ಕಡಬ: ಬಲ್ಯ ಗ್ರಾಮದ ನಿವಾಸಿ ಭಾರತೀಯ ಜೀವವಿಮಾ ನಿಗಮದ ಬಂಟ್ವಾಳ ಶಾಖೆಯ ಅಭಿವೃದ್ಧಿ ಅಧಿಕಾರಿ ನಾರಾಯಣ ಎನ್.ಕೊಲ್ಲಿಮಾರ್ ಬಲ್ಯ ಅವರ ಎಲ್‌ಐಸಿ ವೃತ್ತಿ ಬದುಕಿನ ಬೆಳ್ಳಿ ಹಬ್ಬದ ರಜತ ಸಂಭ್ರಮೋತ್ಸವ ಕಾರ್ಯಕ್ರಮ ಡಿ.25ರಂದು ಬಲ್ಯ ಸೌಪರ್ಣಿಕಾ ಕೊಲ್ಲಿಮಾರು ತರವಾಡು ಮನೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಾರಾಯಣ ಅವರು ಪತ್ರಿಕಾಗೋಷ್ಠಿ ಯಲ್ಲಿ ಶುಕ್ರವಾರ ಮಾತನಾಡಿ, ರಜತ ಸಂಭ್ರಮೋತ್ಸವ ನಿಮಿತ್ತ ಸಬ್ಬಮ್ಮ ದೇವಿಗೆ ಪೂಜೆ, ಭಜನಾ ಕಾರ‍್ಯಕ್ರಮ, ಸ್ಯಾಕ್ಸೋಫೋನ್ ಜತೆಗೆ ಕುಣಿತ ಚೆಂಡೆವಾದನ, 20 ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ, ವಿಶೇಷ ಫೋಟೋ ಕ್ಲಿಪ್ಪಿಂಗ್, ’ನಗಬೇಕು ಆಗಾಗ ಬದುಕಿನೊಳಗೆ’ ಹಾಸ್ಯ ಸಂಗೀತ, ನೃತ್ಯ, ಮ್ಯಾಜಿಕ್ ಗಳಿಂದ ಕೂಡಿದ ನವರಸ ದರ್ಶನ, ಯೋಗ ಪ್ರದರ್ಶನ, ಸಂಭ್ರಮ ಸಭಾ ಕಾರ್ಯಕ್ರಮ, ಸನ್ಮಾನ, “ಬೆಳ್ಳಿದೀಪ” ಸ್ಮರಣ ಸಂಚಿಕೆ ಬಿಡುಗಡೆ, ಕೊಡುಗೆ ವಿತರಣೆ ರಾತ್ರಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಾರಾಯಣ ಎನ್. ಕೊಲ್ಲಿಮಾರು ಬಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ ವಿ. ಮುದೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌ಐಸಿ ಬಂಟ್ವಾಳ ಶಾಖೆಯ ಮುಖ್ಯ ಪ್ರಬಂಧಕ ಕೆ. ಸತೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದಿವ್ಯ ಉಪಸ್ಥಿತಿ ಇರಲಿದ್ದಾರೆ. ನೆಲ್ಯಾಡಿ ಸಂತ್ ಜಾರ್ಜ್ ವಿದ್ಯಾ ಸಂಸ್ಥೆಗಳ ಸ್ವಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಎಲ್‌ಐಸಿ ಪುತ್ತೂರು ಶಾಖೆಯ ನಿವೃತ್ತ ಹಿರಿಯ ಅಭಿವೃದ್ಧಿ ಅಧಿಕಾರಿ ಸದಾನಂದ ಶೆಟ್ಟಿ ಅವರಿಗೆ ರಜತಶ್ರೀ ವಿಶೇಷ ಸನ್ಮಾನ ನಡೆಯಲಿದೆ. ಮೂವತ್ತಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಲಿದ್ದಾರೆ. ಸುಮಾರು ಐವತ್ತು ಜನ ಗಣ್ಯರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಹದಿನೈದು ಜನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಜತ ಸಂಭ್ರಮ ಸಮಿತಿಯ ಪ್ರಮುಖರಾದ ಪೂರ್ಣೇಶ್ ಗೌಡ, ಧನಂಜಯ ಕೊಡಂಗೆ ಉಪಸ್ಥಿತರಿದ್ದರು.