ಆಹಾರ ಮೇಳ, ಸಸ್ಯ ಮೇಳ ಆಯೋಜನೆ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: 39ನೇ ವರ್ಷದ ಹೊನಲು ಬೆಳಕಿನ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳವು ಈ ಬಾರಿ ಮಾ.22ರಂದು ನಡೆಯಲಿದ್ದು, ಈ ಬಾರಿಯೂ ಆಹಾರ ಮೇಳ, ಸಸ್ಯ ಮೇಳ, ಬೋಟಿಂಗ್ನೊಂದಿಗೆ ಉಬಾರ್ ಕಂಬಳೋತ್ಸವವಾಗಿ ನಡೆಯಲಿದ್ದು, ಕಂಬಳದ ಕರೆ ಮುಹೂರ್ತವು ಜ.24ರಂದು ಬೆಳಗ್ಗೆ ನಡೆಯಲಿದೆ.
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ಅಧ್ಯಕ್ಷತೆಯಲ್ಲಿ ಜ.19ರಂದು ಕೂಟೇಲು ದಡ್ಡುವಿನ ನೇತ್ರಾವತಿ ನದಿ ಕಿನಾರೆಯ ಬದಿಯಲ್ಲಿರುವ ಕಂಬಳ ಕರೆಯ ಬಳಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ, ಕಂಬಳವೆನ್ನುವುದು ರೈತಾಪಿ ವರ್ಗದ ಕ್ರೀಡೆಯಾಗಿದ್ದು, ವಿಜಯ- ವಿಕ್ರಮ ಕಂಬಳವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಹಾಗೂ ಇನ್ನಷ್ಟು ಆಕರ್ಷನೀಯವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ಹಲವು ಹೊಸತನಗಳನ್ನು ಈ ಬಾರಿ ಸೇರಿಸಿಕೊಳ್ಳಬೇಕು. ಪ್ರತಿ ಮನೆಯಲ್ಲಿಯೂ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಸ್ಯಮೇಳವನ್ನು ಆಯೋಜಿಸಬೇಕು. ಇದರೊಂದಿಗೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಬೇಕು. ಅಲ್ಲದೇ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ರೈಡ್ ಸೌಲಭ್ಯವನ್ನೂ ಕಲ್ಪಿಸಬೇಕು. ಒಟ್ಟಿನಲ್ಲಿ ಉಬಾರ್ ಕಂಬಳೋತ್ಸವವು ಸರ್ವಧರ್ಮೀಯರಿಗೂ ಭಾಗವಹಿಸಲು ಅವಕಾಶವಾಗುವ ಹಾಗೆ ಹಾಗೂ ಮಕ್ಕಳು, ಮಹಿಳೆಯರೆನ್ನದೆ ಎಲ್ಲರೂ ಮನೋರಂಜನೆ ಪಡೆಯುವ ಹಾಗೆ ವಿವಿಧ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಪದ್ಮವಿದ್ಯಾ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್, ಶಿವಪ್ರಸಾದ್ ರೈ ಮಠಂತಬೆಟ್ಟು, ಪದಾಧಿಕಾರಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ಯೊಗೀಶ್ ಸಾಮಾನಿ, ದಿಲೀಪ್ ಶೆಟ್ಟಿ, ಕುಮಾರನಾಥ ಕೋಡಿಂಬಾಡಿ, ಮುನೀರ್, ವಿಜಯಕುಮಾರ್, ಜಗನ್ನಾಥ ಶೆಟ್ಟಿ ನಡುಮನೆ, ವಿಶ್ವನಾಥ ಶೆಟ್ಟಿ ಕಂಗ್ವೆ, ನಿರಂಜನ ರೈ ಮಠಂತಬೆಟ್ಟು, ರವೀಂದ್ರ ಪಟಾರ್ತಿ, ಜಯಪ್ರಕಾಶ್ ಬದಿನಾರು, ಮೋನಪ್ಪ ಗೌಡ, ಜಗದೀಶ ಕುಮಾರ್ ಪರಕಜೆ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.