ಪುತ್ತೂರಿನಲ್ಲಿ ಧರ್ಮ ಶಿಕ್ಷಣ ಆರಂಭಿಸುವ ಬಗೆಗೆ ಸಮಾಲೋಚನಾ ಸಭೆ

0

ಹಿಂದೂ ಮಕ್ಕಳಿಗೆ ಧರ್ಮ ಶಿಕ್ಷಣದ ಅವಶ್ಯಕತೆ ಇದೆ : ಅಶೋಕ್ ಕುಮಾರ್ ರೈ


ಪುತ್ತೂರು: ಹಿಂದೂ ಮಕ್ಕಳಿಗೆ ಧರ್ಮ ಶಿಕ್ಷಣದ ಅವಶ್ಯಕತೆ ಖಂಡಿತಕ್ಕೂ ಇದೆ. ನಮ್ಮ ಪರಂಪರೆ, ಆಚಾರ ವಿಚಾರಗಳನ್ನು ಅನೇಕ ಮಕ್ಕಳು ತಿಳಿದುಕೊಂಡಿಲ್ಲ. ಅವುಗಳನ್ನೆಲ್ಲ ಕಲಿಸಿಕೊಡುವುದು ನಮ್ಮ ಮುಂದಿರುವ ಆದ್ಯತೆ. ಆದ್ದರಿಂದ ಧರ್ಮ ಶಿಕ್ಷಣದ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಶೃಂಗೇರಿ ಜಗದ್ಗುರುಗಳ ನಿರ್ದೇಶನದ ಮೇರೆಗೆ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ನಟರಾಜ ವೇದಿಕೆಯಲ್ಲಿ ಹಿಂದೂ ಧರ್ಮ ಶಿಕ್ಷಣವನ್ನು ಆರಂಭಿಸುವ ಬಗೆಗೆ ಭಾನುವಾರ ನಡೆದ ಹಿಂದೂ ಧರ್ಮದ ವಿವಿಧ ಸಮಾಜಗಳ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಹಿಂದೂ ಧರ್ಮಕ್ಕೆ ಹೊರತಾದ ಎಲ್ಲ ಧರ್ಮಗಳಲ್ಲಿ ಆಯಾ ಧರ್ಮಗಳ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸಿಕೊಡಲಾಗುತ್ತದೆ. ಆ ಧರ್ಮಗಳಿಗೆ ಸೇರಿದ ಸಣ್ಣ ಸಣ್ಣ ಮಕ್ಕಳೂ ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಾರೆ. ಆದರೆ ಹಿಂದೂಗಳು ಕೇವಲ ಭಾಷಣಗಳಿಗಷ್ಟೇ ಸೀಮಿತರಾಗುತ್ತಿದ್ದಾರೆ. ನಮ್ಮ ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಧರ್ಮ ಶಿಕ್ಷಣವನ್ನು ಒದಗಿಸಿಕೊಡುವ ಬಗೆಗಿನ ಕಾರ್ಯಯೋಜನೆ ಅತ್ಯಂತ ಶ್ಲಾಘನೀಯ ಎಂದು ನುಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಇಂದು ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಲವ್ ಜಿಹಾದ್‌ನಂತಹ ಸಂಗತಿಗಳಿಗೆ ನಮ್ಮ ಮಕ್ಕಳು ಬಲಿಯಾಗುತ್ತಿದ್ದಾರೆ. ನಮ್ಮ ಧರ್ಮ, ಆಚಾರ ವಿಚಾರಗಳ ಬಗೆಗೆ ಜ್ಞಾನ ಇಲ್ಲದಿರುವುದೇ ಇದಕ್ಕೆಲ್ಲ ಮೂಲಕಾರಣವೆನಿಸಿದೆ. ಇದುವರೆಗೆ ಧರ್ಮಶಿಕ್ಷಣ ಬೇಕು ಅನ್ನುವ ಮನೋಭಾವ ಎಲ್ಲರಲ್ಲಿದ್ದಿದ್ದರೂ ಬೆಕ್ಕಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ ಯಾರೂ ಮುಂದೆ ಬರುತ್ತಿರಲಿಲ್ಲ. ಆದರೆ ಇದೀಗ ಶೃಂಗೇರಿ ಜಗದ್ಗುರುಗಳೇ ಇದಕ್ಕೊಂದು ಮುನ್ನುಡಿ ಬರೆಯುತ್ತಿರುವುದು ಹಿಂದೂ ಸಮಾಜದ ಪುಣ್ಯ ಎಂದರು.


ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಯಾಗಿ ಆಗಮಿಸಿದ್ದ ವಿದ್ವಾನ್ ತೇಜಶಂಕರ ಸೋಮಯಾಜಿ ಮಾತನಾಡಿ ಧರ್ಮ ಶಿಕ್ಷಣವನ್ನು ಆರಂಭಿಸುವುದಕ್ಕೆ ಪುತ್ತೂರು ಅತ್ಯಂತ ಸೂಕ್ತ ಪ್ರದೇಶ. ಇಲ್ಲಿ ವಿನೂತನ ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಮನಃಸ್ಥಿತಿ ಉಳ್ಳಂತಹ ವ್ಯಕ್ತಿಗಳು ಹಲವರಿದ್ದಾರೆ. ಧರ್ಮ ಶಿಕ್ಷಣ ಒದಗಿಸಿಕೊಡುವುದಕ್ಕಾಗಿ ಶಿಕ್ಷಕರನ್ನು ಗುರುತಿಸಿ ಆ ಶಿಕ್ಷಕರಿಗೆ ತರಬೇತಿ ಹಾಗೂ ಪಠ್ಯಕ್ರಮವನ್ನು ಒದಗಿಸಿಕೊಡಲಾಗುತ್ತದೆ ಎಂದರು.


ಮುಳಿಯ ಜ್ಯುವೆಲ್ಸ್‌ನ ಮಾಲಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ ಧರ್ಮ ಶಿಕ್ಷಣದ ಅಗತ್ಯತೆ ಬಹಳಷ್ಟಿದೆ. ತಾನು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಹಿಂದೂ ಧರ್ಮ ಶಿಕ್ಷಣದ ತರಗತಿಗಳನ್ನು ಆರಂಭಿಸಲಾಗಿತ್ತು. ಅದು ಮತ್ತಷ್ಟು ವಿಸ್ತಾರವನ್ನು ಕಾಣಬೇಕಾಗಿದೆ. ಎಲ್ಲೆಡೆ ಧರ್ಮ ಶಿಕ್ಷಣ ಜಾರಿಗೆ ಬರಬೇಕಿದೆ ಎಂದರು.


ಪುತ್ತೂರಿನ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿ ಧರ್ಮ ಶಿಕ್ಷಣದ ಕಾರ್ಯದಲ್ಲಿ ನಾವೆಲ್ಲರೂ ಜತೆಯಾಗಿ ಮುಂದುವರೆಯಬೇಕು ಎಂದರು. ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ ಇದೊಂದು ಆಗಲೇಬೇಕಾದ ಕೆಲಸ. ನಮ್ಮ ಮಕ್ಕಳಿಗೆ ಧರ್ಮದ ಬಗೆಗೆ ತಿಳಿಹೇಳಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದರು. ಹಿರಿಯರಾದ ಮೊಗೆರೋಡಿ ಬಾಲಕೃಷ್ಣ ರೈ, ಮಂಗಳೂರಿನ ಸನಾತನ ಸಂಸ್ಥೆಯ ಜಿಲ್ಲಾಧ್ಯಕ್ಷ ಪ್ರಭಾಕರ ನಾಯ್ಕ್ ಅನಿಸಿಕೆ ವ್ಯಕ್ತಪಡಿಸಿದರು.


ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಐತ್ತಪ್ಪ ನಾಯ್ಕ್ ಹಾಗೂ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here