ರಾಮಕುಂಜ: ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಯುವ ದೈವಗಳ ನೇಮೋತ್ಸವ ಮತ್ತು ಬ್ರಹ್ಮಬೈದರ್ಕಳ ಜಾತ್ರೋತ್ಸವದ ಪ್ರಯುಕ್ತ ಜ.12ರಂದು ಬೆಳಿಗ್ಗೆ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಹಳೆನೇರೆಂಕಿ ಪೇಟೆಯಿಂದ ಬ್ಯಾಂಡ್ ವಾದ್ಯದೊಂದಿಗೆ ಹೊರೆಕಾಣಿಕೆ ಮೆರವಣಿಗೆಯೂ ದೈವಸ್ಥಾನಕ್ಕೆ ಆಗಮಿಸಿತು. ಗ್ರಾಮಸ್ಥರು ತಾವು ಬೆಳೆದ ಅಡಿಕೆ, ತೆಂಗಿನಕಾಯಿ,ಸೀಯಾಳ, ಅಕ್ಕಿ, ಬಾಳೆಗೊನೆ, ತರಕಾರಿ ಸಹಿತ ವಿವಿಧ ಫಲವಸ್ತುಗಳನ್ನು ತಂದು ಸಮರ್ಪಿಸಿದರು. ದೈವಸ್ಥಾನದಲ್ಲಿ ಸಂಗ್ರಹಿಸಿದ ಹೊರೆಕಾಣಿಕೆಗೆ ಅರ್ಚಕರು ಪೂಜೆ ಸಲ್ಲಿಸಿದರು. ದೈವಸ್ಥಾನದಲ್ಲಿ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ದುರ್ಗಾಹೋಮ, ಪಂಚವಿಂಶತಿ ಕಲಶ, ತಂಬಿಲ ಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರೂ ಆದ ಪುತ್ತೂರು ನೆಹರುನಗರ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ, ರೇಖಾ ಆನಂದ, ಅರ್ಜುನ್ ಎಸ್.ಕೆ., ಅಕ್ಷಯ್ ಎಸ್.ಕೆ., ಆಕಾಶ್ ಎಸ್.ಕೆ., ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಟಿ.ರಾಮಕುಂಜ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್ಪ್ರಸಾದ್ ಕಾಯಾರ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಶ್ವತ ಮೇಲ್ಛಾವಣಿ ಉದ್ಘಾಟನೆ:
ದೈವಸ್ಥಾನ ಮತ್ತು ಗರಡಿಯ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಶಾಶ್ವತ ಮೇಲ್ಛಾವಣಿಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಕೆ.ಆನಂದ ಅವರು ಈ ಸಂದರ್ಭದಲ್ಲಿ ಉದ್ಘಾಟಿಸಿದರು.