ಎಲ್ಲರನ್ನು ಪ್ರೀತಿಯಿಂದ, ಗೌರವದಿಂದ ಕಾಣಿ-ಆಂಜನೇಯ ರೆಡ್ಡಿ
ಪುತ್ತೂರು: ಜನ ಸೇವೆ ಜನಾರ್ದನ ಸೇವೆ ಎಂಬಂತೆ ಕೆಲಸ ಮಾಡಿದಾಗ ದೇಶ ಸುಭೀಕ್ಷೆ ಎನಿಸುತ್ತದೆ. ಒಂದು ದಿನದ ಮಟ್ಟಿಗೆ ವ್ಯಕ್ತಿಯ ಹಸಿವು ನೀಗಿಸುವುದಲ್ಲ ಬದಲಾಗಿ ವ್ಯಕ್ತಿಯ ಹಸಿವನ್ನು ನಿರಂತರ ನೀಗಿಸುವ ಕೈಂಕರ್ಯವನ್ನು ನಾವು ಮಾಡಬೇಕಾಗಿದೆ ಜೊತೆಗೆ ಎಲ್ಲರನ್ನು ಪ್ರೀತಿಯಿಂದ, ಗೌರವದಿಂದ ಕಾಣಿ ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ಐ ಆಂಜನೇಯ ರೆಡ್ಡಿರವರು ಹೇಳಿದರು.
ಡಿ.22ರಂದು ಪುತ್ತೂರು ಸೈನಿಕ ಭವನದಲ್ಲಿ ಪರಮಪೂಜ್ಯ ಖಾವಂದರು ಹಾಗೂ ಮಾತೃಶ್ರೀ ಅಮ್ಮನವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಆಕಾಶ್ ಮಿತ್ರಮಂಡಲ ಮೊಟ್ಟೆತ್ತಡ್ಕ ಪುತ್ತೂರು ಇದರ ಸಹಕಾರದೊಂದಿಗೆ ಶ್ರೀ ಅಮೃತಾ ಸ್ವ-ಸಹಾಯ ಸಂಘ ಮೊಟ್ಟೆತ್ತಡ್ಕ ಇದರ ಸಾವಿರದ ಒಂದನೇ ಸಭೆಯ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ದ.ಕ ಜಿಲ್ಲೆಯವರು ಅಂದಾಕ್ಷಣ ಬೇರೆ ಜಿಲ್ಲೆಯವರು ಬಹಳ ಗೌರವ ನೀಡುತ್ತಾರೆ. ಆದರೆ ಯಾವುದೇ ಸರಕಾರಿ ಇಲಾಖೆಗಳಲ್ಲಿ ಇತರ ಜಿಲ್ಲೆಯವರು ಹುದ್ದೆಗಳನ್ನು ಅಲಂಕರಿಸುವುದು ಬಿಟ್ರೆ ದ.ಕ ಜಿಲ್ಲೆಯವರು ಅಲ್ಲಿ ಕಾಣ ಸಿಗುವುದಿಲ್ಲ. ಯುವಸಮುದಾಯ ಹೆಣ್ಮಕ್ಕಳಿಗೆ ಗೌರವ ಕೊಡಿ, ಸಂಚಾರಿ ನಿಯಮಗಳನ್ನ ಪಾಲಿಸಿ, ಆರೋಗ್ಯದ ಕಡೆ ಗಮನ ಕೊಡಿ ಎಂದರು.
ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಕಳೆದ ಹತ್ತೊಂಬತ್ತು ವರ್ಷಗಳಲ್ಲಿ ಶ್ರೀ ಅಮೃತಾ ಸ್ವ-ಸಹಾಯ ಸಂಘವು ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ವ್ಯಕ್ತಿಯು ಸ್ವಾವಲಂಭಿಯಾಗಿ ಬದುಕಬೇಕೆನ್ನುವುದು ಧರ್ಮಸ್ಥಳದ ಖಾವಂದರ ಉದ್ಧೇಶವಾಗಿದ್ದು, ಅವರು ಇಂತಹ ಸ್ವ-ಸಹಾಯ ಸಂಘಗಳ ಮುಖೇನ ಎಲ್ಲರನ್ನೂ ಬೆಳೆಸಿದ್ದಾರೆ. ಸಮಸ್ಯೆಯನ್ನು ಸಮಸ್ಯೆಯಾಗಿ ನೋಡದೆ ಅದನ್ನು ಹೇಗೆ ಪರಿಹರಿಸುವುದು ಎಂಬುದನ್ನು ಮನಗಾಣಬೇಕಿದೆ ಎಂದರು.
ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ.ಸಿ ವಿಭಾಗ ಕಛೇರಿಯ ನಿರ್ದೇಶಕ ವಸಂತ ಕೆ. ಮಾತನಾಡಿ, ಗಿಡ ನೆಟ್ರೆ ಫಲ ಸಿಗದು, ಅದಕ್ಕೆ ಸರಿಯಾದ ಪೋಷಣೆ ಸಿಕ್ಕರೆ ಮಾತ್ರ ಗಿಡ ಬೆಳೆಯುತ್ತದೆ. ಹಾಗೇಯೇ ಶ್ರೀ ಅಮೃತಾ ಸ್ವ-ಸಹಾಯ ಸಂಘವು ಎಲ್ಲರ ಸಹಕಾರದೊಂದಿಗೆ ಸಮೃದ್ಧವಾಗಿ ಬೆಳೆದಿದೆ. ದಕ್ಷಿಣ ಕನ್ನಡ ಅಂದ್ರೆ ಅದು ಸಂಸ್ಕಾರದ, ಸಂಸ್ಕೃತಿಯ ಊರು, ದೈವಗಳ ನಾಡು ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಎಲ್ಲರೂ ಗೌರವ ನೀಡುತ್ತಾರೆ. ಸಮಾಜದಲ್ಲಿ ವ್ಯಕ್ತಿಯು ಸುಸಂಕೃತರಾಗಿ ಬೆಳೆಯಬೇಕಾದರೆ ಅಲ್ಲಿ ಶಿಸ್ತು, ಬದ್ಧತೆ, ಸಂಸ್ಕಾರ ಅತೀ ಮುಖ್ಯವಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ ಗೌಡ ಎಂ. ಮಾತನಾಡಿ, ಮೊಸರನ್ನು ಕಡಿದ ನಂತರ ತುಪ್ಪ ಸಿಗುವುದು ಎಂಬಂತೆ ಈ ಶ್ರೀ ಅಮೃತಾ ಸ್ವ-ಸಹಾಯ ಸಂಘ ಪ್ರಸ್ತುತ ಅಭಿವೃದ್ಧಿಯತ್ತ ಸಾಗುತ್ತಿದೆ. ಸ್ವ-ಉದ್ಯೋಗ ಮಾಡಿ ಸ್ವಾವಲಂಭಿ ಜೀವನ ನಿಮ್ಮದಾಗಲಿ ಎಂಬಂತೆ ಖಾವಂದರು ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಉಜಿರೆಯಲ್ಲಿ ರುಡ್ಸೆಟ್ ಎಂಬ ಸಂಸ್ಥೆಯನ್ನು ನಿರ್ಮಿಸಿರುತ್ತಾರೆ. ಯಾವುದೇ ಸಂಸ್ಥೆಯು ಅಭಿವೃದ್ಧಿಯತ್ತ ಸಾಗಿದಾಗ ಅದರ ಸಿಂಹಾವಲೋಕನ ಅತೀ ಮುಖ್ಯವಾಗಿದೆ. ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ ಬೆಳೆಸಿದಾಗ ವ್ಯಕ್ತಿಯು ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಪೂರ್ಣಾತ್ಮರಾಮ್ ಈಶ್ವರಮಂಗಲ ಮಾತನಾಡಿ, ಸಂಘವು ಸಾವಿರದ ಒಂದನೇ ಹೆಜ್ಜೆಯಿಡುವ ಮೂಲಕ ಕಾಲದ ಪಯಣ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನನ್ನಿಂದ ಸಾಧ್ಯವಿಲ್ಲ ಎಂಬುದರ ಬದಲಿಗೆ ತನಗೆ ಗೊತ್ತಿದೆ ಎಂದುದಾಗಿ ಮುನ್ನೆಡೆದಾಗ ಯಶಸ್ಸು ಸಾಧ್ಯವಾಗುವುದು. ಎಲ್ಲಿ ಒಗ್ಗಟ್ಟು ಇದೆಯೋ ಅಲ್ಲಿ ಇಚ್ಛಾಶಕ್ತಿಯ ಕೊರತೆ ಕಾಣಿಸದು. ಸಂಘಟನೆ ಗಟ್ಟಿಗೊಳ್ಳಬೇಕಾದರೆ ಅಲ್ಲಿ ತ್ಯಾಗ-ಬಲಿದಾನಗಳು ಅತೀ ಪ್ರಮುಖವಾಗಿದೆ ಮಾತ್ರವಲ್ಲ ಸಂಘಟನೆಗಳಲ್ಲಿ ಚರ್ಚೆ, ಗಲಾಟೆ ಬೇಕು ಆದರೆ ಅದೇ ಬಂಡವಾಳವಾಗಬಾರದು ಎಂದರು.
ಮೊಟ್ಟೆತ್ತಡ್ಕ ಶ್ರೀ ಅಮೃತಾ ಸ್ವ-ಸಹಾಯ ಸಂಘದ ಪ್ರಥಮ ಸಭೆಯ ದೀಪ ಪ್ರಜ್ವಲಿಸಿದ ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ ಮಾತನಾಡಿ, ಅರಿಯಡ್ಕ ಗ್ರಾಮದವನಾಗಿದ್ರೂ ಅಂದು 2005ರಲ್ಲಿ ಪ್ರಥಮವಾಗಿ ದೀಪ ಬೆಳಗಿಸಿ ಉದ್ಘಾಟಿಸಿದ್ದೆ ಮಾತ್ರವಲ್ಲ ಇಂದು ಈ ಸಂಘವು ಹತ್ತೊಂಬತ್ತು ವರ್ಷಗಳನ್ನು ಕ್ರಮಿಸಿರುವುದು ಸಾಧನೆಯೇ ಸರಿ. ಒಳ್ಳೆಯ ಕೆಲಸ ಮಾಡಿದರೆ ಅಲ್ಲಿ ಜನರ, ದೇವರ ಆಶೀರ್ವಾದ ಖಂಡಿತಾ ಇದೆ ಎನ್ನುವುದಕ್ಕೆ ಈ ಸಂಘವು ಸಾಕ್ಷಿಯಾಗಿದೆ ಎಂದರು.
ಶ್ರೀ ಅಮೃತಾ ಸ್ವ-ಸಹಾಯ ಸಂಘ ಮೊಟ್ಟೆತ್ತಡ್ಕ ಇದರ ಅಧ್ಯಕ್ಷ ಗೋವಿಂದರಾಜ್ ಬಿ, ಚೈತನ್ಯ ಮಿತ್ರವೃಂದದ ಸಂಚಾಲಕ ಗಣೇಶ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ್ಣಲತಾ ಮತ್ತು ಬಳಗ ಪ್ರಾರ್ಥಿಸಿದರು. ಸಂಘದ ಸದಸ್ಯೆ ಚೈತನ್ಯ ವರದಿ ಮಂಡಿಸಿದರು. ಶ್ರೀ ಅಮೃತಾ ಸ್ವ-ಸಹಾಯ ಸಂಘದ ಗಣೇಶ್ ಎಂ ಕಾರ್ಯಕ್ರಮ ನಿರೂಪಿಸಿದರು.
ಇಡಬೆಟ್ಟುವಿನಲ್ಲಿ 22 ಸೆಂಟ್ಸ್ ಜಾಗ..
2005ರಲ್ಲಿ ಕೇವಲ 16 ಸದಸ್ಯರಿಂದ ಈ ಶ್ರೀ ಅಮೃತಾ ಸ್ವ-ಸಹಾಯ ಸೇವಾ ಸಂಘವು ಸ್ಥಾಪಿತವಾಗಿದ್ದು, ಇಂದು ಈ ಸಂಘದ ಸದಸ್ಯರು ಸಮಾಜದಲ್ಲಿ ಸ್ವಾವಲಂಭಿ ಜೀವನವನ್ನು ಸಾಗಿಸುತ್ತಿದ್ದಾರೆ ಎನ್ನುವುದಕ್ಕೆ ಧರ್ಮಸ್ಥಳದ ಖಾವಂದರೇ ಕಾರಣರಾಗಿದ್ದಾರೆ. ಬಡತನದಲ್ಲಿ ಬದುಕುವುದು ಮುಖ್ಯವಲ್ಲ, ಬಡತನದಲ್ಲಿ ಸಾಯುವುದು ತಪ್ಪು ಎಂಬಂತೆ ಬಡವರಿಗೆ ವರದಾನ, ಕಲ್ಪವೃಕ್ಷ, ಸದಸ್ಯರು ಸಬಲೀಕರಣ ಹೊಂದಬೇಕು ಎನ್ನುವಂತೆ ಖಾವಂದರು ನಮಗೆ ದಾರಿ ಮಾಡಿ ಕೊಟ್ಟಿದ್ದಾರೆ. ನಮ್ಮ ಸಂಘದ ಅಭಿವೃದ್ಧಿಗೆ ಇಡಬೆಟ್ಟುವಿನಲ್ಲಿ 22 ಸೆಂಟ್ಸ್ ಜಾಗವನ್ನು ಈಗಾಗಲೇ ಖರೀದಿಸಿದ್ದೇವೆ.
-ಉಮೇಶ್ ಡಿ.ಕೆ, ಅಧ್ಯಕ್ಷರು, ಆಕಾಶ್ ಮಿತ್ರಮಂಡಲ ಮೊಟ್ಟೆತ್ತಡ್ಕ
ಸನ್ಮಾನ..
ಹೈನುಗಾರಿಕೆ ಕೃಷಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಗುರು ಆಚಾರ್ ಹಿಂದಾರು, ಯುವ ಗಾಯಕ ಸನತ್ ಆಚಾರ್ಯ ಸುಳ್ಯ, ಪುತ್ತೂರು ನಗರಸಭೆ ಉಪಾಧ್ಯಕ್ಷರಾಗಿ ನೇಮಕಗೊಂಡ ಬಾಲಚಂದ್ರ ಕೆಮ್ಮಿಂಜೆರವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುವ ಗಾಯಕ ಸನತ್ ಆಚಾರ್ಯರವರು ಸುಶ್ರಾವ್ಯವಾದ ಹಾಡು ಹಾಡಿ ಮನರಂಜಿಸಿದರು.