ಮುಂಡೂರಿನಿಂದ ಮೈಸೂರಿಗೆ ಪ್ರವಾಸ ಹೋಗುತ್ತಿದ್ದ ವೇಳೆ ಹೃದಯಾಘಾತ- ನರಿಮೊಗರು ಮರಾಠಿ ಸಂಘದ ಮಾಜಿ ಅಧ್ಯಕ್ಷ ಮೋಹನ ನಾಯ್ಕ ನಿಧನ

0

ಪುತ್ತೂರು: ಮೈಸೂರಿಗೆ ಪ್ರವಾಸ ಹೊರಟಿದ್ದ ವ್ಯಕ್ತಿಯೋರ್ವರು ಪ್ರಯಾಣದ ಮಧ್ಯೆ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಡಿ.22ರಂದು ನಡೆದಿದೆ.
ಮುಂಡೂರು ಗ್ರಾಮದ ಕೇದಗೆದಡಿ ನಿವಾಸಿ, ನರಿಮೊಗರು ಮರಾಠಿ ಸಂಘದ ಮಾಜಿ ಅಧ್ಯಕ್ಷರು, ಕೃಷಿಕರೂ ಆದ ಮೋಹನ್ ನಾಯ್ಕ(50.ವ) ಮೃತಪಟ್ಟವರು.


ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಮುಂದಾಳತ್ವದಲ್ಲಿ ಮೈಸೂರಿಗೆ ಪ್ರವಾಸ ಆಯೋಜನೆ ಮಾಡಲಾಗಿತ್ತು. ಡಿ.21ರಂದು ರಾತ್ರಿ ಗಂಟೆ 9.30ರ ವೇಳೆಗೆ ನರಿಮೊಗರು ಕರೆಮನೆಕಟ್ಟೆ ಬಳಿಯಿಂದ ಬಸ್ ಪ್ರವಾಸಕ್ಕೆ ಹೊರಟಿದ್ದು ಅದರಲ್ಲಿ ಸುಮಾರು 60 ಮಂದಿ ಇದ್ದರು. ಸಂಪಾಜೆಯಲ್ಲಿ ಉಪಹಾರ ಸೇವಿಸಿ ಮದೆನಾಡು ತಲುಪುತ್ತಿದ್ದಂತೆ ಮೋಹನ್ ನಾಯ್ಕ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದು ಈ ವೇಳೆ ಜೊತೆಗಿದ್ದವರು ಉಪಚರಿಸುವ ಪ್ರಯತ್ನ ಮಾಡಿದ್ದರು. ಬಳಿಕ ಅವರನ್ನು ರಾತ್ರಿ 2 ಗಂಟೆ ವೇಳೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪ್ರವಾಸ ತಂಡದಲ್ಲಿದ್ದ ಬಿ.ಕೆ ಸುಂದರ ನಾಯ್ಕ ಅವರು ‘ಸುದ್ದಿ’ಗೆ ಮಾಹಿತಿ ನೀಡಿದ್ದಾರೆ.


ಬಳಿಕ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಕೇದಗೆದಡಿಗೆ ತರಲಾಯಿತು. ಮದ್ಯಾಹ್ನದ ವೇಳೆಗೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮೃತರು ಕೊಡಿನೀರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಾ, ಪುತ್ರಿಯರಾದ ಅಶ್ವಿತಾ, ಅರ್ಪಿತಾ ಹಾಗೂ ಪುತ್ರ ಸತ್ಯ, ತಾಯಿ ಸುಂದರಿ, ಸಹೋದರಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಸಹೋದರರಾದ ನೆಕ್ಕಿಲಾಡಿ ಗ್ರಾ.ಪಂ ಪಿಡಿಓ ದೇವಪ್ಪ ನಾಯ್ಕ, ಸಂಜೀವ ನಾಯ್ಕ, ಜಿನ್ನಪ್ಪ ನಾಯ್ಕ ಅವರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲು, ಮುಂಡೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಲೋಕಪ್ಪ ಗೌಡ ಕೆರೆಮೆನೆ, ಮಠಾಠಿ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ದುಗ್ಗಪ್ಪ ನಾಯ್ಕ, ನರಿಮೊಗರು ಮರಾಠಿ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ಸಹಿತ ವಿವಿಧ ಗಣ್ಯರು, ಕೊಡಿನೀರು ಹಾಲು ಸೊಸೈಟಿಯ ನಿರ್ದೇಶಕರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here