ಕಡಬ: ಪಿಜಕ್ಕಳ ಸಮೀಪದ ಪಾಲೋಳಿ ಎಂಬಲ್ಲಿ ವ್ಯಕ್ತಿಯೋರ್ವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಅಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮೂವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ಕಡಬ ಠಾಣೆಯಲ್ಲಿ ಪದವು ನಿವಾಸಿ ಒ.ವಿ.ಅಬ್ರಹಾಂ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೇರಳ ರಾಜ್ಯದ ಪತ್ತನತಿಟ್ಟು ವಿಲಕಾತು ನಿವಾಸಿ ಸಾಬು ಚೆರಿಯನ್ ಎಂಬವರು ದೂರು ನೀಡಿ, ನನಗೆ ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಸರ್ವೆ ನಂಬರ್ 106ರಲ್ಲಿ ನಾಲ್ಕು ಎಕರೆ ತೋಟವಿದ್ದು ಡಿ.15ರಂದು ಬೆಳಿಗ್ಗೆ ಈ ತೋಟಕ್ಕೆ ಪದವು ನಿವಾಸಿ ಒ.ವಿ. ಅಬ್ರಹಾಂ ಹಾಗೂ ಇತರರು ಅಕ್ರಮ ಪ್ರವೇಶ ಮಾಡಿ ಅಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಶೋಭಿ, ದಿನೇಶ್, ಸಿಬಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಇಲ್ಲಿ ಟ್ಯಾಪಿಂಗ್ ಮಾಡಲು ಹೇಳಿದವರು ಯಾರು, ಇನ್ನು ಮುಂದೆ ಟ್ಯಾಪಿಂಗ್ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿರುತ್ತಾರೆ. ಹಲ್ಲೆಗೊಳಗಾದವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಒ.ವಿ.ಅಬ್ರಹಾಂ ಹಾಗೂ ಇತರರ ವಿರುದ್ದ ಬಿ.ಎನ್.ಎಸ್.176ರಡಿ ಪ್ರಕರಣ ದಾಖಲಾಗಿದೆ.