ಪುತ್ತೂರು ಸರಕಾರಿ ಆಸ್ಪತ್ರೆ, ಹಾರಾಡಿ, ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಉಪಲೋಕಾಯುಕ್ತರ ಭೇಟಿ :ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಭ್ರಷ್ಟಾಚಾರದ ಪಾಠ

0

ಪುತ್ತೂರು: ಉಪಲೋಕಾಯುಕ್ತ ವೀರಪ್ಪ ಬಿ.ಅವರು ಡಿ.22ರಂದು ಬೆಳಿಗ್ಗೆ ಪುತ್ತೂರಿಗೆ ಆಗಮಿಸಿ, ಪುತ್ತೂರು ಸರಕಾರಿ ಆಸ್ಪತ್ರೆ, ಹಾರಾಡಿ ಡಾ| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮತ್ತು ಬೀರಮಲೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದರು.

ಈ ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಕುರಿತು ಅವರು ಪ್ರಶಂಸೆ ವ್ಯಕ್ತಪಡಿಸಿದರೂ ಶೌಚಾಲಯದ ಶುಚಿತ್ವಕ್ಕೆ ಸೂಚನೆ ನೀಡಿದರು. ಹಾರಾಡಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿನ ಸಮಸ್ಯೆಗಳ ಕುರಿತು ಗರಂ ಆದ ಅವರು ಹಾಸ್ಟೆಲ್ ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡು ವಾರದೊಳಗೆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಸುಮೊಟೋ ಕೇಸ್ ದಾಖಲಿಸುತ್ತೇನೆ ಎಂದು ಹಾಸ್ಟೆಲ್ ವಾರ್ಡನ್ ಮತ್ತು ಮೊಬೈಲ್ ಕರೆ ಮಾಡಿ ಸಮಾಜ ಕಲ್ಯಾಣಾಧಿಕಾರಿ ವಿನಯ ಕುಮಾರಿ ಅವರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಅವರು ಹಾಸ್ಟೆಲ್ ವಿದ್ಯಾರ್ಥಿನಿಯವರಿಗೆ ಭ್ರಷ್ಟಾಚಾರದ ಕುರಿತು ಪಾಠ ಮಾಡಿದರು. ಬೀರಮಲೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಅವರು ಪರಿಹಾರದ ಭರವಸೆ ವ್ಯಕ್ತಪಡಿಸಿದರು.


ಮೆಡಿಸಿನ್‌ಗಳನ್ನಿಟ್ಟ ಟ್ರೇಯಲ್ಲೇ ಎಕ್ಸ್‌ಪೈರಿ ಡೇಟ್ ಸ್ಟಿಕ್ಕರ್ ಹಾಕಿ :
ಪುತ್ತೂರು ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗದ ಕೌಂಟರ್‌ಗೆ ತೆರಳಿದ ಉಪಲೋಕಾಯುಕ್ತ ವೀರಪ್ಪ ಬಿ.ಅವರು ಆಸ್ಪತ್ರೆಗೆ ಬರುವ ರೋಗಿಗಳ ವಿವರ ಮತ್ತು ಒಳರೋಗಿಗಳ ವಿವರಗಳನ್ನು ಪರಿಶೀಲಿಸಿದರು. ಅಲ್ಲೇ ಕೆಲ ರೋಗಿಗಳಲ್ಲಿ ಮಾತನಾಡಿ ಆಸ್ಪತ್ರೆಯಿಂದ ಮೆಡಿಸಿನ್‌ಗೆ ಹಣ ಪಡೆಯುತ್ತಾರಾ ಎಂದು ಪ್ರಶ್ನಿಸಿದರು. ಬಳಿಕ ಮೆಡಿಕಲ್ ವಿಭಾಗಕ್ಕೆ ಹೋಗಿ ಸ್ಟೀಟ್ ಬೌಲ್‌ನಲ್ಲಿಟ್ಟ ಮಾತ್ರೆಗಳನ್ನು ಬಾಕ್ಸ್‌ನಲ್ಲಿ ಇಡುವಂತೆ ಸೂಚನೆ ನೀಡಿದರು. ಅಲ್ಲಿಂದ ನೇರ ಹೊರ ರೋಗಿಗಳ ತಪಾಸಣಾ ಕೇಂದ್ರ ಮತ್ತು ಎಕ್ಸ್‌ರೇ ವಿಭಾಗಗಳನ್ನು ಪರಿಶೀಲಿಸಿ, ಮಹಿಳೆಯರ ವಾರ್ಡ್, ಮಕ್ಕಳ ಮತ್ತು ಬಾಣಂತಿಯರ ವಾರ್ಡ್‌ಗಳಿಗೆ ತೆರಳಿ ರೋಗಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು. ಮಕ್ಕಳ ವಿಭಾಗದ ಕೊಠಡಿಯಲ್ಲಿ ಸಣ್ಣ ಮಕ್ಕಳ ಜೊತೆ ತುಸು ಹೊತ್ತು ಕಾಲ ಕಳೆದರು.


ಶೌಚಾಲಯ ಶುಚಿತ್ವಗೊಳಿಸಿ:
ಲೋಕಾಯುಕ್ತರು ಮಕ್ಕಳ ಒಳರೋಗಿ ವಿಭಾಗಕ್ಕೆ ಬಂದಾಗ ಅಲ್ಲಿನ ಶೌಚಾಲಯವನ್ನು ವೀಕ್ಷಣೆ ಮಾಡಿದರು. ಶೌಚಾಲಯ ಶುಚಿತ್ವ ಇಲ್ಲದಿರುವುದನ್ನು ಗಮನಿಸಿ ಈ ಕುರಿತು ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿದರು. ಕಟ್ಟಡ ಹಳೆಯದಾಗಿದೆ ಮತ್ತು ಕಟ್ಟಡದ ದುರಸ್ಥಿ ನಡೆಯಲಿದೆ ಎಂದು ಆಡಳಿತಾಧಿಕಾರಿ ಉತ್ತರಿಸಿದರು. ಶೌಚಾಲಯದ ಶುಚಿತ್ವಕ್ಕೆ ಅವರು ಸೂಚನೆ ನೀಡಿದರು.


ಮರಣೋತ್ತರ ಪರೀಕ್ಷೆಯನ್ನು ಕೂಡಲೇ ಮಾಡಿ ಕೊಡಿ:
ಲೋಕಾಯುಕ್ತರು ಶವಾಗಾರ ಕೊಠಡಿಯ ಬಳಿಗೆ ಹೋಗಿ ಶವಾಗಾರ ಕೊಠಡಿಯನ್ನು ವೀಕ್ಷಣೆ ಮಾಡಿದರು. ಈ ವೇಳೆ ಅಪಘಾತದಿಂದ ಮೃತಪಟ್ಟ ಮೃತದೇಹವಿದ್ದು, ಮೃತಪಟ್ಟ ವ್ಯಕ್ತಿಯ ಕಡೆಯವರಲ್ಲಿ ಮಾತನಾಡಿ ಸಮಸ್ಯೆಯ ಕುರಿತು ವಿಚಾರಿಸಿದರಲ್ಲದೆ ಮರಣೋತ್ತರ ಪರೀಕ್ಷೆಯನ್ನು ತಕ್ಷಣ ಮಾಡಿಸಿಕೊಡಿ. ಒಬ್ಬ ವ್ಯಕ್ತಿಗೆ ಬದುಕಿದ್ದಾಗ ಹೇಗೆ ಗೌರವ ಇರುತ್ತದೆಯೋ ಮೃತಪಟ್ಟ ಬಳಿಕವೂ ಅವರಿಗೆ ಗೌರವ ಪೂರಕವಾಗಿ ಮರಣೋತ್ತರ ಪರೀಕ್ಷೆಗಳನ್ನು ಬೇಗ ಮಾಡಿ ಕೊಡಿ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.


ಹಾರಾಡಿ ವಸತಿ ನಿಲಯ ಅವ್ಯವಸ್ಥೆಗೆ ಗರಂ:
ಹಾರಾಡಿ ಡಾ| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಲೋಕಾಯುಕ್ತರು ಅಲ್ಲಿನ ವಾತಾವರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಅಡುಗೆ ಅನಿಲಗಳನ್ನು ಹೊರಗಿನ ವಾತಾವರಣದಲ್ಲಿ ಇಡದೆ ಕೊಠಡಿಯಲ್ಲಿ ಇಟ್ಟಿರುವುದು, ಆವರಣ ಗೋಡೆಗಳಿಗೆ ಬೇಲಿಗಳ ಕೊರತೆ, ಭದ್ರತೆ ಇಲ್ಲದಿರುವುದನ್ನು ಖುದ್ದು ಗಮನಿಸಿದರು. ಸರಿಯಾದ ಸಮಯಕ್ಕೆ ಆಹಾರ ಸಿಗದಿರುವುದು, ರಾತ್ರಿ ಮಲಗಿದ್ದಾಗ ಇಲಿ ಕಚ್ಚುವುದು, ಗ್ರಂಥಾಲಯದಲ್ಲಿ ಹೊಸ ಪುಸ್ತಕಗಳ ಕೊರತೆಯ ಕುರಿತು ವಿದ್ಯಾರ್ಥಿಗಳ ದೂರುಗಳನ್ನು ಆಲಿಸಿದ ಉಪಲೋಕಾಯುಕ್ತರು, ವಸತಿ ನಿಲಯದ ವಾರ್ಡನ್ ಅವರನ್ನು ತರಾಟೆಗೆತ್ತಿಕೊಂಡರಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು. ಇತ್ತೀಚೆಗೆ ವಸತಿ ನಿಲಯಕ್ಕೆ ಅಪರಿಚಿತ ವ್ಯಕ್ತಿ ಬಂದಿರುವ ಕುರಿತು ಮಾಹಿತಿ ಪಡೆದ ಅವರು ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಕೊಡುವಂತೆ ತಿಳಿಸಿದರು. ಭದ್ರತೆಯ ದೃಷ್ಟಿಯಿಂದ ಊರಿನ ನಾಯಿಗಳನ್ನು ಸಾಕುವಂತೆಯೂ ಸಲಹೆ ನೀಡಿದರು. ಜೊತೆಗೆ ಎಲ್ಲಾ ಸಮಸ್ಯೆಗಳು ವಾರದೊಳಗೆ ಸರಿಯಾಗಬೇಕು. ಇಲ್ಲವಾದಲ್ಲಿ ಸುಮೊಟೋ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.


ಬೀರಮಲೆ ವಸತಿ ನಿಲಯದಲ್ಲಿ ಬಿಸಿ ನೀರಿನ ಸಮಸ್ಯೆ:
ಹಾರಾಡಿಯಿಂದ ನೇರವಾಗಿ ಬೀರಮಲೆ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಬಿಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.


ಲೋಕಾಯುಕ್ತ ಎಸ್ಪಿ ನಟರಾಜ್, ಡಿವೈಎಸ್ಪಿ ಗಾನ ಪಿ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲ, ಸುರೇಶ್, ಚಂದ್ರಶೇಖರ್, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಾನ್ಸನ್ ಡಿ.ಸೋಜ, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರು ಉಪಲೋಕಾಯುಕ್ತರ ಭೇಟಿ ಸಂದರ್ಭ ಜೊತೆಗಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಽಕಾರಿ ಡಾ. ಆಶಾ ಪುತ್ತೂರಾಯ, ಡಾ. ಯದುರಾಜ್, ಡಾ.ಜಯದೀಪ್, ಡಾ. ಅಜೇಯ್ ಸಹಿತ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here