನು ಸನ್ಮಾನ ಮಾಡಿ ಪ್ರೀತಿಯಿಂದ ಕಂಡಿದ್ದೀರಿ ಇದರಿಂದ ಕಾರ್ಯಕ್ರಮ ಸಾರ್ಥಕ ಆಗಿದೆ ಎಂದರು. ಉತ್ಕೃಷ್ಟ ಸಂಸ್ಥೆಗಳಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಯೂ ಒಂದು. ಇಲ್ಲಿ ಕಲಿತರೆ ಹಲವು ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಅದ್ಭುತ ಯೋಚನೆಗಳಿಗೆ ಉತ್ತಮ ರೂಪ ಕೊಟ್ಟರೆ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ಜೀವನ ಪವಿತ್ರವಾದುದು. ಈ ಸಮಯದಲ್ಲಿ ಬೇರೆ ಯಾವುದೇ ಆಕರ್ಷಣೆಗೆ ಒಳಗಾಗಬಾರದು. ಅಲ್ಲದೆ ಮೊಬೈಲ್ ಬಳಕೆಯಿಂದ ದೂರವಿರಿ. ಮಾದಕ ವ್ಯಾಸನಕ್ಕೆ ಬಲಿಯಾಗಬೇಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೆನ್ಹಸ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನ ಜೀವನ ಹಾಗೂ ಸೇವೆಯ ಜೀವನವನ್ನು ಮಾಡುವುದನ್ನು ಕಲಿಯಿರಿ. ಕ್ರೀಡೆಗಳು ನಿಮ್ಮ ಆರೋಗ್ಯ ಹಾಗೂ ಮಾನಸಿಕ ಸಾಮರ್ಥ್ಯವನ್ನು ಕಳಿಸಿ ಕೊಡುತ್ತದೆ. ಕಲಿಕೆಯ ಜೊತೆಗೆ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ. ಮನೋಸ್ಥೈರ್ಯ ಬೆಳೆಸಿಕೊಳ್ಳಿ ಎಂದರು.
ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿದರು. ಎನ್ಸಿಸಿ ನೇವಲ್ ಫಸ್ಟ್ ಆಫೀಸರ್ ಕ್ಲೆಮೆಂಟ್ ಪಿಂಟೊ ವಂದಿಸಿದರು. ಏರ್ಫೋರ್ಸ್ ಸೆಕೆಂಡ್ ಆಫೀಸರ್ ರೋಷನ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು. ಆರ್ಮಿ ಚೀಫ್ ಆಫೀಸರ್ ನರೇಶ್ ಲೋಬೋ ಪಥಸಂಚಲನ ಕಾರ್ಯಕ್ರಮ ನಿರ್ವಹಿಸಿದರು.
ಪುತ್ತೂರು ತಾಲೂಕಿನ ಆಯ್ದ ವಿವಿಧ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಕಬಡ್ಡಿ ಪಂದ್ಯಾಟ, ವಿಜ್ಞಾನ ಮಾದರಿ ಪ್ರದರ್ಶನ, ದೇಶಭಕ್ತಿಗೀತೆ ಮತ್ತು ಜನಪದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಮಟ್ಟದಲ್ಲಿ ಮಿಂಚಿದ ಲಿಟಲ್ ಫ್ಲವರ್ ಶಾಲೆಯ ಹುಡುಗಿಯರ ಕಬಡ್ಡಿ ತಂಡದ ಆಟಗಾರರು ಪ್ರದರ್ಶನ ಪಂದ್ಯಾಟ ನೀಡಿದರು.
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿ.ಸೋಜಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಹಿರಿಯ ಶಿಕ್ಷಕಿ ಕಾರ್ಮಿನ್ ಪಾಯ್ಸ್ ಮಾತನಾಡಿ ಶುಭಹಾರೈಸಿದರು. ವಿವಿಧ ಶಾಲೆಗಳ ಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜಾರವರು ಸ್ಮರಣಿಕೆ ನೀಡಿ ಗೌರವಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಏರ್ವಿಂಗ್ ನ ಸೆಕೆಂಡ್ ಆಫೀಸರ್ ರೋಷನ್ ಸಿಕ್ವೆರಾ ಹಾಗೂ ಶಿಕ್ಷಕಿ ನಮಿತಾ ಕಾರ್ಯಕ್ರಮ ನಿರೂಪಿಸಿದರು. ಎನ್ಸಿಸಿ ನೇವಲ್ ಫಸ್ಟ್ ಆಫೀಸರ್ ಕ್ಲೆಮೆಂಟ್ ಪಿಂಟೊ ವಂದಿಸಿದರು. ಆರ್ಮಿ ಚೀಫ್ ಆಫೀಸರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ, ಬಾಲಕೃಷ್ಣ ಪೊರ್ದಾಳ್, ಸದಾಶಿವ, ಹರೀಶ್, ಕ್ಲೆಮೆಂಟ್ ಪಿಂಟೊ ಕಬಡ್ಡಿ ಪಂದ್ಯಾಟವನ್ನು ನಡೆಸಿಕೊಟ್ಟರು.
ಸ್ಪರ್ಧಾ ವಿಜೇತರು:
ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಸಂತ ಫಿಲೋಮಿನಾ ಆಂಗ್ಲಮಾಧ್ಯಮ ಶಾಲೆ ಪ್ರಥಮ, ಸಂತ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಸನ್ನಿದಿ ಮತ್ತು ತಂಡ ಪ್ರಥಮ, ಜುವೆನ್ನ ಮತ್ತು ಸಾಕ್ಷಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಅನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಶ್ವಿತ್ ಮತ್ತು ಜಿತೇಶ್ ಪ್ರಥಮ, ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಯಕ್ಷೀತ್ ಮತ್ತು ಉಮ್ಮರ್ ಸಹದ್ ದ್ವಿತೀಯ ಹಾಗೂ ಸಂತ ಫಿಲೋಮಿನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅಹನ್ ಸಾಯಿ ತೃತೀಯ ಸ್ಥಾನ ಪಡೆದುಕೊಂಡರು. ದೇಶಭಕ್ತಿ ಗೀತೆಯಲ್ಲಿ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಚಂದನ್ ಕೃಷ್ಣ ಪ್ರಥಮ, ಪರ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ಅಭಯ್ ದ್ವಿತೀಯ, ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃತಿ ತೃತೀಯ ಸ್ಥಾನ ಪಡೆದುಕೊಂಡರು. ಜನಪದ ನೃತ್ಯದಲ್ಲಿ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃತಿ ಮತ್ತು ತಂಡ ಪ್ರಥಮ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಆರಾಧನಾ ಮತ್ತು ತಂಡ ದ್ವಿತೀಯ ಹಾಗೂ ಕೆಮ್ಮಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಲ್ಲವಿ ಮತ್ತು ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.
ನಿವೃತ್ತ ಯೋಧರಿಗೆ, ಎನ್ಸಿಸಿ ಅಧಿಕಾರಿಗಳಿಗೆ ಗೌರವಾರ್ಪಣೆ
ನಿವೃತ್ತ ಯೋಧರಿಗೆ ಪುಷ್ಪ ನೀಡಿ ಗೌರವಿಸಲಾಯಿತು. ನಿವೃತ್ತ ಯೋಧರಾದ ಕೆ.ಹೊನ್ನಪ್ಪ ಗೌಡ, ಜಯಂತ ಬೇಕಲ್, ವಸಂತ ಕುಮಾರ್ ರೈ, ನಾಗಪ್ಪ ಗೌಡ, ಜೋಸೆಫ್ ಡಿಸೋಜ, ಸುರೇಶ್ ಶೆಣೈ, ಎಡ್ವರ್ಡ್, ಸಮರ್ದೀಪ್ ರವರನ್ನು ಗೌರವಿಸಲಾಯಿತು. ಸಂತ ಫಿಲೋಮಿನಾ ಕಾಲೇಜಿನ ಎನ್ಸಿಸಿ ಅಧಿಕಾರಿಗಳಾದ ಕ್ಯಾ|ಜಾನ್ಸನ್, ತೇಜಸ್ವಿ ಹಾಗೂ ನಿವೃತ್ತ ಎನ್ಸಿಸಿ ಅಧಿಕಾರಿ ಎಂ.ಎಸ್ ಪುರುಷೋತ್ತಮರವರನ್ನು ಗೌರವಿಸಲಾಯಿತು.
ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ, ಶಿಕ್ಷಕ ಬಾಲಕೃಷ್ಣ ಪೊರ್ದಾಳರವರಿಗೆ ಸನ್ಮಾನ
ಪುತ್ತೂರು ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಸಹಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ತರಬೇತುದಾರ ಬಾಲಕೃಷ್ಣ ಪೊರ್ದಾಳ್ರವರನ್ನು ಹಾರ, ಶಲ್ಯ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.