ಉಪ್ಪಿನಂಗಡಿ:ಇಲ್ಲಿನ ಬಸ್ ನಿಲ್ದಾಣದ ಬಳಿಯ ಗ್ರಾಮ ಪಂಚಾಯತ್ ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ (34ವ.) ಎಂಬವರ ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ಮನೆ ದಿ.ರವಿ ಮುಗೇರ ಎಂಬವರ ಮಗ ಬಾಬು ಯಾನೆ ರುದ್ರ(68 ವ.) ಬಂಧಿತ ಆರೋಪಿ.ಈತನನ್ನು ಉಳ್ಳಾಲ ತಾಲ್ಲೂಕಿನ ದೇರಳಕಟ್ಟೆ ಎಂಬಲ್ಲಿಂದ ವಶಕ್ಕೆ ಪಡೆದಿದ್ದು ಆರೋಪಿಯು ಕೃತ್ಯವೆಸಗಿದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ಸಮಯದ ಹಿಂದೆ ಸ್ಥಳೀಯ ಬಾರ್ ಆಂಡ್ ರೆಸ್ಟೋರೆಂಟ್, ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ತಿಮ್ಮತಿ ಬೆಂಗರ ಎಂಬವರ ಮಗ ದೀಪಕ್ ಬೆಂಗರ ಕಳೆದ ಬುಧವಾರದಂದು ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಮೃತ ದೀಪಕ್ ನಿರ್ಗತಿಕನಂತೆ ಬೀದಿ ಬದಿ, ಜನ ವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಕಗ್ಗಂಟಾಗಿತ್ತು.ಆದರೂ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಹಠಕ್ಕೆ ಬಿದ್ದ ಪೊಲೀಸರು ಬಸ್ ನಿಲ್ದಾಣದ ಪರಿಸರದಲ್ಲಿನ ಎಲ್ಲಾ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಅಮೂಲಾಗ್ರ ಪರಿಶೀಲನೆಗೆ ಒಳಪಡಿಸಿದಾಗ ಆರೋಪಿಯ ಚಲನವಲನಗಳು ರಾತ್ರಿ ವೇಳೆ ಆ ಪರಿಸದರಲ್ಲಿ ದಾಖಲಾಗಿತ್ತು.ತನಿಖೆ ಮುಂದುವರಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಮಂಗಳವಾರ ರಾತ್ರಿ ಬಸ್ ನಿಲ್ದಾಣ ಪರಿಸರದಲ್ಲಿ ಅಲೆಯುತ್ತಿದ್ದ ಹಂತಕ, ಗಸ್ತು ನಿರತ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಸ್ ನಿಲ್ದಾಣದ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಪ್ರವೇಶಿಸಿ ಅಲ್ಲಿ ಮಲಗಲು ಮುಂದಾಗುತ್ತಾನೆ. ಸ್ವಲ್ಪ ಹೊತ್ತಿನ ಬಳಿಕ, ಆ ವೇಳೆಗಾಗಲೇ ಅಲ್ಲಿ ಮಲಗಿದ್ದ ದೀಪಕ್ ಬೆಂಗರ ಎಚ್ಚರಗೊಂಡು, ಇಲ್ಲಿ ಮಲಗಲು ಅವಕಾಶವಿಲ್ಲವೆಂದು ಈತನನ್ನು ಬೆದರಿಸುತ್ತಾನೆ.ಈತ ಇಲ್ಲಿಯ ಕಾವಲುಗಾರನಿರಬಹುದೆಂದು ಅಂದಾಜಿಸಿ ಅಲ್ಲಿಂದ ಮತ್ತೆ ಬಸ್ ನಿಲ್ದಾಣಕ್ಕೆ ಬಂದಿದ್ದ ಹಂತಕ, ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಹಣ ಮತ್ತು ಮೊಬೈಲ್ ಕಣ್ಮರೆಯಾಗಿರುವುದನ್ನು ಕಂಡು, ಅಲ್ಲಿ ಮಲಗಿರುವ ದೀಪಕ್ ಬೆಂಗರನೇ ಅದೆಲ್ಲವನ್ನೂ ಕದ್ದಿರಬಹುದೆಂದು ತರ್ಕಿಸಿ, ಆತನ ಮೇಲೆ ಆಕ್ರೋಶಗೊಂಡು ಪರಿಸರದಲ್ಲಿದ್ದ ದೊಣ್ಣೆಯೊಂದನ್ನು ಹಿಡಿದುಕೊಂಡು ಮತ್ತೆ ಅದೇ ಕಟ್ಟಡಕ್ಕೆ ಹೋದವನೇ ಮಲಗಿದ್ದ ದೀಪಕ್ ಬೆಂಗರನ ತಲೆಗೆ ಬಲವಾಗಿ ಹೊಡೆದು ಕೊಲೆಗೈದಿರುವ ಮಾಹಿತಿ ಲಭಿಸಿದೆ.
ಹನ್ನೆರಡು ವರ್ಷಗಳ ಹಿಂದೆ ಜಿಲ್ಲೆಯ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿ ಪೊಲೀಸ್ ಇಲಾಖೆಯಲ್ಲಿ ಗುರುತಿಸಲ್ಪಟ್ಟ ಕಳ್ಳನಾಗಿದ್ದರಿಂದ ರಾತ್ರಿ ಗಸ್ತು ನಿರತ ಪೊಲೀಸರಿಗೆ ತನ್ನ ಪರಿಚಯ ಸಿಗಬಹುದೆಂಬ ಭೀತಿಯಿಂದ ಮಾಡಿದ ತಪ್ಪಿಸಿಕೊಳ್ಳುವ ಆರೋಪಿಯ ಯತ್ನವೇ ಅಸ್ಸಾಂ ಮೂಲದ ದೀಪಕ್ ಬೆಂಗರನ ಪಾಲಿಗೆ ಯಮ ಸ್ವರೂಪಿಯಾದಂತಾಗಿದೆ.
ಹಠಕ್ಕೆ ಬಿದ್ದು ಸವಾಲನ್ನು ಭೇದಿಸಿದ ಪೊಲೀಸರು-ಸಾರ್ವಜನಿಕರಿಂದ ಪ್ರಶಂಸೆ: ಕೊಲೆಯಾದ ಅಸ್ಸಾಂನ ವ್ಯಕ್ತಿ ತನ್ನೆಲ್ಲಾ ಬಂಧುತ್ವವನ್ನು ಬಿಟ್ಟು ಅಲೆಮಾರಿಯಂತೆ ಬದುಕು ಸಾಗಿಸುತ್ತಿದ್ದಾತ.ಈತ ಕೊಲೆಯಾದಾಗ ಈ ಬಗ್ಗೆ ಯಾವುದೇ ಸಣ್ಣ ಕುರುಹೂ ಸ್ಥಳದಲ್ಲಿ ಇರಲಿಲ್ಲ.ಯಾರೋ ಉತ್ತರ ಭಾರತೀಯರೇ ಈತನನ್ನು ಕೊಲೆಗೈದು ಪರಾರಿಯಾಗಿಬಹುದೆಂದು ಎಲ್ಲರೂ ಭಾವಿಸಿದ್ದರು.ಆದರೆ ಈ ಕೊಲೆ ಪ್ರಕರಣವನ್ನು ಭೇಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಅವಿನಾಶ್ ಹೆಚ್.ಗೌಡ ಅವರು ತಮ್ಮ ಸಿಬ್ಬಂದಿಗಳ ಜೊತೆಗೂಡಿ ತನಿಖಾ ಹಂತದಲ್ಲಿ ತಮ್ಮ ಪೊಲೀಸ್ ಚಾಕಚಕ್ಯತೆಯನ್ನು ಮೆರೆದರು.ಕೊಲೆಯಾದ ದೀಪಕ್ ಅಲೆಮಾರಿಯಂತೆ ಬದುಕುತ್ತಿದ್ದುದಲ್ಲದೆ, ಮದ್ಯವ್ಯಸನಿಯೂ ಆಗಿದ್ದರಿಂದ ಅಲೆಮಾರಿಗಳಂತೆ ಬದುಕುತ್ತಿದ್ದವರ ಮತ್ತು ಈತನೊಂದಿಗೆ ಕೆಲಸ ಮಾಡುತ್ತಿದ್ದವರ ಜಾಡು ಹಿಡಿದು ತನಿಖೆ ಮಾಡಿದರಲ್ಲದೇ, ಈತ ಹೋಗುತ್ತಿದ್ದ ಬಾರ್‌ಗಳ ಸಿಸಿ ಕ್ಯಾಮರಾ, ಸ್ಥಳೀಯ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪಡೆದರು, ಆಗ ತುಳು ಭಾಷಿಗನ ಕೈವಾಡ ಇದರಲ್ಲಿರುವುದು ಗೊತ್ತಾಯಿತು.ಕೊನೆಗೂ ಈಗ ಆರೋಪಿಯ ಬಂಧನವಾಗಿದೆ.
ಯಾವುದೇ ದೊಡ್ಡ ಮಟ್ಟದ ಕುರುಹುಗಳು ಇಲ್ಲದೆ ಇದ್ದರೂ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ವಾರದೊಳಗೆ ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಈಗ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರರವರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರುಣ್ ಗೌಡರವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ರವರ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಹೆಚ್, ಸಿಬ್ಬಂದಿಗಳಾದ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹದೇವ, ನಾಗರಾಜ್, ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಪ್ರವೀಣ್ ರೈ, ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಹರಿಶ್ಚಂದ್ರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿವಾಕರ್‌ರವರ ವಿಶೇಷ ತಂಡದವರು ಆರೋಪಿಯನ್ನು ದಸ್ತಗಿರಿ ಮಾಡಿದ್ದು ಪ್ರಕರಣದ ತನಿಖೆ ಮುಂದುವರೆದಿದೆ.