ನಿವೃತ್ತಿಗೊಂಡ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಸ್‌ರವರಿಗೆ ಬೀಳ್ಕೊಡುಗೆ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಕಳೆದ 36 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನ.30ರಂದು ಸೇವಾ ನಿವೃತ್ತಿಗೊಂಡ ಐವಿ ಗ್ರೆಟ್ಟಾ ಪಾಸ್‌ರವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನ ಒಂದು ಪಯಣ. ತಾಯಿಯ ಗರ್ಭದಿಂದ ಪ್ರಕೃತಿ ಗರ್ಭಕ್ಕೆ ಬಂದ ಮೇಲೆ ಬೇರೇ ಬೇರೆ ರೀತಿಯ ಜವಾಬ್ದಾರಿಗಳು ಇರುತ್ತದೆ. ಎಲ್ಲವನ್ನೂ ನಾವು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದರೆ ನಮ್ಮ ಜೀವನಕ್ಕೆ ಅರ್ಥ ಇದೆ. ನಮ್ಮ ಜೀವನದಲ್ಲಿ ಹಲವರ ಸಹಾಯ ಇರುತ್ತದೆ. ಅವರಿಗೆ ಚಿರಋಣಿಯಾಗಿರಬೇಕು. ಸನ್ನ ಸಾಧನೆಯನ್ನು ಧನ್ಯತೆಯಿಂದ ಸ್ವೀಕರಿಸಬೇಕು. ನಿವೃತ್ತಿ ಸಮಯದಲ್ಲಿ ಹಲವು ಭಾವನೆಗಳು ಇರುತ್ತದೆ ಎಂದರು.

ಈ ಸಂಸ್ಥೆಯು 75 ವರ್ಷಗಳನ್ನು ಪೂರೈಸಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಸ್ ನಿವೃತ್ತಿ ಹೊಂದುತ್ತಿದ್ದಾರೆ. ಅವರು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರ ಮುಂದಿನ ಜೀವನ ನೆಮ್ಮದಿಯಾಗಿರಲಿ ಅವರ ಕುಟುಂಬಕ್ಕೆ ಬೇಕಾದ ವರಗಳನ್ನು ದೇವರು ಕೊಡಲಿ ಎಂದು ಹಾರೈಸಿದರು.


ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್ ಮಾತನಾಡಿ ಸಂಸ್ಥೆ ಒಳ್ಳೆಯ ರೀತಿಯಲ್ಲಿ ವಿದಾಯ ಸಮಾರಂಭ ಆಯೋಜಿಸಿದೆ. ಐವಿ ಗ್ರೆಟ್ಟಾ ಪಾಸ್‌ರವರು ನಮಗೆ ಆದರ್ಶಪ್ರಾಯರು ಹಾಗೂ ಸ್ಪೂರ್ತಿಯಾಗಿದ್ದವರು. ಅವರನ್ನು ನಾವು ಉಕ್ಕಿನ ಮಹಿಳೆ ಎಂದು ಹೇಳುತ್ತೇವೆ. ಅವರು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ, ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಿದ್ದವರು ಎಂದು ಹೇಳಿದ ಅವರು ಪರಮಾತ್ಮನು ಅವರಿಗೆ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ ಎಂದು ಹಾರೈಸಿದರು.


ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್, ಪದಾಧಿಕಾರಿಗಳಾದ ಸೀತಾರಾಮ ಗೌಡ ಮಿತ್ತಡ್ಕ, ಸುಧಾಕರ ರೈ ಗಿಳಿಯಾಲುರವರು ಸನ್ಮಾನಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಾನ್ ಕುಟಿನ್ಹಾ, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಕುಟಿನ್ಹಾರವರು ಸನ್ಮಾನಿಸಿದರು. ಶಾಲಾ ಗೈಡ್ಸ್ ಸಂಸ್ಥೆಯಿಂದ ಹಾಗೂ ಶಾಲಾ ಕ್ರಿಡಾ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ.ಕೋಸ್ಟಾ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಭಟ್, ವಿದ್ಯಾರ್ಥಿ ಸಂಘದ ಉಪನಾಯಕಿ ಮೊನಿಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಮೋಲಿ ಫೆರ್ನಾಂಡೀಸ್ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿಗಳು ಶುಭಾಶಯ ಗೀತೆ ಹಾಡಿದರು. ಪ್ರೌಢಶಾಲೆಯ ಮುಖ್ಯಗುರು ವಂ.ಮ್ಯಾಕ್ಸಿಂ ಡಿಸೋಜ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಕಾರ್ಮಿನ್ ಪಾಸ್ ವಂದಿಸಿದರು. ಶಿಕ್ಷಕಿ ಆಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ.ಅಜಯ್ ಲೋಹಿತ್, ಪುರುಷರ ಹಾಸ್ಟೆಲ್ ವಾರ್ಡನ್ ವಂ.ರೂಪೇಶ್ ತಾವ್ರೋ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಥೆಯಿಂದ ಸನ್ಮಾನಿಸಿ ಬೀಳ್ಕೊಡುಗೆ
ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಸ್‌ರವರಿಗೆ ಸಂಸ್ಥೆಯ ವತಿಯಿಂದ ಹಾರ, ಶಾಲು, ಸನ್ಮಾನ ಪತ್ರ, ಕಿರುಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.ಸನ್ಮಾನ ಸ್ವೀಕರಿಸಿದ ಮಾತನಾಡಿದ ಅವರು ನಾನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಹಲವರು ಸಹಾಯ ಮಾಡಿದ್ದಾರೆ. ಶಿಕ್ಷಕರು ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದ್ದಾರೆ ಎಂದು ಹೇಳಿ ಕರ್ತವ್ಯಕ್ಕೆ ಸೇರಿದ ಸಂದರ್ಭವನ್ನು ತಿಳಿಸಿದರು. ಎಷ್ಟೇ ಕಷ್ಟ ಆದರೂ ಒಳ್ಳೆಯ ಹಠ ಬಿಡಬಾರದು. ನಿಮ್ಮನ್ನು ಮಾರ್ಗದರ್ಶನ ಮಾಡುವ ಶಿಕ್ಷಕರಿಗೆ ತಲೆಬಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಇಷ್ಟರವರೆಗೆ ಸಹಕಾರ ನೀಡಿದ ಸಂಸ್ಥೆಯ ಎಲ್ಲಾ ಸಂಚಾಲಕರುಗಳಿಗೆ, ವೃತ್ತಿಯಲ್ಲಿ ಹುರಿದುಂಬಿಸಿದ ಶಿಕ್ಷಕರಿಗೆ ಹಾಗೂ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here