ಪುತ್ತೂರು: ಕಲಿಕೆಯ ಜೊತೆಯಲ್ಲಿ ಉದ್ಯೋಗಕ್ಕೋ, ಉದ್ಯಮಕ್ಕೋ ಪೂರಕವಾದ ಕೌಶಲ್ಯವನ್ನು ಹೊಂದಿದ್ದರೆ ಮಾತ್ರ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಾಲೂಕಿನ ಪೇರಮೊಗರುವಿನಲ್ಲಿರುವ ಜಿಕೆ ಇಂಡಸ್ಟ್ರೀಸ್ನ ಮಾಲಕ ಅಜಯ್ ಕೃಷ್ಣ.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನೆ ಮಾಡಿ ಮಾತಾಡಿದರು. ಮೊದಲಿಗೆ ಗುರಿಯನ್ನು ನಿರ್ಧರಿಸಿ ಅದಕ್ಕೆ ಬೇಕಾದ ತಾಂತ್ರಿಕತೆ, ಸಂವಹನ, ಸಮಯ ನಿರ್ವಹನೆ, ಸೃಜನಶಿಲತೆಯನ್ನು ಬೆಳೆಸಿಕೊಂಡು ಅದನ್ನು ಬೇಕಾದ ಕಡೆ ಪ್ರದರ್ಶಿಸುವ ಸಾಮರ್ಥ್ಯವನ್ನು ಗಳಿಸಿಕೊಂಡರೆ ಉನ್ನತ ಸ್ಥಾನಕ್ಕೆ ಏರುವುದು ಕಷ್ಟವೇನಲ್ಲ ಎಂದು ನುಡಿದರು.
ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್.ಬಿ ಮಾತನಾಡಿ ವಿಸಿಇಟಿ ಯಲ್ಲಿ ಕಲಿಕೆಗಾಗಿ ಸೇರಿದ್ದೀರಿ ಅದರ ವಿಸ್ತೃತ ರೂಪ ವಿಶನ್, ಕರೇಜ್, ಎಜುಕೇಶನ್ ಮತ್ತು ಟಾರ್ಗೆಟ್ ಇದರ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕಾಲೇಜಿನ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಮಾತನಾಡಿ ವಿದ್ಯಾರ್ಥಿಯೊಬ್ಬನಲ್ಲಿ ದೃಡತೆ, ನಮ್ರತೆ ಮತ್ತು ಆತ್ಮವಿಶ್ವಾಸವಿದ್ದಲಿ ಸಾಧಿಸಲು ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ವಿದ್ಯಾರ್ಥಿಗಳು ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಕೌಶಲ್ಯವನ್ನು ಅಭಿವೃದ್ದಿಪಡಿಸಕೊಳ್ಳಬೇಕು ಮತ್ತು ಕಾರ್ಪೋರೇಟ್ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರು. ಉದ್ಯಮಶೀಲತೆಯ ಹಾದಿಯಲ್ಲಿ ಎದುರಾಗುವ ಸಣ್ಣಪುಟ್ಟ ಸವಾಲುಗಳನ್ನು ನಿವಾರಿಸಿಕೊಳ್ಳುತ್ತಾ ಇತರರಿಗೆ ಉದ್ಯೋಗ ನೀಡುವ ಉದ್ಯಮಪತಿಗಳಾಗಬೇಕೆಂದು ಕರೆ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ನಿರ್ದೇಶಕ ಸತ್ಯನಾರಾಯಣ ಭಟ್, ಅಡ್ಮಿಶನ್ ಹಾಗೂ ಪ್ಲೇಸ್ಮೆಂಟ್ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಬಿಎ ವಿಭಾಗದ ನಿರ್ದೆಶಕ ಡಾ.ರಾಬಿನ್ ಮನೋಹರ್ ಶಿಂಧೆ ಸ್ವಾಗತಿಸಿ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ.ಕೆ ವಂದಿಸಿದರು. ಪ್ರೊ.ನೀಮಾ ಹಾಗೂ ಪ್ರೊ.ಮೇಘ ಕಾರ್ಯಕ್ರಮ ನಿರ್ವಹಿಸಿದರು.