ಅಕ್ರಮ ಕಸಾಯಿಖಾನೆ ನಿಲ್ಲಿಸದಿದ್ದರೆ ಜೀವ ಪಣಕ್ಕಿಟ್ಟು ಹೋರಾಟ-ಪ್ರದೀಪ್ ಸರಿಪಳ್ಳ
ಕಡಬ: ಅಕ್ರಮ ಕಸಾಯಿಖಾನೆ, ಗೋ ಸಾಗಾಟ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜೀವ ಪಣಕ್ಕಿಟ್ಟಾದರೂ ಗೋ ರಕ್ಷಣೆ ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ನ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಅವರು ಹೇಳಿದ್ದಾರೆ.
ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಎರಡು ದಿನಗಳ ಹಿಂದೆ ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಗಾಟ ಹಾಗೂ ಇದರಲ್ಲಿ 3 ಜಾನುವಾರು ಅಸುನೀಗಿದ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪ್ರಖಂಡ ವಿ.ಹಿಂ.ಪ. ನೇತೃತ್ವದಲ್ಲಿ ಕಡಬ ಠಾಣೆಯ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹಿಂದೂಗಳ ಯಾವುದೇ ಪವಿತ್ರ ಕಾರ್ಯಕ್ರಮಕ್ಕೆ ಗೋವು ಬೇಕೇ ಬೇಕು. ಗೋವು ಇಲ್ಲದೆ ಭಾರತ ಇಲ್ಲ, ನಮ್ಮ ರಾಷ್ಟ ಮಾತೆ ಗೋ ಮಾತೆನೇ, ಇದನ್ನು ಯಾರೂ ಘೋಷಣೆ ಮಾಡಬೇಕಿಲ್ಲ, ಎರಡು ದಿನಗಳ ಹಿಂದೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಪಿಕಪ್‌ವೊಂದರಲ್ಲಿ ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿತ್ತು, ಪಿಕಪ್ ನಲ್ಲಿ 8 ದನಗಳನ್ನು ಹಾಕಿ ಕೊಂಡೊಯ್ಯುತ್ತಿದ್ದಾರೆಂದರೆ ಅವುಗಳ ಪರಿಸ್ಥಿತಿ ಹೇಗಿರಬೇಡ. ಅದರಲ್ಲಿ ಮೂರು ಜಾನುವಾರುಗಳು ಮೃತಪಟ್ಟಿವೆ. ಬೆಂಗಳೂರಿನ ಚಾಮರಾಜನಗರದಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ ವಿಕೃತಿ ಮೆರೆಯಲಾಗಿದೆ, ಇಂತಹ ಪಾಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ, ಜಿಹಾದಿ ಮನಸ್ಸಿನ ನಿಷೇಧಿತ ಪಿ.ಎಫ್.ಐ. ಸಂಘಟನೆಯವರು ಇದರ ಹಿಂದೆ ಇದ್ದು ಅವರು ಕೋಮು ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದಾರೆ. ಹಿಂದೂ ನಾಯಕರನ್ನು ಹತ್ಯೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಿಷೇಧಿತ ಸಂಘಟನೆಯ ನಾಯಕರಿಗೆ ಮದ್ದುಗುಂಡುಗಳು ಬಂದಿರುವುದು ಪತ್ತೆಯಾಗಿದೆ ಎಂದು ಆರೋಪಿಸಿದ ಅವರು, ಅಲ್ಪಸಂಖ್ಯಾತರ ರಕ್ಷಣೆ ಹೆಸರಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಂತಹ ಪಾಪಿಗಳಿಗೆ ರಕ್ಷಣೆ ನೀಡುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಕ್ರಮ ಗೋ ಸಾಗಾಟವನ್ನು ತಡೆಯಲು ರಸ್ತೆಯಲ್ಲಿ ನಿಲ್ಲಬೇಕಾಗಿ ಬರುತ್ತದೆ, ಯಾವುದೇ ಬೆಲೆ ತೆತ್ತಾದರೂ ನಾವು ಗೋ ರಕ್ಷಣೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ತಾ.ಪಂ.ಅಧ್ಯಕ್ಷೆ ಪುಲಸ್ತ್ಯ ರೈ ಮಾತನಾಡಿ, ನಮಗೆ ಪೂಜನೀಯ ಸ್ಥಾನದಲ್ಲಿರುವ ಗೋವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಯಿಸಲಾಗುತ್ತಿದೆ. ಕಾಂಗ್ರೆಸ್ ಸರಕಾರ ಈ ಗೋ ಕಟುಕರನ್ನು ರಕ್ಷಣೆ ಮಾಡುತ್ತಾ ಇವರಿಗೆ ಬೆಂಬಲ ನೀಡುತ್ತಿದೆ. ಗೋ ಮಾತೆಯನ್ನು ರಕ್ಷಿಸಲು ನಾವು ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಈ ನಿಟ್ಟಿನಲ್ಲಿ ಹಿಂದೂಗಳು ಎಚ್ಚರಗೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿ,ಹಿಂ.ಪ.ನ ಉಪಾಧ್ಯಕ್ಷ ಸುದರ್ಶನ ಶಿರಾಡಿ, ಗೌರವಾಧ್ಯಕ್ಷ ವಾಸುದೇವ ಭಟ್ ಕಡ್ಯ, ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ಬಿಜೆಪಿ ಯುವಮೋರ್ಛಾದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್. ಮಾತೃಶಕ್ತಿಯ ಜಿಲ್ಲಾ ಪ್ರಮುಖ್ ಗೀತಾ ಅಮೈ ಕೇವಳ, ಕಿಸಾನ್ ಸಂಘ ಕಡಬ ತಾಲೂಕು ಅಧ್ಯಕ್ಷ ಮನೋಹರ್ ರೈ ಅಲಿಮಾರ್ ಪಟ್ಟೆ, ಪ್ರಮುಖರಾದ ಪ್ರಮೋದ್ ರೈ ನಂದುಗುರಿ, ಉಮೇಶ್ ಆಚಾರ್ಯ, ವಾಸುದೇವ ಗೌಡ ಕೊಲ್ಲೆಸಾಗು, ಸತ್ಯನಾರಾಯಣ ಹೆಗ್ಡೆ, ವೀಣಾ ಕೊಲ್ಲೆಸಾಗು, ಜಯಚಂದ್ರ ರೈ ಕುಂಟೋಡಿ, ಸುರೇಶ್ ದೇಂತಾರು, ಮುತ್ತುಕುಮಾರ್, ಸೀತಾರಾಮ ಗುರುಕೃಪಾ ಮೊದಲಾದವರು ಉಪಸ್ಥಿತರಿದ್ದರು. ಬಜರಂಗದಳದ ಅಶ್ವಿತ್ ಕಂಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದನಾರ್ಪಣೆ ಸಲ್ಲಿಸಿದರು. ಪ್ರತಿಭಟನೆಯ ಬಳಿಕ ಒಂದೆರಡು ನಿಮಿಷಗಳ ಕಾಲ ರಾಜ್ಯ ರಸ್ತೆತಡೆ ಮಾಡಲಾಯಿತು, ಬಳಿಕ ಕಡಬ ಠಾಣೆಯ ಮೂಲಕ ಮನವಿ ಸಲ್ಲಿಸಲಾಯಿತು.