ಪುತ್ತೂರು: ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಾಡಿನ ಶಿಕ್ಷಣ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ನೀಡುವ ಕುಂದಾಪುರ ತಾಲೂಕಿನ ಬಸ್ರೂರು ಅಪಣ್ಣ ಹೆಗ್ಡೆ ಪ್ರಶಸ್ತಿಗೆ ಈ ಬಾರಿ ಸಂಶೋಧಕ, ವಿಮರ್ಶಕ, ಅನುವಾದಕ ಹಾಗೂ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಆಯ್ಕೆಯಾಗಿದ್ದಾರೆ.
ಕಳೆದ ಆರು ದಶಕಗಳಿಂದ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಇವರು ಕನ್ನಡ ಹಾಗೂ ತುಳು ಭಾಷೆಯ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ವಿಭಾಗದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ 34 ವರ್ಷ ಅಧ್ಯಾಪನ ಹಾಗೂ ಸಂಶೋಧನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಜರ್ಮನಿಯ ವ್ಯೂಕ್ ಬುರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸಾಂಸ್ಕೃತಿಕ, ಕಲಾ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. 27ಕ್ಕಿಂತಲೂ ಹೆಚ್ಚು ಕೃತಿಗಳು, 5 ಇಂಗ್ಲಿಷ್ ಗ್ರಂಥಗಳು, ಅನುವಾದ ಗ್ರಂಥಗಳು, ಸಂಪಾದನೆ ಗ್ರಂಥಗಳು, ವಿದೇಶ ಪ್ರವಾಸ ಕಥನಗಳು, ಬ್ಲಾಗ್ ಬರಹಗಳು, ಅಂಕಣಗಳು ಸೇರಿ ಅಕ್ಷರಮುದ್ರೆಯ ಸಾಂಸ್ಕೃತಿಕ ಹಾಗೂ ಜನಪದ ಕ್ಷೇತ್ರಕ್ಕೆ ಸ್ಮರಣೀಯ ಕೊಡುಗೆ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮಡಿಲನ್ನು ಸೇರಿದೆ. ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನ, ಕರ್ನಾಟಕ ಜಾನಪದ ಸಮ್ಮೇಳನ, ಕರ್ನಾಟಕ ಸಂಸ್ಕೃತಿ ಸಮ್ಮೇಳನ, ಕರ್ನಾಟಕ ದೇಸಿ ಸಮ್ಮೇಳನ ಹಾಗೂ ಕುವೈಟ್ ತುಳು ಸಮ್ಮೇಳನ ಸೇರಿದಂತೆ ಅನೇಕ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. ಪುಣಚ ಗ್ರಾಮದ ಅಗ್ರಾಳ ನಿವಾಸಿಯಾದ ಇವರು ಪ್ರಸ್ತುತ ಮಂಗಳೂರು ನಿವಾಸಿಯಾಗಿದ್ದಾರೆ.
ಡಿ.24ರಂದು ಪ್ರಶಸ್ತಿ ಪ್ರದಾನ
ಶಿಕ್ಷಣ ಕ್ಷೇತ್ರದಲ್ಲಿ ಆರು ದಶಕಗಳ ಇವರ ಅನುಪಮ ಸೇವೆ ಗುರುತಿಸಿ ಡಿ.24ರಂದು ಸಂಜೆ 6 ಗಂಟೆಗೆ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯುವ ಬಿ.ಅಪ್ಪಣ್ಣ ಹೆಗ್ಡೆ-90 ಕಾರ್ಯಕ್ರಮದಲ್ಲಿ ಬಿ.ಅಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಬಿ.ಅಪಣ್ಣ ಹೆಗ್ಡೆ ಜನ್ಮ ದಿನೋತ್ಸವ-90 ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮತ್ತು ಬಸ್ರೂರು ಅಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.