ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸಂಭ್ರಮಿಸಿದ ವಾರ್ಷಿಕೋತ್ಸವ ‘ಚಿನ್ನರ ಚಿಲಿಪಿಲಿ’

0

ಪುತ್ತೂರು: 97 ವರ್ಷಗಳ ಸುಧೀರ್ಘ ಇತಿಹಾಸ ಇರುವ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ಡಿ.21ರಂದು ವಿನೂತನ ಕಾರ್ಯಕ್ರಮಗಳೊಂದಿಗೆ ನಡೆದ ಶಾಲಾ ಮಕ್ಕಳ ವಾರ್ಷಿಕ ಹಬ್ಬ ’ಚಿನ್ನರ ಚಿಲಿಪಿಲಿ’ ಸಂಭ್ರಮ ಮನೆ ಮಾಡಿತು.


ಸಮಾರಂಭದಲ್ಲಿ ಪಂಚ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ಪುಷ್ಪ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ಶಾಲಾ 800 ವಿದ್ಯಾರ್ಥಿಗಳಿಂದ 11 ವಿನೂತನ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೋರೆಗೊಳಿಸಿತು. ವಿಶಾಲವಾದ ವೇದಿಕೆ, ವೇದಿಕೆಯಲ್ಲಿ 36 ಅಡಿ ಉದ್ದದ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಶಾಲಾ ಆವರಣ ವಿದ್ಯುತ್ ದೀಪ ಅಲಂಕೃತಗೊಂಡಿತ್ತು. ಸಭಾಂಗಣದಲ್ಲಿ ಸುಮಾರು 2000 ಆಸನಗಳು, 4000 ಮಂದಿ ಕುಳಿತುಕೊಳ್ಳುವ ಫೆವಿಲಿಯನ್‌ಗಳು ತುಂಬಿ ಹೊರಭಾಗದಲ್ಲಿಯೂ ನಿಂತು ಜನರು ಕಾರ್ಯಕ್ರಮ ವೀಕ್ಷಣೆ ಮಾಡಿದ್ದರು.


ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ-ಅಶೋಕ್ ಕುಮಾರ್ ರೈ
ಮುಖ್ಯ ಅತಿಥಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪ್ರತಿ ವರ್ಷ 4-5 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಆದರೆ ಗುಣ ಮಟ್ಟದ ಶಿಕ್ಷಣದ ಕೊರತೆಯಿಂದ ಕೆಲವು ಮಂದಿಯಷ್ಟೇ ಉದ್ಯೋಗ ಪಡೆಯುತ್ತಾರೆ. ಗುಣಮಟ್ಟದ ಶಿಕ್ಷಣ ಇದ್ದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ, ಸ್ಥಾನ ದೊರೆಯಲು ಸಾಧ್ಯ. ಶೇ.100 ಫಲಿತಾಂಶದ ಜೊತೆಗೆ ಜೀವನ ಸಾಗಿಸುವ ಸಂಸ್ಕಾರ ಅತೀ ಅವಶ್ಯಕ. ಮಕ್ಕಳ ಶಿಕ್ಷಣದ ತಲಪಾಯ ಭದ್ರವಾಗಿರಬೇಕು. ಮಕ್ಕಳಿಗೆ ಐಎಎಸ್, ಐಪಿಎಸ್ ತರಬೇತಿ ನೀಡಿ ಉನ್ನತ ಮಟ್ಟದ ಅಧಿಕಾರಿಗಳನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಪೋಷಕರ ಮನಸ್ಥಿತಿ ಬದಲಾಗಬೇಕು. ಶೇ.40 ಮಾತ್ರ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದ್ದು ಉಳಿದ ಶೇ.60 ಮನೆಯಲ್ಲಿ ಪೋಷಕರು ನೀಡಬೇಕು. ಜೊತೆಗೆ ಪೌಷ್ಟಿಕ ಆಹಾರ, ಕಲಿಕೆಗೆ ಉತ್ತಮ ವಾತಾವರಣ ನೀಡಬೇಕು. ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಹಾಗೂ ಉನ್ನತ ಉದ್ಯೋಗ ದೊರೆತಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಈ ನಿಟ್ಟಿನಲ್ಲಿ ಪೋಷಕರ ಮಾತ್ರ ಮಹತ್ವ ದ್ದಾಗಿದೆ ಎಂದರು.


ಲಿಟ್ಲ್ ಫ್ಲವರ್ ಶಾಲೆ ನನ್ನ ಜೀವನದ ಸಾಧನೆಗೆ ಭದ್ರ ಬುನಾದಿ ನೀಡಿದೆ- ಡಾ.ಮೌಲ್ಯ ಮಾಲಾಡಿ
ಕಿರಿಯ ಪುಷ್ಪ ಪ್ರಶಸ್ತಿ ಸ್ವೀಕರಿಸಿದ ಮೂಡಬಿದರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮದ ಮುಖ್ಯಸ್ಥೆ ಡಾ.ಮೌಲ್ಯ ಮಾಲಾಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪಡೆದ ಶಿಕ್ಷಣ, ಪಠ್ಯೇತರ ಚಟುವಟಿಕೆಗಳು ನನ್ನ ಜೀವನದಲ್ಲಿ ಭದ್ರ ಬುನಾದಿ ಹಾಕಿದ್ದು ಜೀವನದಲ್ಲಿ ಸಾಧನೆ ಮಾಡಲು ಸಹಕಾರಿ ಆಗಿದೆ. ನನ್ನ ಎಲ್ಲಾ ಸಾಧನೆಗೆ ಪ್ರೇರಣೆಯಾಗಿದೆ. ಶಾಲೆಯಲ್ಲಿ ನೀಡಿದ ಎಲ್ಲಾ ಚಟುವಟಿಕೆ ನನ್ನ ವ್ಯಕ್ತಿತ್ವ ಬಹಳಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು.


ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಅಭಿನಂದನೆ-ಶಶಿಕಲಾ;
ನಗರ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲಗಳ ವ್ಯಕ್ತಿ ಶಶಿಕಲಾ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಶೈಕ್ಷಣಿಕ ಚಟುವಟಿಕೆಯ ಭಾಗ, ಮಕ್ಕಳ ಸೃಜನ ಶೀಲತೆ, ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಿದೆ. ನಾಲ್ಕು ಬಾರಿ ರಾಜ್ಯ, ಎರಡು ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಶಾಲಾ ತಂಡಕ್ಕೆ ಹಾಗೂ ತರಬೇತಿ ನೀಡಿದ ಪಠ್ಯ ಶಿಕ್ಷಕ ಬಾಲಕೃಷ್ಣ ಅವರ ಕ್ರೀಡಾ ಸಾಧನೆಗೆ ಇಲಾಖೆಯಿಂದ ಅಭಿನಂದನೆ ಸಲ್ಲಿಸಿದರು.


ಕಬಡ್ಡಿಯಲ್ಲಿ ಮುಂದಿನ ವರ್ಷ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಿ-ಶ್ರೀಕಾಂತ್ ಬಿರಾವು:
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಮಾತನಾಡಿ, ಮಕ್ಕಳನ್ನು ವೈದ್ಯರು, ಇಂಜಿನಿಯರ್ ಮಾಡುವುದರ ಜೊತೆಗೆ ಪ್ರತಿಯೊಬ್ಬರನ್ನು ಮಾನಸಿಕವಾಗಿ ಸದೃಡಗೊಳಿಸಬೇಕು. ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವಾಗಬೇಕು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದು ಮುಂದಿನ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಿ ಎಂದು ಶುಭ ಹಾರೈಸಿದರು.


ವಿದ್ಯಾರ್ಥಿಗಳಿಗೆ ಬೆಳೆಯಲು ಪೂರಕವಾದ ಎಲ್ಲಾ ವಾತಾವರಣ-ರಾಮಚಂದ್ರ ಭಟ್:
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಬೆಳೆಯಲು ಪೂರಕವಾದ ಎಲ್ಲಾ ವಾತಾವರಣವಿದೆ. ಕನ್ನಡ ಮಾಧ್ಯಮವಾಗಿರುವ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯಬೇಕಿಲ್ಲ. ಕನಿಷ್ಠ ಶುಲ್ಕದೊಂದಿಗೆ ಶಿಕ್ಷಣಕ್ಕೆ ಪೂರಕವಾದ ಸಕಲ ಸೌಲಭ್ಯ ಗಳು ಹೊಂದಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.


ಸಮಗ್ರವಾದ ಶೈಕ್ಷಣಿಕ ಕನಸನ್ನು ಕಲ್ಪಿಸಿದ ಶಾಲೆ-ಡಾ.ಲಿಲ್ಲಿ ಪಿರೇರಾ:
ಅಧ್ಯಕ್ಷತೆ ವಹಿಸಿದ್ದ ಲಿಲ್ಲಿ ಪಿರೇರಾ ಮಾತನಾಡಿ, ಜೀವನದಲ್ಲಿ ಸಣ್ಣ ವಿಚಾರಗಳಿಗೂ ಮಹತ್ವ ನೀಡಬೇಕು. ಶಿಕ್ಷಣ ಎಂಬುದು ಚಿನ್ನ, ಬೆಳ್ಳಿ, ವಜ್ರಕ್ಕಿಂತಲೂ ಅಮೂಲ್ಯವಾದಯದು. ಇದಕ್ಕೆ ವ್ಯಯಿಸಿದ ಹಣ ವ್ಯರ್ಥವಾಗದು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ವ್ಯರ್ಥವಾಗದು. ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹುಮುಖ್ಯ. ಅದು ಜೀವನ ರೂಪಿಸುವ ತಪೋಭೂಮಿಯಾಗಿದ್ದು ಸಮಗ್ರವಾದ ಶೈಕ್ಷಣಿಕ ಕನಸನ್ನು ಈ ಶಾಲೆಯು ನನಸಾಗಿಸುತ್ತಿದೆ ಎಂದರು.


ವ್ಯಕ್ತಿತ್ವ ರೂಪಿಸಿ ಜವಾಬ್ದಾರಿ ಯುತ ನಾಗರೀಕರನ್ನಾಗಿ ನಿರ್ಮಿಸುವ ಸಂಸ್ಥೆ-ಪ್ರಶಾಂತಿ ಬಿ.ಎಸ್.:
ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಟ್ಲ್ ಫ್ಲವರ್ ಶಾಲೆಯು ಪಠ್ಯ ಶಿಕ್ಷಣಕ್ಕೆ ಸೀಮಿತವಾಗಿರದೆ ಎಲ್ಲಾ ಕ್ಷೇತ್ರದಲ್ಲಿ ಶಿಕ್ಷಣ ನೀಡುತ್ತಿದೆ. ಇಲ್ಲಿನ ಹಿರಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ತಂಡ ಸತತ ಎರಡು ಬಾರಿ ರಾಷ್ಟ್ರದ ಮಟ್ಟಡ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸಿ ಕಲಿಕೆಯನ್ನು ಮನರಂಜನೆಯಾಗಿಸಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿ ಜವಾಬ್ದಾರಿ ಯುತ ನಾಗರೀಕರನ್ನಾಗಿ ನಿರ್ಮಿಸಸುತ್ತಿದೆ. ಮುಂದಿನ ಕೆಲ ವರ್ಷಗಳಲ್ಲಿ ಶತಮಾನೋತ್ಸವ ಸಂಭ್ರಮ ನಡೆಯಲಿದ್ದು ಎಲ್ಲರ ಸಹಕಾರ ಕೋರಿದರು.


ಹಿರಿಯ ವಿದ್ಯಾರ್ಥಿಯಾಗಿರುವ ಉದ್ಯಮಿ ನಿತಿನ್ ಪಕ್ಕಳ, ಬೆಥನಿ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನೀತಾ ಪಿರೇರಾ, ಹಿರಿಯ ವಿದ್ಯಾರ್ಥಿನಿ ರಶ್ಮಿ ಬಲ್ನಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಿರಿಯ ಪುಷ್ಪ ಪ್ರಶಸ್ತಿ ಪ್ರದಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಕಿರಿಯ ಪುಷ್ಪ ಪ್ರಶಸ್ತಿಯನ್ನು ರಾಘವೇಂದ್ರ ಪೈಂಟ್ಸ್ ಮ್ಹಾಲಕ ಸತ್ಯಶಂಕರ ಭಟ್, ವಿದೇಶದಲ್ಲಿ ಉದ್ಯೋಗ ದಲ್ಲಿರುವ ಸಂತೋಷ್ ದಲ್ಮೆದಾ ಅವರ ಪರವಾಗಿ ಸುನಿತಾ ಪಿರೇರಾ, ಮೂಡಬಿದರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮದ ಮುಖ್ಯಸ್ಥೆ ಡಾ.ಮೌಲ್ಯ ಮಾಲಾಡಿ, ಸಮಾಜ ಸೇವಾ ಕ್ಷೇತ್ರದಲ್ಲಿ ರಶ್ಮೀ ಹೊಳ್ಳ ಬಲ್ನಾಡು ಇವರಿಗೆ ನೀಡಿ ಗೌರವಿಸಲಾಯಿತು.


ಸನ್ಮಾನ, ಗೌರವಾರ್ಪಣೆ:
ಶಾಸಕ ಅಶೋಕ್ ಕುಮಾರ್ ರೈ, ಬೆಥನಿ ಶಿಕ್ಷಣ ಮಂಡಳಿಯ ಮಂಗಳೂರು ಪ್ರಾಂತ್ಯದ ಕಾರ್ಪೋರೆಟ್ ಮ್ಯಾನೇಜರ್ ಆಗಿ ಪ್ರಥಮ ಬಾರಿಗೆ ಶಾಲೆಗೆ ಆಗಮಿಸಿದ ಭಗಿನಿ ಡಾ.ಲಿಲ್ಲಿ ಪಿರೇರಾ
14ರ ವಯೋಮಾನದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 5ನೇ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿಗಳಾದ ಸುಶ್ರಾವ್ಯ, ಹಾರ್ದಿಕಾ ಪಿ., ಸನ್ನಿಧಿ, ಜುಎನಾ ಡ್ಯಾಝಲ್ ಕುಟಿನ್ಹಾ, ಜೆನಿಟ ಸಿಂಧು ಪಸನ್ನ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಭಟ್, ರಾಷ್ಟ್ರ ಮಟ್ಟದ ಕಬಡ್ಡಿ ತರಬೇತುದಾರರಾಗಿ ಆಯ್ಕೆಯಾದ ಶಿಕ್ಷಕ ಬಾಲಕೃಷ್ಣ ರೈ ಸನ್ಮಾನಿಸಲಾಯಿತು. ನೀತಿ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದ ಜೊವಿಟಾ ಮೆಂಡೋನ್ಸಾ, ಮೌಲ್ಯ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದ ಶರಣ್ಯ ಬೆದ್ರಾಳ, ದೃಶಾ, ಕಲಿಕಾ ಸಾಮರ್ಥ್ಯದಲ್ಲಿ ಪ್ರಥಮ ಸ್ಥಾನ ಪಡೆದ ಹಸ್ತಿನಿ, ಕೃತಿಕಾ ಕೆ.ಸಿ., ಅತ್ಯುತ್ತಮ ಶಾಲಾ ನಾಯಕಿ ದೃಶಾ, ಕಬಡ್ಡಿ ತಂಡದ ನಾಯಕಿ ಜುಎನಾ ಡ್ಯಾಝಲ್ ಕುಡಟಿನ್ಹಾ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಅಯ್ಕೆಯಾದ ಚಂದನ್ ಕೃಷ್ಣ, ರಾಜ್ಯ ಮಟ್ಟದ ಅಬಕಾಶ್ ನಲ್ಲಿ ಪ್ರಥಮ ಆಶ್ರೀಕೃಷ್ಣ ಅವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಶಿಕ್ಷಕರು, ಅಡುಗೆ ಸಿಬಂದಿಯವರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ದೇಣಿಗೆ, ಜೆರ್ಸಿ ಹಸ್ತಾಂತರ:
ಶಾಲಾ ಹಿರಿಯ ವಿದ್ಯಾರ್ಥಿಯಾಗಿರುವ ಬಜಾಜ್ ಫೈನಾನ್ಸ್ ಮಂಗಳೂರು ಪ್ರಾದೇಶಿಕ ಪ್ರಬಂಧಕ ಪ್ರದೀಪ್ ನೇತೃತ್ವದ 1989-94 ಸಾಲಿನ ಬ್ಯಾಚ್ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್‌ನ ಮೂಲಕ ಸಂಗ್ರಹಿಸಿ ಪ್ರತಿವರ್ಷ ನೀಡಲಾಗುತ್ತಿರುವ ರೂ.35,000ಮೊತ್ತದ ಚೆಕ್‌ನ್ನು ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್‌ರವರಿಗೆ ಹಸ್ತಾಂತರಿಸಿದರು. ಹಿರಿಯ ವಿದ್ಯಾರ್ಥಿನಿ ಕೆನಾಡದಲ್ಲಿ ಉದ್ಯೋಗದಲ್ಲಿರುವ ಸ್ವಾತಿ ಭಟ್ ಕಬಡ್ಡಿ ಕ್ರೀಡಾಪಟುಗಳಿಗೆ ಕೊಡುಗೆ ನೀಡಿದ ಜೆರ್ಸಿಯನ್ನು ತಂಡದ ನಾಯಕಿ ಜುಎನಾ ಡ್ಯಾಝಲ್ ಕುಟಿನ್ಹಾರವರಿಗೆ ಹಸ್ತಾಂತರಿಸಿದರು. ಕಬಡ್ಡಿ ತಂಡದ ನಿರ್ವಹಣೆಗಾಗಿ ಹಿರಿಯ ವಿದ್ಯಾರ್ಥಿಯಾಗಿರುವ ಉದ್ಯಮಿ ನಿತಿನ್ ಪಕ್ಕಳ ರೂ.20,000 ನಗದನ್ನು ಶಾಲಾ ಮುಖ್ಯ ಗುರುಗಳಿಗೆ ಹಸ್ತಾಂತರಿಸಿದರು.


ಮುಖ್ಯ ಶಿಕ್ಷಕಿ ವೆನಿಶಾ ಬಿ.ಎಸ್ ಸ್ವಾಗತಿಸಿದರು. ಸಂಚಾಲಕಿ ಪ್ರಶಾಂತಿ ಬಿ.ಎಸ್ ಅತಿಥಿಗಳಿಗೆ ಹೂವಿನ ಕುಂಡ ನೀಡಿ ಸ್ವಾಗತಿಸಿದರು. ಶಿಕ್ಷಕರಾದ ವಿಲ್ಮಾ ಫರ್ನಾಂಡೀಸ್ ಸನ್ಮಾನಿತರ ಪರಿಚಯ ಮಾಡಿದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ಜೋಸ್ಲಿನ್ ಪಾಯಸ್ ವಂದಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮತ್ತು ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here