ಪರ್ಪುಂಜ ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವೈದಿಕ ಕಾರ್ಯಕ್ರಮಗಳು

0

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಶಿಲಾ ಪ್ರತಿಷ್ಠಾ ಕಲಶೋತ್ಸವ ನ.7ರಂದು ನಡೆಯಲಿದ್ದು, ಇದರ ಅಂಗವಾಗಿ ನ.6 ರಂದು ಸಂಜೆ ತಂತ್ರಿಗಳು ಸಾನಿಧ್ಯಕ್ಕೆ ಆಗಮಿಸಿದರು.

ತಂತ್ರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ ನಡೆದು ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸದ ಬಳಿಕ ಸೇರಿದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಅನ್ನಪ್ರಸಾದ ವಿತರಣೆ ನಡೆಯಿತು.


ಇಂದು ಶಿಲಾ ಪ್ರತಿಷ್ಠಾ ಕಲಶಾಭಿಷೇಕ/ ಧಾರ್ಮಿಕ ಸಭಾ ಕಾರ್ಯಕ್ರಮ
ನ.7 ರಂದು ಬೆಳಿಗ್ಗೆ 7 ರಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ ನಡೆದು 10.04 ರಿಂದ 10.58ರ ಧನು ಲಗ್ನದಲ್ಲಿ ಶ್ರೀ ರಕ್ತೇಶ್ವರಿ ಪರಿವಾರ ದೈವಗಳ ಶಿಲಾ ಪ್ರತಿಷ್ಠೆ ನಡೆದು ಕಲಶಾಭಿಷೇಕ, ತಂಬಿಲ ಸೇವೆ ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾನಿಧ್ಯದ ಆಡಳಿತ ಸಮಿತಿ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಗೌರವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here