ಅಮಲು ಪದಾರ್ಥಗಳ ಸೇವನೆ, ಮಾರಾಟ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿ-ಎಸ್ಸೈ ಸುಶ್ಮಾ
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದು ಅದರ ಭಾಗವಾಗಿ ಡಿ.18ರಂದು ತಿಂಗಳಾಡಿ ಜಂಕ್ಷನ್ನಲ್ಲಿ ನಡೆಯಿತು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಮಾತನಾಡಿ, ವಿವಿಧ ರೀತಿಯ ಅಪರಾಧ ಪ್ರಕರಣಗಳು ನಡೆಯುತ್ತಿದ್ದು ಜನರು ಜಾಗೃತರಾಗುವುದರಿಂದ ಅಂತಹ ಅಪರಾಧಗಳನ್ನು ತಡೆಯಲು ಸಾಧ್ಯವಿದೆ, ಗ್ರಾಮೀಣ ಭಾಗದಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಾ ಬರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಗಾಂಜಾದಂತಹ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಕೆಲವು ಕಡೆಗಳಲ್ಲಿ ಕಣ್ಣುಮುಚ್ಚಿ ನಡೆಯುತ್ತಿದ್ದು ಈ ಬಗ್ಗೆ ಮಾಹಿತಿ ತಿಳಿದರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕು, ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಟ ಇವೆಲ್ಲವೂ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಅವರು ಹೇಳಿದರು.
ವಾಹನ ಚಾಲಕರು ಲೈಸೆನ್ಸ್ ಸಹಿತ ವಾಹನದ ದಾಖಲೆಗಳನ್ನು ಹೊಂದಿರಬೇಕು, ಮಕ್ಕಳಿಗೆ ವಾಹನ ಓಡಿಸಲು ಕೊಡಬಾರದು ಎಂದ ಸುಶ್ಮಾ ಭಂಡಾರಿಯವರು ಗ್ರಾಮೀಣ ಭಾಗದಲ್ಲಿ ಅಪರಾಧಗಳನ್ನು ತಡೆಯಲು ಮತ್ತು ಮಾಹಿತಿ ನೀಡಲು ಯಾವುದೇ ಹಿಂಜರಿಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಾರುತಿ ಕೆ, ಚಂದ್ರಶೇಖರ್, ಶರಣಪ್ಪ ಪಾಟೀಲ್ ಹಾಗೂ ತಿಂಗಳಾಡಿಯ ಆಟೋ ರಿಕ್ಷಾ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.