ಪಾಣಾಜೆ: ಇಲ್ಲಿನ ಆರ್ಲಪದವು ಕಿನ್ನಿಮಾಣಿ-ಪೂಮಾಣಿ, ಪಿಲಿಭೂತ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.19 ಮತ್ತು 20 ರಂದು ನಡೆಯಲಿದ್ದು, ಜ. 19 ರಂದು ಹಸಿರುವಾಣಿ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.
ಹಸಿರು ಹೊರೆಕಾಣಿಕೆ ಮೆರವಣಿಗೆಯು ಉಡ್ಡಂಗಳದಲ್ಲಿ ಆರಂಭಗೊಂಡಿತು. ಹಿರಿಯರಾದ ಮಹಾಲಿಂಗ ಮಣಿಯಾಣಿ ದೇವಸ್ಯ ಮೆರವಣಿಗೆಗೆ ಚಾಲನೆ ನೀಡಿದರು. ಕುಣಿತ ಭಜನೆಯೊಂದಿಗೆ ಚೆಂಡೆ ಮೇಳ, ಗೊಂಬೆ ಬಳಗದ ಆಕರ್ಷಣೆಯೊಂದಿಗೆ ಮೆರವಣಿಗೆಯು ದೈವಸ್ಥಾನಕ್ಕೆ ತಲುಪಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ಜರಗಿತು.
ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಮೊಕ್ತೇಸರ ವಿಠಲ ರೈ ಬೈಲಾಡಿ ಉಗ್ರಾಣ ಮುಹೂರ್ತ ನೆರವೇರಿಸಿದರು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಜಯಂತಿ ಹರಿಶ್ಚಂದ್ರ ಪಕ್ಕಳ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.
ಮಧ್ಯಾಹ್ನ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ನೂತನ ರಣಮಂಗಲ ಸಭಾಭವನವನ್ನು ರಿಬ್ಬನ್ ಬಿಡಿಸಿ, ತೆಂಗಿನಕಾಯಿ ಒಡೆದು ಉದ್ಘಾಟಿಸಿದರು. ಕೂಳ್ಯೂರು ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯನ್ನು ಪ್ರಗತಿಪರ ಕೃಷಿಕ ವಾಸುಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಕು. ಶರಧಿ ಕಡಮಾಜೆಯವರಿಂದ ಭರತನಾಟ್ಯ ಪುಷ್ಪಾಂಜಲಿ, ಅನ್ನಸಂತರ್ಪಣೆಯಾಗಿ ಅಪರಾಹ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ʻಕರ್ಣಪರ್ವʼ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ ನಡೆದು ವೈದಿಕ ಕ್ರಿಯೆಗಳು ನಡೆದುಬಂದವು. ಮಧ್ಯಾಹ್ನ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.