ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ, ಅರಿವು ಕೃಷಿ ಕೇಂದ್ರದ ಸಾರಥ್ಯದಲ್ಲಿ ನಗರಸಭೆ, ತಾ.ಪಂ., ಜಿ.ಪಂ.ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಸಿರೇ ಉಸಿರು-ಮನೆ ಮನೆಯಲ್ಲಿ ಕೃಷಿ ಆಶಯದೊಂದಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಜ.10ರಂದು ಆರಂಭಗೊಂಡಿರುವ ‘ಸಸ್ಯಜಾತ್ರೆ ಸೀಸನ್ 2.0’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಕೃಷಿಕರು, ಉದ್ಯೋಗಿಗಳು, ಉದ್ಯಮಿಗಳು, ವಿವಿಧ ವೃತ್ತಿ ನಿರತರು ಸೇರಿದಂತೆ ಮಕ್ಕಳು, ಮಹಿಳೆಯರೆನ್ನದೆ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಭೇಟಿ ನೀಡುವ ಮೂಲಕ ಸಸ್ಯಜಾತ್ರೆ ಜನಜಾತ್ರೆಯಾಗಿ ಮಾರ್ಪಟ್ಟಿತು. ವಿವಿಧ ಸ್ಟಾಲ್‌ಗಳಲ್ಲಿ ಖರೀದಿಯ ಭರಾಟೆಯೂ ಜೋರಾಗಿ ನಡೆದಿದೆ.
ಸಸ್ಯಜಾತ್ರೆಯ 2ನೇ ದಿನವಾದ ಜ.11ರಂದು ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಕೃಷಿಯ ವಿವಿಧ ಬೆಳೆಗಳಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳು ನಡೆಯಿತು. ಬೆಳಿಗ್ಗೆ ಗಂಟೆ 10ರಿಂದ ‘ಉಪಬೆಳೆ ಮತ್ತು ಏಲಕ್ಕಿ ಬೆಳೆ’ಯ ಕುರಿತು ಅಪ್ಪಂಗಳ ಐಐಎಸ್‌ಆರ್‌ಸಿಯ ಮುಖ್ಯಸ್ಥ ಮತ್ತು ವಿಜ್ಞಾನಿಯಾಗಿರುವ ಡಾ.ಅಂಕೇಗೌಡ ಎಸ್.ಜಿ.ರವರು ವಿಚಾರ ಸಂಕಿರಣ ನಡೆಸಿಕೊಟ್ಟರು.
10.45ರಿಂದ 11.30ರವರೆಗೆ ‘ಉಪಬೆಳೆ-ಕಾಫಿ ಬೆಳೆ’ ಕುರಿತು ಕೊಡಗು ಚೆಟ್ಟಳ್ಳಿ ಕಾಫಿ ಮಂಡಳಿ ಇದರ ಸಂಶೋಧಕರಾಗಿರುವ ಡಾ|ಚೇತನ್ ಜೆ.ಅವರು ಗೋಷ್ಠಿ ನಡೆಸಿದರು. ಮಧ್ಯಾಹ್ನ 11.30ರಿಂದ 1ರವರೆಗೆ ‘ಕಾಳುಮೆಣಸು ಬೆಳೆ’ ಕುರಿತು ಅಪ್ಪಂಗಳ ಐಐಎಸ್‌ಆರ್‌ಸಿಯ ನಿವೃತ್ತ ಹಿರಿಯ ವಿಜ್ಞಾನಿ ಡಾ|ವೇಣುಗೋಪಾಲ್ ವಿಚಾರ ಗೋಷ್ಠಿ ನಡೆಸಿದರು. ಮಧ್ಯಾಹ್ನ 1ರಿಂದ ಅಡಿಕೆ ತಳಿಗಳು ಮತ್ತು ಬೀಜೋತ್ಪಾದನೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ರೋಗ ಮತ್ತು ಕೀಟ ಬಾಧೆಗಳ ನಿರ್ವಹಣೆ ಕುರಿತು ಸಿಪಿಸಿಆರ್‌ಐಯ ಹಿರಿಯ ಜ್ಞಾನಿ ಡಾ|ಎನ್.ಆರ್.ನಾಗರಾಜ ರವರು ಗೋಷ್ಠಿ ನಡೆಸಿಕೊಟ್ಟರು. ಸಂಜೆ ‘ಸಾವಯವ ತರಕಾರಿ ಬೆಳೆಯುವಿಕೆ ಮತ್ತು ತರಕಾರಿ ಕ್ಯಾಲೆಂಡರ್’ ಕುರಿತು ಶಿವಪ್ರಸಾದ್ ವರ್ಮುಡಿ ವಿಚಾರ ಸಂಕಿರಣ ನಡೆಸಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವು ಕೃಷಿಕರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಪ್ರಶ್ನೋತ್ತರ ನಡೆಸಿದರು. ಸುದ್ದಿ ಚಾನೆಲ್ ನಿರೂಪಕ ಉಮೇಶ್ ಮಿತ್ತಡ್ಕ ಸಮಗ್ರಗೋಷ್ಠಿ ನಿರ್ವಹಣೆ ಮಾಡಿದರು. ಸುದ್ದಿ ಬಿಡುಗಡೆ ವರದಿಗಾರ ಹರಿಪ್ರಸಾದ್ ನೆಲ್ಯಾಡಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು.ಸುದ್ದಿ ಮಾಹಿತಿ ಟ್ರಸ್ಟ್ ಅಧ್ಯಕ್ಷ ಡಾ.ಯು.ಪಿ.ಶಿವಾನಂದ ಅವರು ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ವಿವಿಧ ಸ್ಪರ್ಧೆಗಳು:
ಸಸ್ಯಜಾತ್ರೆ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಸ್ಯಜಾತ್ರೆಯ 2ನೇ ದಿನ ಪ್ರಬಂಧ ಸ್ಪರ್ಧೆ, ಕಾರ್ಟೂನ್ ಸ್ಪರ್ಧೆ, ಚಿತ್ರಕಲೆ ಹಾಗೂ ಕವನ ಸ್ಪರ್ಧೆ ನಡೆಸಲಾಯಿತು. ಪ್ರಾಥಮಿಕ, ಪ್ರೌಢಶಾಲೆ ವಿಭಾಗ ಹಾಗೂ ಸಾರ್ವಜನಿಕರು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು. ತಾರನಾಥ ಸವಣೂರು, ಜಗನ್ನಾಥ ಅರಿಯಡ್ಕ ಹಾಗೂ ಮೌನೇಶ್ ವಿಶ್ವಕರ್ಮ ತೀರ್ಪುಗಾರರಾಗಿ ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ಗಂಟೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಹಾಗೂ ಸಂಪ್ಯ ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಂದ ಮೈಮ್ ಶೋ, ಭಾರತೀಯ ವಸ್ತ್ರ ವೈಭವ ಸಾಂಸ್ಕೃತಿಕ ವೈವಿಧ್ಯ ಮತ್ತು ವಿವೇಕಾನಂದ ಸಿಬಿಎಸ್‌ಇ ಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿನಿ ಅಭೀಜ್ಞಾರವರಿಂದ ನೃತ್ಯವೈವಿಧ್ಯ ನಡೆಯಿತು.
ಜನಜಾತ್ರೆಯಾದ ಸಸ್ಯಜಾತ್ರೆಯ ಸ್ಟಾಲ್‌ಗಳು:
ಸಸ್ಯಜಾತ್ರೆಯ 2ನೇ ದಿನವಾದ ಜ.11ರಂದೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಸ್ಟಾಲ್‌ಗಳಿಗೆ ಜನರು ಭೇಟಿ ನೀಡಿ ಖರೀದಿಯಲ್ಲಿ ನಿರತರಾಗಿದ್ದರಲ್ಲದೆ, ವಿವಿಧ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುಮಾರು 120 ಸ್ಟಾಲ್‌ಗಳಿದ್ದು ಬೆಳಿಗ್ಗೆಯಿಂದಲೇ ಜನರು ಆಗಮಿಸಿ ವಿವಿಧ ಸ್ಟಾಲ್‌ಗಳಿಂದ ಖರೀದಿಯಲ್ಲಿ ತೊಡಗುತ್ತಿದ್ದರು. ತಿಂಗಳ 2ನೇ ಶನಿವಾರದ ಸರಕಾರಿ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು,ಗೃಹಿಣಿಯರು,ಕೃಷಿಕರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಂಜೆ ತನಕ ಭೇಟಿ ನೀಡುತ್ತಲೇ ಬಂದಿದ್ದರು. ಸಸ್ಯಜಾತ್ರೆ ಸೀಸನ್ 2.0 ಕೊನೆಯ ದಿನವಾಗಿರುವ ಇಂದು ಇನ್ನೂ ಹೆಚ್ಚಿನ ಜನತೆ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನರ್ಸರಿ ಮಳಿಗೆಗಳು, ಕನ್‌ಸ್ಟ್ರಕ್ಷನ್ ಮಳಿಗೆ, ವಿವಿಧ ಆಹಾರ ಮಳಿಗೆಗಳು,ವೆಹಿಕಲ್ಸ್,ಅಟೋಮೊಬೈಲ್ಸ್ ಸ್ಟಾಲ್‌ಗಳು,ಶಿಕ್ಷಣ ಸಂಸ್ಥೆಗಳ ಮಳಿಗೆಗಳು, ಬ್ಯಾಂಕ್ ಸ್ಟಾಲ್‌ಗಳು, ಗೊಬ್ಬರ, ಕೃಷಿ ಉಪಕರಣ ಮಳಿಗೆಗಳು, ರೈತ ಉತ್ಪಾದಕ ಸಂಸ್ಥೆಯ ಮಳಿಗೆಗಳು, ವಸ್ತ್ರ ಮಳಿಗೆಗಳು ಸೇರಿದಂತೆ 120 ಮಳಿಗೆಗಳು ಪಾಲುಪಡೆದಿವೆ. ವಿವಿಧ ಮಳಿಗೆಗಳಿಂದ ಖರೀದಿ ಮಾಡುತ್ತಿದ್ದ ಜನತೆ ಆಹಾರ ಮಳಿಗೆಗೆ ಭೇಟಿ ನೀಡಿ ದೋಸೆ, ಐಸ್‌ಕ್ರೀಂ, ಗುಜ್ಜೆ ಪೋಡಿ, ಬಾಳೆಕಾಯಿ ಪೋಡಿ, ಲೈಮ್ ಜ್ಯೂಸ್, ಆಲಡ್ಕ ಕಪ್ಪು ದ್ರಾಕ್ಷೆ ಹಣ್ಣಿನ ತಾಜಾ ಜ್ಯೂಸ್, ಚರುಂಬುರಿ, ಮುಶ್ರೂಮ್ ಐಟಂ, ಹಲಸಿನ ಹಣ್ಣಿನ ಹೋಳಿಗೆ ಇತ್ಯಾದಿ ಖಾದ್ಯ ಸವಿಯುತ್ತಾ ಸಂಭ್ರಮಿಸುತ್ತಿದ್ದರು.
ಇಂದು ಸಂಜೆ ಸಮಾರೋಪ
ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅರಿವು ಕೃಷಿ ಸೇವಾ ಕೇಂದ್ರದ ಸಾರಥ್ಯದಲ್ಲಿ ನಗರಸಭೆ, ತಾ.ಪಂ, ಜಿ.ಪಂ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಸಸ್ಯ ಜಾತ್ರೆ ಸೀಸನ್ 2.0’ರ ಸಮಾರೋಪ ಸಮಾರಂಭ ಜ.12ರಂದು ಸಂಜೆ ನಡೆಯಲಿದೆ.
ಪುರಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುದ್ದಿ ಮಾಹಿತಿ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ವಹಿಸಲಿದ್ದಾರೆ. ಇದೇ ಸಂದರ್ಭ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಗುವುದು. ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು,ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ|ಕೆ.ಎಂ.ಕೃಷ್ಣ ಭಟ್, ಪೊಲೀಸ್ ಉಪಅಧೀಕ್ಷರಾದ ಅರುಣ್ ನಾಗೇಗೌಡ, ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನ್ಯಾಯವಾದಿ ಮಹೇಶ್ ಕಜೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್, ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಬ್ಯಾಂಕ್ ಆಫ್ ಬರೋಡಾ ಮಂಗಳೂರು ಇದರ ಜಿಲ್ಲಾ ಪ್ರಾದೇಶಿಕ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿ, ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ.ವಿ.ಗೋಕುಲ್‌ನಾಥ್, ಕೆಐಸಿ ಕುಂಬ್ರದ ಪ್ರಾಧ್ಯಾಪಕ ಅನೀಸ್ ಕೌಸರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃಷಿ ಸಾಧಕರನ್ನು ಗುರುತಿಸಿ, ಬಹುಮಾನ ವಿತರಣೆ ಮಾಡಲಾಗುವುದು. ರಾತ್ರಿ ಸಂತ ಫಿಲೋಮಿನಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಮುಂಡಾಳಗುತ್ತು ಪ್ರಶಾಂತ್ ರೈ ಸಂಯೋಜನೆಯಲ್ಲಿ ‘ಸಸ್ಯ ಸಿರಿ’ ಯಕ್ಷಗಾನ ಕಲಾರೂಪಕ ಪ್ರದರ್ಶನಗೊಳ್ಳಲಿದೆ.