ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಜಿ.ಎಂ. ಕೀರ್ತಿ ಇವರು ಪ್ರಸ್ತುತ ಶೈಕ್ಷಣಿಕ ವರ್ಷದ 67ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ 14ರ ವಯೋಮಾನದ ಎತ್ತರ ಜಿಗಿತ ವಿಭಾಗದಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಹೆಸರು ತಂದಿರುತ್ತಾರೆ ಹಾಗೂ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಪಡೆದಂತಹ ಏಕೈಕ ಪದಕವಾಗಿರುತ್ತದೆ. ಈ ಕ್ರೀಡಾಪಟುವಿನ ಸಾಧನೆಯನ್ನು ಗುರುತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಲಕ್ಷ ಸಹಾಯಧನವನ್ನು ಘೋಷಣೆ ಮಾಡಿರುತ್ತಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಮತ್ತು ಮುಂದೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳಲು ಅಭ್ಯಾಸ ನಡೆಸಲು ಹಾಗೂ ಮುಂದಿನ ಕ್ರೀಡಾಕ್ಷೇತ್ರದ ಉಜ್ವಲ ಭವಿಷ್ಯಕ್ಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ನೆರವಿನ ಹಸ್ತವನ್ನು ನೀಡಿದರು.
ವಿದ್ಯಾರ್ಥಿನಿಯ ಸಾಧನೆಯನ್ನು ಮೆಚ್ಚಿದ ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿನಿ ಮನೆಗೆ ತೆರಳಿ ಅಭಿನಂದಿಸಿದ್ದರು. ಮನೆಗೆ ತೆರಳಿದ ವೇಳೆ ಆಕೆಯ ಸಂಕಷ್ಟವನ್ನು ಅರಿತ ಶಾಸಕರು ಸರಕಾರದಿಂದ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದರು. ಶಾಸಕರ ಪತ್ರವನ್ನು ಪರಿಗಣಿಸಿದ ಸರಕಾರ ಈ ನಗದನ್ನು ಘೋಷಣೆ ಮಾಡಿದೆ.