ಸೇವಾ ಚಟುವಟಿಕೆಗಳಿಂದ ಸಮಾಜದ ಋಣದಿಂದ ಮುಕ್ತಿ: ಚಂದಪ್ಪ ಮೂಲ್ಯ
ಉಪ್ಪಿನಂಗಡಿ:ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಋಣದಿಂದ ಮುಕ್ತರಾಗುವುದಲ್ಲದೆ ಒಂಟಿತನದಿಂದ ಹೊರಬರಲು ಹಿರಿಯರಿಗೆ ಸಹಾಯಕವಾಗುತ್ತದೆಯೆಂದು ಬಿಎಸ್ಸೆಫ್ನ ನಿವೃತ ಡೆಪ್ಯುಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ತಿಳಿಸಿದರು.
ಮೆಲ್ಕಾರಿನ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯನ್ನು ಇಲ್ಲಿನ ಪಂಜಳದ ವಿರಾಮದ ಮನೆಯಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು.
ಮುಖ್ಯ ಅತಿಥಿ ಮುಂಬೈ ವಿ.ವಿಯ ಕನ್ನಡ ವಿಭಾಗದ ನಿವೃತ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ ಮಾತನಾಡಿ, ಸೇವಾ ಕಾರ್ಯಗಳು ವೈಯಕ್ತಿಕ ನೆಲೆಯಿಂದ ಆರಂಭವಾಗಿ ಕೌಟುಂಬಿಕ ಮತ್ತು ಸಾಮಾಜಿಕವಾಗಿ ವಿಸ್ತಾರಗೊಳ್ಳುತ್ತದೆ. ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಪ್ರತಿಯೊಬ್ಬರೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ, ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವದ ದಾನಿಗಳನ್ನು ಸ್ಮರಿಸಿದರು.
ಪ್ರತಿಷ್ಠಾನದ ತಾಲೂಕು ಘಟಕಗಳಿಗೆ ಕೇಂದ್ರ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಸಕ್ರಿಯಗೊಳಿಸುವ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು.
ಕೇಂದ್ರ ಸಮಿತಿ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಘಟಕದ ಪದಾಧಿಕಾರಿಗಳಾದ ಕೃಷ್ಣಶರ್ಮ ಅನಾರು, ಗುಂಡ್ಯಡ್ಕ ಈಶ್ವರ ಭಟ್, ಸುಬ್ರಾಯ ರಾಮ ಮಡಿವಾಳ, ಡಾ. ಬಿ.ಎನ್. ಮಹಾಲಿಂಗ ಭಟ್, ಉಮೇಶ ಶೆಣೈ ಉಪ್ಪಿನಂಗಡಿ, ಚಂದ್ರಶೇಖರ ಆಳ್ವ ಪಡುಮಲೆ, ರೋಹಿತ್ ಮಂಚಿ ಉಪಸ್ಥಿತರಿದ್ದರು.
ಡಾ.ವಾರಿಜಾ ದೇವಿ ನೀರ್ಬೈಲು ಪ್ರಾರ್ಥಿಸಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಭವಾನಿ ಶಂಕರ ಶೆಟ್ಟಿ ಪುತ್ತೂರು ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.