ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಹತ್ಯಾ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾದ ಅಬೂಬಕ್ಕರ್ ಸಿದ್ದಿಕ್‌ರವರ ಪತ್ನಿ ವಾಸವಾಗಿರುವ ಕೆಯ್ಯೂರಿನ ಮನೆಗೆ ಎನ್‌ಐಎ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ ಘಟನೆ ದ.5 ರಂದು ಬೆಳಿಗ್ಗೆ ನಡೆದಿದೆ.
ಕೆಯ್ಯೂರು ಕೆಪಿಎಸ್ ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್‌ರವರ ಪತ್ನಿ ವಾಸವಾಗಿದ್ದಾರೆ ಎನ್ನಲಾಗಿದ್ದು ಅಲ್ಲಿಗೆ ಆಗಮಿಸಿದ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಇದಲ್ಲದೆ ಸಿದ್ದಿಕ್‌ರವರ ಸಹೋದರೋರ್ವರು ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸವಾಗಿದ್ದು ಅಲ್ಲಿಗೂ ಆಗಮಿಸಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಬಿಜೆಪಿ ಜಿಲ್ಲಾ ಯುವ ಮೋರ್ಛಾದ ಪದಾಧಿಕಾರಿಯಾಗಿದ್ದ ಪ್ರವೀಣ್ ನೆಟ್ಟಾರವರನ್ನು 2022 ಜು.26 ರಂದು ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಕೊಲೆಯ ಸಂದರ್ಭ ಅಬೂಬಕ್ಕರ್ ಸಿದ್ದಿಕ್‌ರವರು ಸ್ಥಳದಲ್ಲೇ ಇದ್ದು ಆರೋಪಿಗಳಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದು ಸದ್ಯ ತಲೆ ಮರೆಸಿಕೊಂಡಿದ್ದಾರೆ. ಸರ್ಚ್ ವಾರೆಂಟ್ ಪಡೆದ ಎನ್‌ಐಎ ಪೊಲೀಸರು ಕೆಯ್ಯೂರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ.