ಅರ್ಜಿದಾರರಿಂದ ರಾಜ್ಯ ಧಾರ್ಮಿಕ ಪರಿಷತ್, ದತ್ತಿ ಇಲಾಖಾ ಆಯುಕ್ತರಿಗೆ ಮನವಿ
ಪುತ್ತೂರು: ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಾತಿಗೆ ಸಂಬಂಧಿಸಿ ಅರ್ಜಿ ಆಹ್ವಾನಿಸಲಾಗಿದ್ದ ಪ್ರಕ್ರಿಯೆ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿ,ನಿಯಮಾನುಸಾರ ಮೀಸಲಾತಿಯನ್ನು ಒದಗಿಸುವ ಮೂಲಕ ಕಟ್ಟುನಿಟ್ಟಾಗಿ ಸಮಿತಿ ರಚನೆ ಪ್ರಕ್ರಿಯೆ ನಡೆಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಈ ಕುರಿತು ಸೇಡಿಯಾಪು ದಿ.ಅನಂತೇಶ್ವರ ಭಟ್ ಎಂಬವರ ಮಗಳು ವಸಂತಿ ಯಾನೆ ವಸಂತಲಕ್ಷ್ಮೀ ಎಂಬವರು ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಧಾರ್ಮಿಕ ದತ್ತಿ ಇಲಾಖೆಯ ಕಾರ್ಯದರ್ಶಿ, ರಾಜ್ಯ ಧಾರ್ಮಿಕ ಪರಿಷತ್, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿಯವರನ್ನು ಪ್ರತಿವಾದಿಗಳನ್ನಾಗಿಸಿ, ಸಂವಿಧಾನದ 226ನೇ ವಿಧಿಯನ್ವಯ ರಿಟ್ ಅರ್ಜಿ ಸಲ್ಲಿಸಿದ್ದರು.
ಧಾರ್ಮಿಕ ಪರಿಷತ್,ಇಲಾಖಾ ಆಯುಕ್ತರಿಗೆ ಮನವಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ವ್ಯವಸ್ಥಾಪನಾ ಸಮಿತಿ ರಚನೆ ನಿಟ್ಟಿನಲ್ಲಿ ಆಸಕ್ತ ಭಕ್ತಾಧಿಗಳಿಂದ ಅರ್ಜಿ ಆಹ್ವಾನಿಸಿ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಜುಲೈ 16ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ವಸಂತಿ ಯಾನೆ ವಸಂತಲಕ್ಷ್ಮೀಯವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆಯನ್ನು ಕರ್ನಾಟಕ ಕಾಯ್ದೆ ನಂ.12/2012ರಂತೆ ಕಟ್ಟುನಿಟ್ಟಾಗಿ ಮಾಡುವಂತೆ ಸೂಚಿಸಿದೆ.
ಈ ಕಾಯ್ದೆಯಂತೆ ಸಮಿತಿಯಲ್ಲಿ ಒಂದು ಸ್ಥಾನವನ್ನು ಪ.ಜಾತಿ ಅಥವಾ ಪ.ಪಂಗಡಕ್ಕೆ ಮೀಸಲಿಡಬೇಕು. ಎರಡು ಸ್ಥಾನವನ್ನು ಮಹಿಳೆಯರಿಗೆ ಮತ್ತು ಕನಿಷ್ಟ ಒಂದು ಸ್ಥಾನವನ್ನು ದೇವಳದ ಸ್ಥಳೀಯ ಪ್ರದೇಶದವರಿಗೆ ನೀಡಬೇಕು. ನಾನೂ ಇದರಲ್ಲಿ ಓರ್ವ ಆಕಾಂಕ್ಷಿಯಾಗಿದ್ದೇನೆ. ಸೆಕ್ಷನ್ 25(2)(ಡಿ)ಪ್ರಕಾರ ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗುವ ಅರ್ಹತೆ ಇಲ್ಲವಾಗಿದ್ದು ಇದೆಲ್ಲವನ್ನೂ ಪಾಲಿಸಿಕೊಂಡು ವ್ಯವಸ್ಥಾಪನಾ ಸಮಿತಿ ರಚಿಸುವಂತೆ ತಾನು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ದೇವಳದ ಕಾರ್ಯನಿರ್ವಹಣಾಧಿಕಾರಿಯವರೊಂದಿಗೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ಮಾಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿರುವುದಾಗಿ ದೂರುದಾರೆ ವಸಂತಿ ಯಾನೆ ವಸಂತಲಕ್ಷ್ಮೀಯವರು ರಾಜ್ಯ ಧಾರ್ಮಿಕ ಪರಿಷದ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನ.29ರಂದು ಮನವಿ ಸಲ್ಲಿಸಿದ್ದಾರೆ.