ಬೆಟ್ಟಂಪಾಡಿ: ಮುಂಡೂರು -1 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಮುಂಡೂರು ಇದರ ವಾರ್ಷಿಕೋತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ ದ. 14ರಂದು ರಾತ್ರಿ ನಡೆಯಿತು.
ಶತಮಾನೋತ್ಸವ ಕಾಣುವ ಸುಯೋಗ ಬರಲಿ – ವೆಂಕಟ್ರಮಣ ಬೋರ್ಕರ್
ಸಭಾಧ್ಯಕ್ಷತೆ ವಹಿಸಿದ್ದ ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ರವರು ಮಾತನಾಡಿ ʻಇಲ್ಲಿನ ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಹೊಸ ಶಾಲೆಯನ್ನೇ ಸ್ಥಾಪಿಸಬಹುದು. ವಾರ್ಷಿಕೋತ್ಸವ ಕಾರ್ಯದಲ್ಲಿ ಅಧ್ಯಕ್ಷರಾದಿ ಪ್ರತಿಯೊಬ್ಬರೂ ಶ್ರಮದಾನದಲ್ಲಿ ಪಾಲ್ಗೊಂಡಿರುವುದು ಅತ್ಯಂತ ವಿಶೇಷವಾಗಿದೆ. ಜನರಿಂದ ದೊರೆತ ಯೋಗ್ಯತೆಯಿಂದ ಅಧ್ಯಕ್ಷತೆಯ ಯೋಗ ನನ್ನ ಪಾಲಿಗೆ ಬಂದಿದೆ. ಈ ಶ್ರೇಯಸ್ಸು ಜನರಿಗೆ ಲಭಿಸಬೇಕು. 50 ನೇ ವರ್ಷದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವ ಸುಯೋಗ ಬಂದಿತ್ತು. ವಜ್ರ ಮಹೋತ್ಸವ ಮತ್ತು ಶತಮಾನೋತ್ಸವವನ್ನು ನಾವೆಲ್ಲಾ ಇದೇ ರೀತಿ ಕಾಣುವ ಸುಯೋಗ ಬರಲಿʼ ಎಂದು ಆಶಿಸಿದರು.
ಕೆರೆಯ ನೀರನು ಕೆರೆಗೆ ಚೆಲ್ಲುವ ಕಾರ್ಯ ನಡೆದಿದೆ – ನವೀನ್ ಸ್ಟೀಫನ್
ಪುತ್ತೂರು ಬಿಆರ್ಸಿಯ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ರವರು ಮಾತನಾಡಿ ʻಶಾಲೆಯ ಮೇಲೆ ಸಮುದಾಯಕ್ಕಿರುವ ಪ್ರೀತಿ ನೋಡಿ ಖುಷಿಪಟ್ಟೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಕಾರ್ಯವನ್ನು ಮಾಡಿದರೆ ಶಾಲೆಯ ಅಭಿವೃದ್ಧಿ ಎಷ್ಟರಮಟ್ಟಿಗೆ ಸಾಧಿಸಬಹುದೆಂಬುದಕ್ಕೆ ಈ ಶಾಲೆ ಉತ್ತಮ ನಿದರ್ಶನವಾಗಿದೆ. ಈ ಶಾಲೆ ಇನ್ನಷ್ಟು ಬೆಳೆಯಲಿʼ ಎಂದು ಆಶಿಸಿದರು.
ಶಾಲೆಯ ಅಭಿವೃದ್ದಿಯ ಸಮಯದಲ್ಲಿ ಕಠಿಣ ಸವಾಲುಗಳಿತ್ತು – ರವೀಂದ್ರ ಶೆಟ್ಟಿ ನುಳಿಯಾಲು
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ ʻಇಂದಿನ ವಾರ್ಷಿಕೋತ್ಸವ ಸಂಭ್ರಮವನ್ನು ನೋಡಿದರೆ 20 ವರ್ಷಗಳ ಹಿಂದೆ ಇಲ್ಲಿ ನಾನು ಮತ್ತು ಬೋರ್ಕರ್ರವರುಗಳ ತಂಡ, ವಿಷ್ಣುಭಟ್ರವರು ನಡೆಸಿದ ವಾರ್ಷಿಕೋತ್ಸವ ನೆನೆಪಾಗುತ್ತದೆ. ಶಾಲೆ ಬೀಳುವ ಹಂತದಲ್ಲಿದ್ದಾಗ ಅದರ ಮರಮುಂಗಟ್ಟುಗಳಿಂದ ಛಾವಣಿ ದುರಸ್ತಿ ಮಾಡಿಕೊಟ್ಟಿದ್ದೆ. ವೇದಿಕೆ ನಿರ್ಮಾಣ ಮಾಡಿಕೊಟ್ಟಿದ್ದೆವುʼ ಎಂದು ಹೇಳಿ ಶಾಲೆಯ ದುರಸ್ತಿ, ಕಟ್ಟಡ ನಿರ್ಮಾಣ ವೇಳೆ ಆಗಿರುವ ಕಷ್ಟ ಶ್ರಮವನ್ನು ಸ್ಮರಿಸಿದರು. ʻಇಲ್ಲಿನ ಪ್ರಮುಖರ ಸಮಾಜಸೇವೆಯ ತ್ಯಾಗ ಆಗಿದೆ. ಶಾಲೆಯ ಚಟುವಟಿಕೆಗಳಲ್ಲಿ ಸಮಾಜದ ಜನರು ಸಕ್ರೀಯವಾಗಿ ತೊಡಗಿಸಿಕೊಳ್ಳುವುದು ಅವಶ್ಯಕವಾದುದು. ಪ್ರತೀ ವರ್ಷ ವಾರ್ಷಿಕೋತ್ಸವ ನಡೆಸಿ ಮಕ್ಕಳಿಗೆ ಅವಕಾಶ ದೊರೆಯುವಂತಾಗಬೇಕುʼ ಎಂದರು.
ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಕೊಡಬೇಕು – ಸಂತೋಷ್ ಕುಮಾರ್ ಶೆಟ್ಟಿ
ಮುಖ್ಯ ಅತಿಥಿ ಮಂಗಳೂರಿನ ಮಾತಾ ಡೆವಲಪ್ಪರ್ಸ್ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿಯವರು ಮಾತನಾಡಿ ʻ೪೫ ವರ್ಷಗಳ ಹಿಂದೆ ಈ ಮಣ್ಣಿನಲ್ಲಿ ನಡೆದಾಡಿದವನು. ವಾರಿಜಾ ಟೀಚರ್ರವರು ನನ್ನನ್ನು ಕೈ ಹಿಡಿದು ಕರೆತಂದು ಸಂಸ್ಕಾರ ಭರಿತ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡಿದವರು. ಮಕ್ಕಳಿಗೆ ಆಸ್ತಿ ಮಾಡಿಡುವುದು ಮುಖ್ಯವಲ್ಲ, ಮಕ್ಕಳನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಬೇಕು. ನಾವು ಬೆಳೆಯವುದರ ಜೊತೆಗೆ ಸಮಾಜವನ್ನು ಬೆಳೆಸಬೇಕುʼ ಎಂದರು.
ಸರಕಾರಿ ಶಾಲೆ ಎಂಬ ಕಡೆಗಣನೆ ಬೇಡ – ವಾರಿಜಾ ಕೆ.
ನಿವೃತ್ತ ಶಿಕ್ಷಕಿ ವಾರಿಜಾ ಕೆ. ನುಳಿಯಾಲುರವರು ಮಾತನಾಡಿ ʻಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ, ಹಿರಿಯ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಸರಕಾರಿ ಶಾಲೆಗೆ ಮಕ್ಕಳನ್ನು ಯಾಕೆ ಕಳುಹಿಸಬೇಕೆಂಬ ಭಾವನೆ ಕೆಲವರಲ್ಲಿದೆ. ಆದರೆ ಇಂದು ಸಮಾಜದ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಈ ಶಾಲೆಯ ಹಿರಿಯ ವಿದ್ಯಾರ್ಥಿಗಳೇ ಆಗಿದ್ದಾರೆ. ಶಾಲೆಯ ಅವಶ್ಯಕತೆಗಳನ್ನು ಪೂರೈಸಲು ಎಲ್ಲರೂ ಒಮ್ಮತದಿಂದ ಪಾಲ್ಗೊಳ್ಳಬೇಕುʼ ಎಂದರು.
ಪೋಷಕರ ಕಾರ್ಯ ಅದ್ಭುತವಾದುದು – ಪದ್ಮನಾಭ ಬೋರ್ಕರ್
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ರವರು ಮಾತನಾಡಿ ʻಕಳೆದ ಒಂದು ತಿಂಗಳಿನಿಂದ ನಾವು ಗಮನಿಸುತ್ತಿದ್ದೇವೆ. ನಿಡ್ಪಳ್ಳಿಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಜನರು ಪಾಲ್ಗೊಂಡ ರೀತಿಯಲ್ಲಿ ಶಾಲೆಯ ವಾರ್ಷಿಕೋತ್ಸವದಲ್ಲಿ ಜನತೆ ಪಾಲ್ಗೊಂಡಿದೆ. ಅದ್ಭುತ ಕಾರ್ಯ ಈ ಭಾಗದ ಪೋಷಕರಿಂದ ನಡೆದಿದೆ. ಈ ಶಾಲೆ ಖಂಡಿತಾ ಮುಂದಕ್ಕೆ ಉಳಿದು ಬೆಳೆಯಲಿದೆ. ಇದಕ್ಕೆ ನಾವೆಲ್ಲಾ ಸಹಕಾರ ನೀಡೋಣʼ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ರವರು ಮಾತನಾಡಿ ʻ2005 ರಲ್ಲಿ ಸುವರ್ಣ ಮಹೋತ್ಸವದ ಬಳಿಕ ಇಲ್ಲಿ ವಾರ್ಷಿಕೋತ್ಸವ ಕಂಡಿಲ್ಲ. ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡದಿದ್ದರೆ ಅವರಿಗೆ ನೀಡುತ್ತಿರುವ ಶಿಕ್ಷಣಕ್ಕೆ ಅರ್ಥವಿಲ್ಲದಂತಾಗುತ್ತದೆ. ಈ ಶಾಲೆಯನ್ನು ಉಳಿಸಬೇಕಾದರೆ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದಕ್ಕೆ ಪೂರ್ವಭಾವಿಯಾಗಿ ಈ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದೇವೆ. ನಮ್ಮಲ್ಲಿ ಎಲ್ಲಾ ಸೌಲಭ್ಯಗಳೂ ಇವೆ. ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಬರುವ ವರ್ಷದಿಂದ ಕೆ.ಜಿ. ಯನ್ನು ಆರಂಭಿಸಬಹುದಾಗಿದೆ. ವಾರ್ಷಿಕೋತ್ಸವ ಇವತ್ತಿಗೆ ಕೊನೆಯಾಗುವುದಿಲ್ಲ. ಪ್ರತೀ ವರ್ಷ ನಡೆಯುವಂತಾಗಬೇಕು.
ಈ ಕಾರ್ಯಕ್ರಮದಲ್ಲಿ ಪೋಷಕರು, ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡ ರೀತಿ ಕಂಡರೆ ಅವರವರ ಮನೆಯಲ್ಲಿ ಮಾಡಿದಂತಾಗಿದೆ. ಜವಾಬ್ದಾರಿ ನಾನು ತೆಗೆದುಕೊಂಡಿರಬಹುದು. ಆದರೆ ಪೋಷಕರ ಸಹಕಾರ ಅತ್ಯದ್ಭುತವಾಗಿ ದೊರೆತುದುದರ ಪರಿಣಾಮ ಇಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ನಡೆಯುವಂತಾಗಿದೆ ಎಂದರು.
ಸನ್ಮಾನ
ನಿರ್ಮಲಾ ಸುರತ್ಕಲ್, ನಿವೃತ್ತ ಶಿಕ್ಷಕ ವಿಷ್ಣು ಭಟ್, ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ಪೂಜಾರಿ, ಮೈಸೂರು ರೈಲ್ವೇ ಇಲಾಖೆಯಲ್ಲಿ ಸಿಬಂದಿಯಾಗಿರುವ ಅಣ್ಣಪ್ಪ ನಾಯ್ಕ್ ರವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಶಿಕ್ಷಕರಿಗೆ ಗೌರವಾರ್ಪಣೆ
ಶಾಲಾ ಮುಖ್ಯಗುರು ಆಶಾ ಗೋವಿಂದ ಭಟ್ ಮತ್ತು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಅಡುಗೆ ಸಿಬಂದಿಯವರನ್ನು ಗೌರವಿಸಲಾಯಿತು.
ರೆಂಜ ಮಣಿಕಂಠ ಚೆಂಡೆ ಮೇಳದವರನ್ನು ಗೌರವಿಸಲಾಯಿತು.
ದತ್ತಿನಿಧಿ ಹಸ್ತಾಂತರ
ನಿವೃತ್ತ ಶಿಕ್ಷಕ ವಿಷ್ಣುಭಟ್ ರವರು ಕಳೆದ ವರ್ಷ ಸ್ಥಾಪಿಸಿದ ದತ್ತಿನಿಧಿ ಹಣವನ್ನು ಈರ್ವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.
ನಿವೃತ್ತ ಎಲ್ಐಸಿ ಅಧಿಕಾರಿ ಚಿದಾನಂದ, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ಗುರುವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ಭಟ್ ಬಂಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಆಶಾ ಗೋವಿಂದ ಭಟ್ ಶಾಲಾ ವರದಿ ಮಂಡಿಸಿ, ಶಾಲೆಯಲ್ಲಿ ನಡೆದ ವಿವಿಧ ಕ್ರಿಯಾತ್ಮಕ ಹಾಗೂ ಸೃಜನಶೀಲ ಚಟುವಟಿಕೆಗಳ ಕುರಿತಂತೆ ಹೇಳಿದರು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ಛದ್ಮವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ರವರು ವಂದಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ಎನ್. ಕಾರ್ಯಕ್ರಮ ನಿರೂಪಿಸಿದರು. ರವಿ ಕೆ., ವಿಶ್ವನಾಥ, ಅನಂತ ಬೋರ್ಕರ್, ಶ್ರೀಮತಿ ಆಶಾಲತಾ, ಬಾಲಕೃಷ್ಣ ನೆಲ್ಲಿತ್ತಡ್ಕ, ಸತೀಶ್ ಬೀಜಂತ್ತಡ್ಕ, ರಮೇಶ್ ಎನ್., ಬಟ್ಯ ನಾಯ್ಕ ಅತಿಥಿಗಳನ್ನು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂಜೆ ಅಂಗನವಾಡಿ ಮಕ್ಕಳಿಂದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ʻಗುರುದಕ್ಷಿಣೆʼ ಪ್ರದರ್ಶನಗೊಂಡಿತು. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ, ಪೋಷಕರಿಂದ ನೃತ್ಯವೈವಿಧ್ಯ, ರಾತ್ರಿ 1326 ನೇ ಪ್ರಯೋಗದ ʻದೇವತೆʼ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಂಡಿತು., ಬಳಿಕ ಹಿರಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರಿಂದ ʻದಕ್ಷಾಧ್ವರʼ ಯಕ್ಷಗಾನ ಪ್ರದರ್ಶನಗೊಂಡಿತು.
ಮುಂದಿನ ವರ್ಷ ಆಂಗ್ಲ-ಕನ್ನಡ ಮಾಧ್ಯಮ ಶಾಲೆಯಾಗಲಿದೆ
ಈ ಶಾಲೆಯಲ್ಲಿ 1-3 ತರಗತಿಯ ಶಿಕ್ಷಣ ಪಡೆದಿದ್ದರೂ, ಅದು ನನ್ನಲ್ಲಿ ಸಂಸ್ಕಾರಭರಿತ ಜೀವನಕ್ಕೆ ಭದ್ರ ತಳಪಾಯವಾಗಿದೆ ಎಂದ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿಯವರು ಬಂಟ್ವಾಳ ತಾಲೂಕಿನ ಮಜಿ ಶಾಲೆಯನ್ನು ದತ್ತು ತೆಗೆದುಕೊಂಡು ಮಾಡಿದ ಅಭಿವೃದ್ದಿಯನ್ನು ನೆನಪಿಸಿ, ಮುಂಡೂರು-1 ಶಾಲೆಯ ಎಲ್ಕೆಜಿ ಗೌರವ ಶಿಕ್ಷಕಿಯ ಒಂದು ವರ್ಷದ ವೇತನವನ್ನು ನನ್ನ ಸಂಸ್ಥೆಯಿಂದ ನೀಡಲು ಬದ್ದನಾಗಿದ್ದೇನೆ. ಮುಂದಿನ ವರ್ಷ ಮುಂಡೂರು -1 ಆಂಗ್ಲ ಮತ್ತು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾಡುವಲ್ಲಿ ನನ್ನ ಸಂಪೂರ್ಣ ಸಹಕಾರವಿದೆ. ನನ್ನಂತೆಯೇ ನುಳಿಯಾಲು ಮನೆತನದ ಹಲವಾರು ಮಂದಿ ಈ ಕಾರ್ಯದಲ್ಲಿ ಪ್ರೋತ್ಸಾಹ ಕೊಡುತ್ತಾರೆಂಬ ಭರವಸೆ ನನಗಿದೆʼ ಎಂದರು.
ಮೆಚ್ಚುಗೆಗೆ ಪಾತ್ರವಾದ ಅಚ್ಚುಕಟ್ಟಿನ ವ್ಯವಸ್ಥೆ, ಊಟೋಪಚಾರ
ಶಾಲೆಯ ವಾರ್ಷಿಕೋತ್ಸವದ ಅಲಂಕಾರ ಮತ್ತು ಇನ್ನಿತರ ವ್ಯವಸ್ಥೆಗಳು ಅತ್ಯಂತ ಅಚ್ಚುಕಟ್ಟಾಗಿ ನಡೆದಿತ್ತು. 24 ಗಂಟೆಗಳ ಅವಧಿಯ ಕಾರ್ಯಕ್ರಮದಲ್ಲಿ ಹೊತ್ತು ಹೊತ್ತಿಗೆ ಊಟ ಉಪಾಹಾರದ ವ್ಯವಸ್ಥೆ ಬಹಳ ಸೊಗಸಾಗಿತ್ತು. ಬೆಳಿಗ್ಗೆ ಇಡ್ಲಿ, ವಡೆ, ಕೇಸರಿಬಾತ್, ಮಧ್ಯಾಹ್ನ ಊಟಕ್ಕೆ ಉಪ್ಪಿನಕಾಯಿ, ಪಲ್ಯ, ಗಸಿ, ಸಾರು, ಸಾಂಬಾರು, ಹಪ್ಪಳ, ಪಾಯಸ, ರವೆ ಲಾಡು ವಿಶೇಷವಾಗಿತ್ತು. ರಾತ್ರಿ ಉಪ್ಪಿನಕಾಯಿ, ಪಲ್ಯ, ಮೆಣಸುಕಾಯಿ, ಸಾಂಬಾರು, ಕಾಯಿಹುಳಿ, ಪಾಯಸ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಊಟೋಪಚಾರದ ರೀತಿ ಬ್ರಹ್ಮಕಲಶೋತ್ಸವ ಮಾದರಿಯಲ್ಲಿ ನಡೆದಿರುವುದು ಆಗಮಿಸಿದವರ ಮೆಚ್ಚುಗೆಗೆ ಪಾತ್ರವಾಗಿತ್ತು.
ವಾರ್ಷಿಕೋತ್ಸವದ ಎಲ್ಲಾ ಕಾರ್ಯಕ್ರಮಗಳು ʻಸುದ್ದಿ ಲೈವ್ʼ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಂಡು 15 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದರು. ಅಲ್ಲದೇ ಎಲ್ಇಡಿ ಪರದೆ ಅಳವಡಿಸಲಾಗಿತ್ತು.