ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ಕ್ರೀಡಾ ಕೂಟ ‘ಕ್ರೀಡೆ-2024’ ಉದ್ಘಾಟನೆ – ಸಾಧಕರಿಗೆ ಸನ್ಮಾನ

0

ವಿಟ್ಲ: ಮಕ್ಕಳ ಸಂಭ್ರಮ ನೋಡೋಕೆ ಖುಷಿಯಾಗ್ತಿದೆ. ಸದೃಡ ಶರೀರ ಇದ್ದರೆ ಸದೃಡ ಮನಸ್ಸು ಇರಲು‌ ಸಾಧ್ಯ. ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಖುಷಿ ಕ್ರೀಡೆಯಿಂದ ಸಿಗಲು ಸಾಧ್ಯ. ಈಗಿನ‌ ಮಕ್ಕಳಿಗೆ ಮೊಬೈಲ್, ಟ್ಯಾಬ್ ಗಳು ಪ್ರಪಂಚವಾಗಿದೆ. ಮಕ್ಕಳಲ್ಲಿರುವ ಮೊಬೈಲ್ ವ್ಯಾಮೋಹ ಕಡಿಮೆ ಮಾಡಬೇಕು. ತಮ್ಮ ಮಕ್ಕಳಿಗೆ ಪೋಷಕರು ಸಮಯ ಕೊಡುವ ಕೆಲಸವಾಗಬೇಕಿದೆ. ಆಗ ಪೋಷಕರ ಮತ್ತು ಮಕ್ಕಳೊಳಗಿನ‌ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಸಂಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು‌ ತೊಡಗಿಸಿ ಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದ್ದು, ಇದೊಂದು ಮಾದರಿ ವಿದ್ಯಾಸಂಸ್ಥೆಯಾಗಿದೆ ಎಂದು ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿದ್ಯಾ ಕೆ.ಜೆ. ಹೇಳಿದರು.

ಅವರು ನ.30ರಂದು ಕಂಬಳಬೆಟ್ಟುವಿನಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಮಕ್ಕಳ ವಾರ್ಷಿಕ ಕ್ರೀಡಾಕೂಟ ‘ಕ್ರೀಡೆ-2024’ ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ‌ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಮಂಗಳೂರು ತಾಲೂಕು ದೈಹಿಕ‌ ಶಿಕ್ಷಣ ಅಧಿಕಾರಿ ಲಿಲ್ಲಿ ಪಾಯಸ್ ರವರು ಮಾತನಾಡಿ ಇಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣವಿದೆ.
ಈ ಒಂದು ಸಣ್ಣ ಊರಿನ ಹೆಸರಿನ ಜನಪ್ರೀಯತೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದ ಡಾ. ಅಬ್ದುಲ್ ಬಶೀರ್ ರವರ ಸಾಧನೆ ಅಭಿನಂದನೀಯ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಅವರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳಯಲು ಸಾಧ್ಯ.ಉತ್ತಮ ಜ್ಞಾನ ಮತ್ತು ನಡತೆ ಇದ್ದವರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ, ಶಾಲಾ ಸಲಹೆಗಾರರಾದ ಡಾ. ರವಿ ಕುಮಾರ್ ಎಲ್.ಪಿ. ರವರು ಮಾತನಾಡಿ ಪ್ರತೀ ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಯೋರ್ವರನ್ನು ಇದರಲ್ಲಿ ಸೇರ್ಪಡೆ ಮಾಡಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಇದೀಗ ನಮ್ಮ ಶಾಲೆ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ‌. ಇಲ್ಲಿನ ಆಡಳಿತ ಮಂಡಳಿ ಈ ಶಾಲೆಯನ್ನು ಕೇವಲ ಕಮರ್ಷಿಯಲ್ ದೃಷ್ಠಿಯಿಂದ ನೋಡದೆ ಊರಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಂಬಲವನ್ನು ಹೊಂದಿದೆ. ಈ ಒಂದು‌ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಪ್ರಭಲವಲ್ಲದ ಜಾಗದಲ್ಲಿ ಶಾಲೆಯನ್ನು ಹುಟ್ಟು ಹಾಕುವ ಪ್ರಯತ್ನ ಯಾರೂ ಮಾಡಲ್ಲ. ಆದರೆ ಡಾ. ಅಬ್ದುಲ್ ಬಶೀರ್ ರವರು ತನ್ನ ಹುಟ್ಟೂರಿನಲ್ಲಿರುವ ತನ್ನ ತಂದೆಯ ಜಾಗದಲ್ಲಿ ಬಹಳಷ್ಟು ವೆಚ್ಚದಲ್ಲಿ ಉತ್ತಮ‌ ಗುಣಮಟ್ಟದ ಶಾಲೆಯನ್ನು‌ ಹುಟ್ಟು ಹಾಕಿದ್ದಾರೆ. ಈ ಶಾಲೆಯ ಸದುಪಯೋಗವನ್ನು ಎಲ್ಲಾ ಜನರು‌ ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣಾ ಎಸ್.ಐ. ವಿದ್ಯಾ ಕೆ.ಜೆ. ಹಾಗೂ ಮಂಗಳೂರು ತಾಲೂಕು ದೈಹಿಕ‌ ಶಿಕ್ಷಣ ಅಧಿಕಾರಿ ಲಿಲ್ಲಿ ಪಾಯಸ್ ರವರನ್ನು ಸನ್ಮಾನಿಸಲಾಯಿತು.

ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಪ್ರಿಯ ಶಾಲಾ ಅಧ್ಯಕ್ಷರಾದ ಫಾತಿಮ ನಸ್ರೀನಾ ಬಶೀರ್, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್‌ ಬದ್ರಿಯಾ, ಹಾಸನ ಜನಪ್ರಿಯ ಇನ್ಸ್ಟಿಟ್ಯೂಶನ್ ಆಫ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಕೆ.
ಸಮಾಜಿಕ‌ ಕಾರ್ಯಕರ್ತ ರಹೀಂ ಕೊಪ್ಪ. ಶಾಕಿರ್ ಅಳಕೆಮಜಲು, ಶಾಲಾ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್, ಶಾಲಾ ಆಡಳಿತಾಧಿಕಾರಿ ಸಫ್ಘಾನ್ ಪಿಲಿಕಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿ ನಫೀಸಾ ಆಝಾ ಸ್ವಾಗತಿಸಿದರು.ವಿದ್ಯಾರ್ಥಿ ದಿಶಾನ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು‌.

ನಾಲ್ಕು ವರ್ಷದಲ್ಲಿ ನೀವು ಕೊಟ್ಟ ಸಹಕಾರಕ್ಕೆ ಅಭಿನಂದನೆಗಳು
ನಾಲ್ಕು ವರ್ಷದಲ್ಲಿ ನೀವು ಕೊಟ್ಟ ಸಹಕಾರಕ್ಕೆ ಅಭಿನಂದನೆಗಳು. ನಮ್ಮ ಮತ್ತು ಹೆತ್ತವರ ಕನಸು ಸಾಕಾರಗೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ‌. ಮಕ್ಕಳಿಗೆ ಕೇವಲ ವಿದ್ಯಾಭ್ಯಾಸ ಕೊಡುವುದು ನಮ್ಮ ಜವಾಬ್ದಾರಿಯಲ್ಲ ಆ ಮಗುವನ್ನು ಉತ್ತಮ‌ ಪ್ರಜೆಯನ್ನಾಗಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿ‌ನ ದಿನಗಳಲ್ಲಿ ಶಾಲಾ ಕ್ಯಾಂಪಸ್ ಅನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವ ಜೊತೆಗೆ 2000 ಮಕ್ಕಳಿಗೆ ಕುಳಿತುಕೊಳ್ಳುವ ಆಡಿಟೋರಿಯಂ ಹಾಗೂ ಉತ್ತಮ ಕ್ರೀಡಾಂಗಣ ನಿರ್ಮಾಣದ ಯೋಜನೆಯಿದೆ.
ಡಾ. ಅಬ್ದುಲ್ ಬಶೀರ್ ವಿ.ಕೆ.
ಅಧ್ಯಕ್ಷರು
ಜನಪ್ರಿಯ ಫೌಂಡೇಶನ್

LEAVE A REPLY

Please enter your comment!
Please enter your name here