ವಿದ್ಯಾರ್ಥಿಗಳು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಬೇಕು: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ನಗರದ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ರಕ್ಷಕ ಶಿಕ್ಷಕ ಸಂಘದ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಸತಿ ನಿಲಯದಲ್ಲಿರುವ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಮುಂಚೂಣಿಯಲ್ಲಿರದೆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ರಾಯಭಾರಿಗಳಾಗಬೇಕು. ಮುಂದಿನ ದಿನಗಳಲ್ಲಿ ಪಠ್ಯ ವಿಷಯಗಳು ಮಾತ್ರವಲ್ಲದೆ ಧಾರ್ಮಿಕ ವಿಷಯಗಳನ್ನು ಬೋಧಿಸುವ, ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸುವ ತರಗತಿಗಳನ್ನು ಅಂಬಿಕಾ ಸಂಸ್ಥೆಯಲ್ಲಿ ನಡೆಸಲಾಗುತ್ತದೆ ಎಂದರು.
ಯೋಗ ಪ್ರಾಣಾಯಮ, ಭಜನೆಗಳಂತಹ ಚಟುವಟಿಕೆಗಳು ನಮ್ಮಲ್ಲಿ ಚೈತನ್ಯವನ್ನು ತುಂಬುತ್ತವೆ. ಜೀವನದ ಕಾಠಿಣ್ಯತೆಯ ಅರಿವು ಮೂಡಿದಾಗ ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳನ್ನು ನಿರೀಕ್ಷಿಸಬಹುದು. ಅಂಕಗಳೊಂದಿಗೆ ಉತ್ತಮ ನಡತೆಯ ಅಗತ್ಯವಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಕೂಡ ಶ್ರಮಿಸಬೇಕೆಂದು ಕರೆ ನೀಡಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಸಂಸ್ಥೆಯ ಬೋಧಕ-ಬೋಧಕೇತರ ವೃಂದ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸುಚಿತ್ರ ಪ್ರಭು ಪ್ರಾಸ್ತವಿಕ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ವಿವರಣೆ ನೀಡಿದರು. ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ಸ್ವಾಗತಿಸಿದರು.ಉಪನ್ಯಾಸಕಿ ಅಪರ್ಣ ಎಸ್ ಉಪಾಧ್ಯಾಯ ಕಾರ್ಯಕ್ರಮ ವಂದಿಸಿ, ನಿರೂಪಿಸಿದರು.