ಕಡಬ: ಬಿಳಿನೆಲೆಯ ಸಂದೀಪ್ ನಾಪತ್ತೆಯಾಗಿರುವ ಬಗ್ಗೆ ದೂರನ್ನು ಸ್ವೀಕರಿಸಲು ಸಂದೀಪ್ನ ತಾಯಿಯನ್ನು ಎರಡು ಮೂರು ದಿನ ಠಾಣೆಗೆ ಅಲೆದಾಡಿಸಿದ್ದು ಅಲ್ಲದೆ, ಆರೋಪಿ ಪ್ರತೀಕ್ ಹೆಗಲ ಮೇಲೆಯೇ ಕೈ ಹಾಕಿಕೊಂಡು ರೋಹಿತಾಶ್ವ ಎಂಬ ಪೊಲೀಸ್ ಸಿಬ್ಬಂದಿ ಪ್ರತೀಕ್ ಕೊಲೆ ಮಾಡುವ ಹುಡುಗನಲ್ಲ, ಒಳ್ಳೆ ಹುಡುಗ ಎಂದು ಹೇಳಿ, ದೂರು ನೀಡಲು ಬಂದ ಸಂದೀಪ್ನ ತಾಯಿಯನ್ನು ನಿಂದಿಸಿ ಕಳಿಸಿದ್ದಾರೆ ಇಂತಹ ಎಸ್.ಐ. ಹಾಗೂ ಪೊಲೀಸ್ ಸಿಬ್ಬಂದಿ ಇರುವಾಗ ನ್ಯಾಯ ದೊರಕುವ ಭರವಸೆ ಇಲ್ಲ ಎಂದು ಮೃತನ ತಾಯಿ ಹಾಗೂ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.
ಡಿ.6ರಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದೀಪ್ನ ತಾಯಿ ಸರೋಜ ಅವರು, ನಾನು ನ.28ರಿಂದ ನ.30ರವರೆಗೆ ಮೂರು ನಾಲ್ಕು ಬಾರಿ ಠಾಣೆಗೆ ಹೋದಾಗಲೂ ದೂರು ಸ್ವೀಕರಿಸಲಿಲ್ಲ, ನ.29ರಂದು ಕಡಬ ಎಸ್.ಐ. ಅಭಿನಂದನ್ ಅವರು ದೂರು ಸ್ವೀಕರಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ರೋಹಿತಾಶ್ವ ಎಂಬ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿದ್ದ ಆರೋಪಿಯ ಹೆಗಲ ಮೇಲೆಯೇ ಕೈ ಹಾಕಿಕೊಂಡು ಪ್ರತೀಕ್ ಒಳ್ಳೆ ಹುಡುಗ ಅವ ಕೊಲೆ ಮಾಡುವವನಲ್ಲ ಎಂದು ಹೇಳಿ ನೀವು ಯಾಕೆ ಬಂದದ್ದು ಹೋಗಿ ಎಂದು ಗದರಿಸಿದ್ದರು. ಬಳಿಕ ನಾವು ಪ್ರಸಾದ್ ನೆಟ್ಟಣ ಅವರಲ್ಲಿ ವಿಷಯ ಹೇಳಿ ಅವರು ಪೊಲೀಸರಿಗೆ ಮೇಲಾಧಿಕಾರಿಗಳಿಗೆ ತಿಳಿಸಿದ ಮೇಲೆ ದೂರು ಸ್ವೀಕರಿಸಿದ್ದಾರೆ. ಪೊಲೀಸರಿಗೆ ಪ್ರತೀಕ್ ಆರೋಪಿ ಎಂದು ಎರಡು, ಮೂರು ದಿನದ ಮೊದಲೇ ಗೊತ್ತಿದ್ದರೂ ಅವರು ವಿನಾಃ ಕಾರಣ ದೂರು ಸ್ವೀಕರಿಸಲು ವಿಳಂಬ ಮಾಡಿ ಕೊಲೆಯಾದ ಮಗನ ಹೆಣವನ್ನು ಕೊಳೆಯುವಂತೆ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಬಿಜೆಪಿ ಅಂತ ರಾಜಕೀಯ ಮಾತು ಕೇಳಿ ಬರುತ್ತಿದೆ, ನಾವು ಯಾವುದೇ ಪಕ್ಷದ ಪರ ವಿರೋಧವಾಗಿ ಮಾತನಾಡಲು ಹೋಗಿಲ್ಲ ಎಂದರು.
ಸಂದೀಪ್ನ ಚಿಕ್ಕಪ್ಪ ಆನಂದ ಅವರು ಮಾತನಾಡಿ, ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ಮಾಡಿ, ಕೊಲೆಯಾದ ಪ್ರತೀಕ್ ಜೊತೆ ನಮ್ಮ ಹುಡುಗರು ಕುದ್ಮಾರಿನ ಮನೆಯಲ್ಲಿ ಇದ್ದರು ಎಂದು ಹೇಳಿದ್ದು, ಕೆಲ ಹುಡುಗರು ಸಂದೀಪ್ ನಾಪತ್ತೆಯಾಗಿರುವುದು ಮತ್ತು ಪ್ರತೀಕ್ ಕಾರಿನಲ್ಲಿ ಕರೆದುಕೊಂಡು ಹೋಗಿರುವುದು ವಿಷಯ ಬಂದಿರುವುದರಿಂದ ಪ್ರತೀಕ್ನ ಕುದ್ಮಾರಿನ ಮನೆಗೆ ಹುಡುಕಿಕೊಂಡು ಹೋಗಿದ್ದರು. ಪ್ರತೀಕ್ ಸಂದೀಪ್ ನನ್ನು ಕೊಲೆ ಮಾಡಿರುವ ವಿಚಾರ ನಮಗಿಂತಲೂ ಮೊದಲೇ ಸುಧೀರ್ ಕುಮಾರ್ ಅವರಿಗೆ ಗೊತ್ತಾಗಿದ್ದು ಅವರೇ ನಮಗೆ ಕರೆ ಮಾಡಿ ಮಾತನಾಡಲು ಬರುವಂತೆ ಹೇಳಿದ್ದರು, ಅಲ್ಲದೆ ಮತ್ತೊಮ್ಮೆ ಕರೆ ಮಾಡಿ ನಾನು ಪ್ರತೀಕ್ನ್ನು ಬಂಧಿಸುವಂತೆ ಮಾಡ್ತೇನೆ, ನೀವು ದೂರು ನೀಡಿ ಎಂದು ಹೇಳಿದ್ದರು. ಎಲ್ಲವೂ ಇವರಿಗೆ ತಿಳಿದಿದೆ, ಯಾರೋ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಸಂದೀಪ್ನನ್ನು ಪ್ರತೀಕ್ ಒಬ್ಬನೆ ಕೊಲೆ ಮಾಡಲು ಸಾಧ್ಯವಿಲ್ಲ, ಇದರ ಹಿಂದೆ ಜನ ಇದ್ದಾರೆ, ಆದರೆ ತನಿಖೆಯ ವೇಳೆ ನಾನೊಬ್ಬನೆ ಕೊಲೆ ಮಾಡಿರುವ ವಿಚಾರ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದರೂ ಇದು ಪ್ರತೀಕ್ ನಲ್ಲಿ ಈ ರೀತಿ ಹೇಳಿಕೆ ನೀಡಿಸಿದ್ದು, ಬಿಟ್ಟರೆ ಪ್ರತೀಕ್ ಒಬ್ಬನೆ ಅಲ್ಲ ಇನ್ನೂ ಹಿಂದೆ ಜನ ಇದ್ದಾರೆ, ನಮಗೆ ಒಟ್ಟಿನಲ್ಲಿ ರಾಜಕೀಯ ಮಾಡದೆ ಸಮಗ್ರ ತನಿಖೆ ಆಗಬೇಕು, ನಮಗೆ ನ್ಯಾಯ ಸಿಗಬೇಕು, ತಪ್ಪಿತಸ್ಥ ಎಸ್.ಐ. ಹಾಗೂ ಪೊಲೀಸ್ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಸಂದೀಪ್ ನನ್ನು ಪ್ರತೀಕ್ ಯಾಕೆ ಕೊಲೆ ಮಾಡಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಕುಟುಂಬಸ್ಥರು, ನಮಗೆ ತಿಳಿದಿರುವ ಮಟ್ಟಿಗೆ ಸಂದೀಪ್ ಪ್ರತೀಕ್ಗೆ ೮೦ ಸಾವಿರಷ್ಟು ಹಣ ಸಾಲ ತೆಗೆದು ಕೊಟ್ಟಿದ್ದಾನೆ, ಬಳಿಕ ಅದನ್ನು ಸಂದೀಪ್ ಪಾವತಿಸಿದ್ದು ಪ್ರತೀಕ್ನಲ್ಲಿ ದುಡ್ಡು ಕೊಡುವಂತೆ ಕೇಳಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂದೀಪ್ನ ಚಿಕ್ಕಪ್ಪ ಗಂಗಾಧರ, ಅತ್ತೆ ರಾಧಿಕ ಬಾಳುಗೋಡು, ಅಜ್ಜ ಬಾಳಪ್ಪ ಬೈಲು ಉಪಸ್ಥಿತರಿದ್ದರು.