ಆಲಂಕಾರು: ಎರಡು ತಿಂಗಳ ಬಾಣಂತಿ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಜ.10ರಂದು ಸಂಭವಿಸಿದೆ.
ಕಡಬ ತಾಲೂಕು ಆಲಂಕಾರು ಗ್ರಾಮದ ಕಮ್ಮಿತ್ತಿಲು ದಯಾನಂದ ಗೌಡರ ಪತ್ನಿ ಪುಷ್ಪಾವತಿ (34ವ) ಮೃತಪಟ್ಟವರು.
ಎರಡು ತಿಂಗಳ ಹಿಂದೆ ನಾಲ್ಕನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಇವರು ಬಳಿಕ ಐತ್ತೂರು ಹೊಸಕ್ಲು ತಾಯಿಯ ಮನೆಗೆ ಮೂರು ತಿಂಗಳ ಬಾಣಂತಿ ಆರೈಕೆಗೆ ಹೋಗಿದ್ದು ತಾಯಿ ಮಗು ಆರೋಗ್ಯವಾಗಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ಎರಡು ತಿಂಗಳು ಕಳೆದ ನಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂತಾನ ಹರಣ ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆ, ನಂತರ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜ.10 ರಂದು ಕೊನೆಯುಸಿರೆಳೆದರು.
ಮೃತರು ಪತಿ ದಯಾನಂದ ಗೌಡ, ಪುತ್ರಿಯರಾದ ಎರಡು ತಿಂಗಳ ಹೆಣ್ಣು ಮಗು ಯಶ್ವಿತಾ, ಗುಣಶ್ರೀ, ಹಂಶಿ, ರಿಷಿಕಾ ರವರನ್ನು ಅಗಲಿದ್ದಾರೆ.
ಈ ಸಾವಿಗೆ ಮತ್ತು ಮಕ್ಕಳ ಕಣ್ಣೀರಿಗೆ ಯಾರು ಹೊಣೆ :
ಮೃತರ ಅಂತ್ಯ ಸಂಸ್ಕಾರದ ವೇಳೆ ನೆರೆದಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು. ಎರಡು ತಿಂಗಳ ಹಸುಗೂಸು ಹಾಗು ಮೂರು ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣರು ಯಾರು? ಎಂದು ನೆರೆದವರು ಪ್ರಶ್ನಿಸುತ್ತಿದ್ದರು. ಮೃತಪಟ್ಟ ಪುಷ್ಪಾವತಿಯವರಿಗೆ ಆರೋಗ್ಯದ ಸಮಸ್ಯೆ ಇತ್ತೇ ಎಂದು ಮುಂದಿನ ತನಿಖೆಯಲ್ಲಿ ಗೊತ್ತಾಗಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮೃತ ಪುಷ್ಪಾವತಿ ಅವರು ಕೃಷಿಕರಾಗಿದ್ದು, ಹೈನುಗಾರರಾಗಿದ್ದು, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾಗಿದ್ದರು.