@ ಸಿಶೇ ಕಜೆಮಾರ್
ಪುತ್ತೂರು: ಒಂದು ಕಾಲದಲ್ಲಿ ವಿಟ್ಲ ಮತ್ತು ಪಂಜ ಸೀಮೆಯ ಗಡಿ ಪ್ರದೇಶವಾಗಿದ್ದ ಕುಂಬ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಕುಂಬ್ರಕ್ಕೆ ಹಿಂದೆ ಇದ್ದ ಹೆಸರು ‘ಬಾಂತಲಪ್ಪು’ ಆಗಿತ್ತು. ಏಕೆಂದರೆ ಇಲ್ಲೊಂದು ಗಡಿ ಕಲ್ಲು ‘ಬಾಂದ್ ಕಲ್ ಕಡಪು’ ಇತ್ತು ಹಾಗಾಗಿ ಇಲ್ಲಿಗೆ ಬಾಂತಲಪ್ಪು ಹೆಸರು ಬಂದಿತ್ತು. ಕಾಲಕ್ರಮೇಣ ಇದು ಕುಂಬ್ರ ಆಯಿತು ಎನ್ನುತ್ತಾರೆ ಹಿರಿಯರು.
ಇಂತಹ ಕುಂಬ್ರದಲ್ಲಿ ಒಂದು ಸೆಲ್ಫೀ ಪಾಯಿಂಟ್ ಮಾಡಲಾಗಿದೆ. ಕುಂಬ್ರ ವರ್ತಕರ ಸಂಘದ 20 ನೇ ವರ್ಷಾಚರಣೆಯ ಸಂದರ್ಭದಲ್ಲಿ ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಮಹಮ್ಮದ್ ಸಾದಿಕ್ ಹಾಜಿಯವರು ಇದನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸೆಲ್ಫೀ ಪಾಯಿಂಟ್ನಲ್ಲಿ ಒಂದು ಎತ್ತಿನ ಗಾಡಿ ಹಾಗೂ ನಾಲ್ಕು ಆಕರ್ಷಕ ಕಂಬಗಳ ಗೋಪುರ ಹಾಗೂ ಬಾಂತಲಪ್ಪುವಿನ ಇತಿಹಾಸ ಸಾರುವ ಬರಹಗಳಿರುವ ಸಿಮೆಂಟ್ನ ಫಲಕವಿದೆ.
ಸ್ವಚ್ಛ ಗ್ರಾಮದ ಪರಿಕಲ್ಪನೆಯ ‘ಪೊರ್ಲುದ ಕುಂಬ್ರ’
ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಪರಿಕಲ್ಪನೆಯಲ್ಲಿ ‘ಪೊರ್ಲುದ ಕುಂಬ್ರ’ ಎನ್ನುವ ಈ ಸೆಲ್ಫೀ ಪಾಯಿಂಟ್ ಅನ್ನು ಸುಮಾರು 2 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಜಂಕ್ಷನ್ನಲ್ಲಿ ಈ ಸೆಲ್ಫೀ ಪಾಯಿಂಟ್ ಇದ್ದು ಹೆದ್ದಾರಿಯಲ್ಲಿ ಸಾಗುವ ಜನರ ಗಮನ ಸೆಳೆಯುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಗ್ರಾಮದ ಜನತೆ ಕೂಡ ಸೆಲ್ಫೀ ಪಾಯಿಂಟ್ಗೆ ಬಂದು ಒಂದು ಕ್ಷಣ ಕುಂಬ್ರದ ಇತಿಹಾಸವನ್ನು ಓದಿ ಅರಿತುಕೊಳ್ಳುತ್ತಿದ್ದಾರೆ. ಒಂದು ಊರಿನ ಇತಿಹಾಸವನ್ನು ಹತ್ತೂರಿಗೆ ತಲುಪಿಸುವ ಪ್ರಯತ್ನ ಕೂಡ ಇಲ್ಲಿ ನಡೆದಿದೆ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಸಂದೇಶ ಕೂಡ ಇಲ್ಲಿದೆ. ಒಟ್ಟಿನಲ್ಲಿ ಒಂದು ಹೊಸ ಪ್ರಯತ್ನಕ್ಕೆ ಕುಂಬ್ರ ನಾಂದಿ ಹಾಡಿದೆ. ನೀವು ಕೂಡ ಕುಂಬ್ರಕ್ಕೆ ಬಂದರೆ ಈ ಸೆಲ್ಫೀ ಪಾಯಿಂಟ್ಗೆ ತೆರಳಿ ಒಂದು ಸೆಲ್ಫೀ ತೆಗೆದುಕೊಳ್ಳುವ ಮೂಲಕ ಪೊರ್ಲುದ ಕುಂಬ್ರದ ಇತಿಹಾಸವನ್ನು ತಿಳಿದುಕೊಳ್ಳಬಹುದಾಗಿದೆ.
ಎತ್ತಿನ ಗಾಡಿಗೂ ಕುಂಬ್ರಕ್ಕೂ ಸಂಬಂಧವಿದೆ
ಸೆಲ್ಫೀ ಪಾಯಿಂಟ್ನಲ್ಲಿ ಮುಖ್ಯವಾಗಿ ಎತ್ತಿನ ಗಾಡಿಯನ್ನೇ ಇಡಲು ಒಂದು ಕಾರಣವಿದೆ. ಕುಂಬ್ರಕ್ಕೂ ಎತ್ತಿನ ಗಾಡಿಗೂ ಒಂದು ಅವಿನಾಭಾವ ಸಂಬಂಧವಿದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಎತ್ತಿನ ಗಾಡಿಗಳನ್ನೇ ಬಳಸಲಾಗುತ್ತಿತ್ತು. ಮಂಗಳೂರು, ಬಂಟ್ವಾಳ, ಕಲ್ಲಡ್ಕ ಭಾಗದಿಂದ ಮಡಿಕೇರಿ, ಸುಳ್ಯ ಇತ್ಯಾದಿ ಕಡೆಗಳಿಗೆ ಸರಕು ಸಾಮಾಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದ ವ್ಯಾಪಾರಿಗಳು ರಾತ್ರಿ ವೇಳೆ ಕುಂಬ್ರದಲ್ಲಿ ತಂಗುತ್ತಿದ್ದರು. ಅದೇ ರೀತಿ ಮಡಿಕೇರಿ, ಸುಳ್ಯ ಈ ಭಾಗದಿಂದ ಬರುತ್ತಿದ್ದ ಎತ್ತಿನ ಗಾಡಿಗಳು ಕೂಡ ಕುಂಬ್ರದಲ್ಲಿ ನಿಲ್ಲುತ್ತಿದ್ದವು. ರಾತ್ರಿ ವೇಳೆ ಕುಂಬ್ರದಲ್ಲಿ ರಸ್ತೆಯುದ್ದಕ್ಕೂ ಎತ್ತಿನ ಗಾಡಿಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಎತ್ತಿನ ಗಾಡಿಯಲ್ಲಿದ್ದವರಿಗೆ ಮತ್ತು ಎತ್ತುಗಳಿಗೆ ಇಲ್ಲಿನ ಜನರು ಆಹಾರಗಳನ್ನು ನೀಡುತ್ತಿದ್ದರು. ಇದನ್ನು ನೆನಪು ಮಾಡುವ ಸಲುವಾಗಿ ಇಲ್ಲಿ ಎತ್ತಿನ ಗಾಡಿಯನ್ನು ನಿಲ್ಲಿಸಲಾಗಿದೆ.
ಸ್ವಚ್ಛ ಗ್ರಾಮದ ಪರಿಕಲ್ಪನೆಗೆ ಇದು ಪೂರಕವಾಗಿದೆ. ಒಳಮೊಗ್ರು ಗ್ರಾಮದ ಬಾಂತಲಪ್ಪು (ಈಗಿನ ಕುಂಬ್ರ)ವಿನ ಇತಿಹಾಸವನ್ನು ಹತ್ತೂರಿಗೆ ತಿಳಿಸುವ ಪ್ರಯತ್ನದೊಂದಿಗೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸಲಾಗಿರುವುದು ಗ್ರಾಮಕ್ಕೆ ಹೆಮ್ಮೆ ತಂದಿದೆ. ವರ್ತಕ ಸಂಘ ಮತ್ತು ಆಕರ್ಷಣ್ ಇಂಡಸ್ಟ್ರೀಸ್ ಬಳಗಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.
-ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್
ಬಾಂತಲಪ್ಪುವಿನ ತೀರಾ ಹತ್ತಿರದ ಒಂದು ಮನೆತನದ ಹೆಸರು ‘ಕುಂಬ್ರ’ ಆಗಿತ್ತು. ಮುಂದಿನ ದಿನಗಳಲ್ಲಿ ಅಂಚೆ ಕಛೇರಿಗೆ ಕುಂಬ್ರ ಎಂಬ ಹೆಸರು ಬಂದ ಬಳಿಕ ಇಲ್ಲಿಗೆ ಕುಂಬ್ರ ಹೆಸರು ಅಧಿಕೃತವಾಯಿತು. ಇದೊಂದು ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆದ ಪಟ್ಟಣವಾಗಿದೆ. ಬಂಟ್ವಾಳ ಮೈಸೂರು ರಾಷ್ಟ್ರೀಯ ಹೆದ್ದಾರಿ ಈ ಭಾಗದಿಂದ ಹಾದು ಹೋದ ಕಾರಣ ಕುಂಬ್ರ ಪೇಟೆ ಮತ್ತಷ್ಟು ಅಭಿವೃದ್ದಿಯಾಗಲು ಸಾಧ್ಯವಾಯಿತು.
ಕುಂಬ್ರ ದುರ್ಗಾಪ್ರಸಾದ್ ರೈ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಕುಂಬ್ರದ ಸೆಲ್ಪೀ ಪಾಯಿಂಟ್ನಲ್ಲಿ ಇರಿಸಲಾಗಿರುವ ಎತ್ತಿನ ಗಾಡಿಯದ್ದು ನನ್ನ ಕಲ್ಪನೆಯಲ್ಲ. ನನ್ನ ಆತ್ಮೀಯ ಸ್ನೇಹಿತರಾಗಿರುವ ನಾರಾಯಣ ಆಚಾರ್ ನನ್ನೊಂದಿಗೆ ಹಂಚಿಕೊಂಡ ಕಲ್ಪನೆಯಾಗಿದೆ. ಅವರೇ ಈ ಎತ್ತಿನ ಗಾಡಿಯ ಕೆತ್ತನೆ ಕೂಡ ಮಾಡಿದ್ದಾರೆ. ಆಕರ್ಷಣ್ ಸಂಸ್ಥೆ ವತಿಯಿಂದ ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿದ್ದೇವೆ.
ಮಹಮ್ಮದ್ ಸಾದಿಕ್ ಹಾಜಿ, ಮಾಲಕರು ಆಕರ್ಷಣ್ ಇಂಡಸ್ಟ್ರೀಸ್ ಮುಕ್ರಂಪಾಡಿ
ವರ್ತಕರ ಸಂಘದ 20 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕರು ಈ ಸೆಲ್ಫೀ ಪಾಯಿಂಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಸ್ವಚ್ಛ ಗ್ರಾಮದ ಪರಿಕಲ್ಪನೆಯೇ ಇಲ್ಲಿ ಮುಖ್ಯವಾಗಿದ್ದು ಪೊರ್ಲುದ ಕುಂಬ್ರಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕಾಗಿದೆ.
ರಫೀಕ್ ಅಲ್ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ