ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಅಮೃತ ಮಹೋತ್ಸವ – ದಿವ್ಯ ಬಲಿಪೂಜೆ, ಧ್ವಜಾರೋಹಣ, ಪ್ರತಿಭಾ ಪುರಸ್ಕಾರ

0

ಪುತ್ತೂರು: ದರ್ಬೆ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲಾ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ದಿವ್ಯ ಬಲಿಪೂಜೆ, ಧ್ವಜಾರೋಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.17ರಂದು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಬಲಿಪೂಜೆ, ಧ್ವಜಾರೋಹಣ:
ಬೆಳಿಗ್ಗೆ 9ರಿಂದ ದಿವ್ಯಚೇತನ ಚಾಪೆಲ್‌ನಲ್ಲಿ ಬಲಿಪೂಜೆ ನಡೆಯಿತು. ಮಂಗಳೂರು ರೊಸಾರಿಯೋ ಕ್ಯಾಥೆಡ್ರಲ್‌ನ ಧರ್ಮಗುರು ವಂ.ಆಲ್ಫ್ರೆಡ್ ಜೆ. ಪಿಂಟೊ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಬಳಿಕ ಪ್ರೌಢಶಾಲಾ ಪ್ರಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ಆರಂಭದಲ್ಲಿ ವಂ.ಮೊನ್ಸಿಞರ್ ಆಂಟನಿ ಪತ್ರಾವೋರವರ ಮೂರ್ತಿಗೆ ಹಾರಾರ್ಪಣೆ ಮಾಡಲಾಯಿತು. ಎನ್‌ಸಿಸಿ ಕೆಡೆಟ್‌ನೊಂದಿಗೆ ಅತಿಥಿಗಳನ್ನು ಧ್ವಜಾರೋಹಣದ ವೇದಿಕೆಗೆ ಕರೆತರಲಾಯಿತು. ಮಂಗಳೂರು ರೊಸಾರಿಯೋ ಕ್ಯಾಥೆಡ್ರಲ್‌ನ ಧರ್ಮಗುರು ವಂ.ಆಲ್ಫ್ರೆಡ್ ಜೆ. ಪಿಂಟೊ, ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಹಾಗೂ ಫಿಲೋಮಿನಾ ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿ ಸೋಜಾರವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಮಾಯ್ ದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ಲೋಹಿತ್ ಅಜಯ್ ಮಸ್ಕರೇನಸ್, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ತ, ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನೀವಾಸ ರಾವ್, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸೌಮ್ಯ ಭಟ್, ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್ ಲೋರಾ, ಆಂಗ್ಲ ಮಾಧ್ಯಮ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವ, ಹಾಸ್ಟೆಲ್ ವಾರ್ಡನ್ ರೂಪೇಶ್ ತಾವ್ರೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರು, ಕಾನ್ವೆಂಟ್‌ಗಳ ಧರ್ಮಭಗಿನಿಯರು, ಫಿಲೋಮಿನಾ ವಿದ್ಯಾಸಂಸ್ಥೆಗಳ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ:
ಶಾಲಾ ಅಮೃತ ಮಹೋತ್ಸವ ಹಾಗೂ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ, ಮಂಗಳೂರು ರೊಸಾರಿಯೋ ಕ್ಯಾಥೆಡ್ರಲ್‌ನ ಧರ್ಮಗುರು ವಂ.ಆಲ್ಫ್ರೆಡ್ ಜೆ. ಪಿಂಟೊ ಮಾತನಾಡಿ ವಿದ್ಯಾರ್ಥಿಗಳ ವಿವಿಧ ಪ್ರತಿಭೆಗಳನ್ನು ಹೊರಸೂಸಲು ಅವಕಾಶ ನೀಡುವುದೇ ವಿದ್ಯೆ. ನಿಮ್ಮ ಜೀವನಕ್ಕೆ ಬೇಕಾದ ವಿದ್ಯೆಯನ್ನು ಶಿಕ್ಷಕರು ಕಲಿಸುತ್ತಾರೆ. ಕ್ರೀಡಾಕೂಟದ ಮೂಲಕವೂ ವಿದ್ಯಾರ್ಥಿಗಳು ಉತ್ತುಂಗಕ್ಕೇರಲು ಸಾಧ್ಯ. ಕ್ರೀಡಾಕೂಟದಿಂದ ದೈಹಿಕ ಸಾಮರ್ಥ್ಯ ಬರುತ್ತದೆ ಎಂದರು. 75 ವರ್ಷದ ಹಿಂದೆ ಆಂಟನಿ ಪತ್ರಾವೋರವರು ಸ್ಥಾಪಿಸಿದ ಸಂಸ್ಥೆ ಈಗಲೂ ಬೆಳೆಯತ್ತಾ ಇದೆ. ಸಂಸ್ಥೆಯ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಹೇಳಿ ಶುಭಹಾರೈಸಿದರು.


ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ.ಜಗನ್ನೀವಾಸ ರಾವ್ ಮಾತನಾಡಿ ನಾನು ಈ ಶಾಲೆಯಲ್ಲಿ ಕಲಿತಿದ್ದೇನೆ. ನನ್ನ ಜೀವನವನ್ನು ರೂಪಿಸಿದ ಸಂಸ್ಥೆ ಇದು. ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಮುಂದಕ್ಕೆ ನೀವು ಕೂಡ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸೇರಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸೌಮ್ಯ ಭಟ್ ಮಾತನಾಡಿ ಪ್ರತೀ ವಿದ್ಯಾರ್ಥಿಗಳಿಗೆ ಪ್ರತಿಭೆ ಇರುತ್ತದೆ. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿ ಶಾಲೆಗೆ ಉತ್ತಮ ಹೆಸರು ತನ್ನಿ ಎಂದು ಹೇಳಿ ಅಮೃತ ಮಹೋತ್ಸವ ಆಚರಿಸುತ್ತಿರುವ ಶಾಲೆಗೆ ಅಭಿನಂದನೆ ಸಲ್ಲಿಸಿದರು.


ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ ವಂ.ಆಂಟನಿ ಪತ್ರಾವೋರವರು ಸ್ಥಾಪಿಸಿದ ಸಂಸ್ಥೆ ಇವತ್ತು 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿದೆ. ಇಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಮುಂದಕ್ಕೆ ಉತ್ತಮ ಅವಕಾಶಗಳಿವೆ. ಸಾಧನೆಗೆ ಆತ್ಮಸ್ಥೈರ್ಯ ಬೇಕು. ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಭೆ ಇರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಸಾಧನೆ ಮಾಡಿ ಹಣ ಸಂಪಾದಿಸಿ. ನೀವು ಗಳಿಸಿದ ಹಣಕ್ಕೆ ಉತ್ತಮ ಮೌಲ್ಯ ಇದೆ ಎಂದರು. ಇಂದಿನ ಅತಿಥಿಯಾಗಿರುವ ವಂ.ಆಲ್ಫ್ರೆಡ್ ಜೆ. ಪಿಂಟೊರವರು ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಿದವರು. ಅವರೂ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಈ ಶಾಲೆ ಮುಂದಿನ ವರ್ಷ ದಶಮಾನೋತ್ಸವ ಆಚರಿಸಲಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ತ ಹಾಗೂ ವಿದ್ಯಾರ್ಥಿ ನಾಯಕ ತರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥಾಪಕರ ದಿನದ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ, ಪ್ರತಿಭಾ ಕಾರಂಜಿ ಸ್ಪರ್ಧೆಯ ವಿಜೇತರಿಗೆ, ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಕ್ಲೆಮೆಂಟ್ ಪಿಂಟೋ, ಸಂಧ್ಯಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರೌಢಶಾಲಾ ಮುಖ್ಯಗುರು ವಂ.ಮ್ಯಾಕ್ಸಿಮ್ ಡಿ ಸೋಜಾ ಸ್ವಾಗತಿಸಿ ಶಿಕ್ಷಕಿ ಶಿಲ್ಪಾ ವಂದಿಸಿದರು. ಶಿಕ್ಷಕಿ ಮೋಲಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.

ಅತಿಥಿ ವಂ.ಆಲ್ಫ್ರೆಡ್ ಜೆ. ಪಿಂಟೊರವರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ರೊಸಾರಿಯೋ ಕ್ಯಾಥೆಡ್ರಲ್‌ನ ಧರ್ಮಗುರು ವಂ.ಆಲ್ಫ್ರೆಡ್ ಜೆ. ಪಿಂಟೊರವರನ್ನು ಶಾಲಾ ಅಮೃತ ಮಹೋತ್ಸವದ ಪ್ರಯುಕ್ತ ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here