- ಪೂರ್ವಿಕ ಪಂಡಿತರ ಜೀವನ ವಿಧಾನ ನಮಗೆ ಆದರ್ಶ-ಮಜೀದ್ ಬಾಖವಿ
- ಅನಾಚಾರಗಳು ಹೆಚ್ಚುತ್ತಿರುವುದು ಅಂತ್ಯ ದಿನದ ಲಕ್ಷಣವಾಗಿದೆ-ಇರ್ಷಾದ್ ಫೈಝಿ ಪಾಲ್ತಾಡ್
ಪುತ್ತೂರು: ಇತಿಹಾಸ ಪ್ರಸಿದ್ದ ಮುಕ್ವೆ ಮಖಾಂ ಉರೂಸ್, ಮತಪ್ರಭಾಷಣ ಉದ್ಘಾಟನೆ ಜ.19ರಂದು ನಡೆಯಿತು.
ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾ ನೆರವೇರಿಸಿದರು. ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟಿಸಿದ ತಲಂಗರ ಖತೀಬ್ ಅಬ್ದುಲ್ ಮಜೀದ್ ಬಾಖವಿ ಮಾತನಾಡಿ ನಮ್ಮ ಪೂರ್ವಿಕ ಪಂಡಿತರ ಆಚಾರ, ವಿಚಾರಗಳು ನಮಗೆ ಮಾದರಿಯಾಗಿದ್ದು ಅವರ ಜೀವನ ವಿಧಾನ ನಮಗೆಲ್ಲಾ ಆದರ್ಶವಾಗಿದೆ ಎಂದು ಹೇಳಿದರು. ಕ್ಷಣಿಕವಾದ ಐಹಿಕ ಜೀವನದ ವ್ಯಾಮೋಹಕ್ಕೆ ಒಳಗಾಗದೇ ಪಾರತ್ರಿಕ ಜೀವನದ ಬಗ್ಗೆಯೂ ಚಿಂತನೆ ನಡೆಸಿ ಜೀವನ ನಡೆಸಬೇಕು. ಪ್ರತಿನಿತ್ಯ ಐದು ಬಾರಿ ಕಡ್ಡಾಯ ನಮಾಜು ಮಾಡುವ ಮೂಲಕ ಇಸ್ಲಾಂ ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸಿದರೆ ಮಾತ್ರ ಅಲ್ಲಾಹನ ಸ್ವರ್ಗ ಸಂಪಾದಿಸಲು ಸಾಧ್ಯ ಎಂದು ಹೇಳಿದರು.
‘ನಿಸ್ಕಾರಂ ರಕ್ಷಯುಂ ಶಿಕ್ಷೆಯುಂ ಎನ್ನುವ ವಿಷಯದಲ್ಲಿ ಮುಖ್ಯ ಪ್ರಭಾಷಣ ನಡೆಸಿದ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಖತೀಬ್ ಇರ್ಶಾದ್ ಫೈಝಿ ಪಾಲ್ತಾಡ್ ಮಾತನಾಡಿ ಇಸ್ಲಾಂ ಕಡ್ಡಾಯಗೊಳಿಸಿದ ನಮಾಜು ಕರ್ಮವನ್ನು ನಿರ್ವಹಿಸುವ ಮೂಲಕ ಧರ್ಮದ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ನೈಜ ಸತ್ಯ ವಿಶ್ವಾಸಿಯಾಗಿ ಜೀವಿಸಿದರೆ ಮಾತ್ರ ನಮ್ಮ ಜೀವನ ಸಾರ್ಥಕ ಎಂದು ಹೇಳಿದರು.
ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲಿ ಒಂದಾದ ನಮಾಜಿನ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ತೋರಬಾರದು, ನಮಾಜಿನ ಕುರಿತು ಶ್ರದ್ದೆ ಇಲ್ಲದವರಿಗೆ ಸ್ವರ್ಗ ಸಂಪಾದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಕೆಡುಕಿನ ಕ್ಷೇತ್ರಗಳಿಂದ ದೂರವುಳಿಯುವ ಮೂಲಕ ಒಳಿತಿನ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಅನಾಚಾರ, ಅತ್ಯಾಚಾರ, ಕೆಟ್ಟ ಆಚಾರ ವಿಚಾರಗಳು ಹೆಚ್ಚುತ್ತಿರುವುದು ಅಂತ್ಯ ದಿನದ ಲಕ್ಷಣವಾಗಿದೆ ಎಂದು ಇರ್ಶಾದ್ ಫೈಝಿ ಹೇಳಿದರು.
ಮುಕ್ವೆ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಜಲೀಲ್ ದಾರಿಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಫಿಲ್ ಬಿಲಾಲ್ ಮುಕ್ವೆ ಖಿರಾಅತ್ ಪಠಿಸಿದರು.
ವೇದಿಕೆಯಲ್ಲಿ ಮುಕ್ವೆ ಮಸೀದಿಯ ಪ್ರ.ಕಾರ್ಯದರ್ಶಿ ಹಾಜಿ ಮುಹಮ್ಮದ್ ಕುಂಞಿ ದರ್ಖಾಸ್, ಮುಕ್ವೆ ಎಚ್.ಐ.ಎಂ ಮುಅಲ್ಲಿಂಗಳಾದ ಅಬ್ದುಲ್ಲ ಮುಸ್ಲಿಯಾರ್, ಮನ್ಸೂರ್ ಅಝ್ಹರಿ, ಇಸಾಕ್ ಅರ್ಷದಿ, ಶರೀಫ್ ದಾರಿಮಿ, ಅಬ್ದುಲ್ ಮಾಜಿದ್ ಹಝ್ರತ್, ಯೂಸುಫ್ ಸಾಹಿರ್ ಯಮಾನಿ, ನೆರಿಗೇರಿ ಎಚ್.ಐ.ಎಂ ಮುಅಲ್ಲಿಂ ರಝಾಕ್ ದಾರಿಮಿ, ಮುಕ್ವೆ ಆರ್ಜೆಎಂ ಮ್ಯಾನೇಜರ್ ರಿಯಾಝ್ ಫೈಝಿ ಪಟ್ಟೆ, ಆರಿಫ್ ಇಂಜಿನಿಯರ್ ಬೆಳ್ಳಾರೆ, ಮುಕ್ವೆ ಮಸೀದಿ ಕೋಶಾಧಿಕಾರಿ ಉಮ್ಮರ್ ಹಾಜಿ ಪಟ್ಟೆ, ಮುಕ್ವೆ ಮಸೀದಿ ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ, ಕೆ.ಎಂ ಬಾವ ಹಾಜಿ ಕೂರ್ನಡ್ಕ, ಎಸ್ಕೆಎಸ್ಸೆಸ್ಸೆಫ್ ಮುಕ್ವೆ ಶಾಖೆಯ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಶುಹೈಬ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.