ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆ

0

ಪುತ್ತೂರು: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆ ಬರುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಕುಡಿಯುವ ನೀರನ್ನು ಹಿತಮಿತವಾಗಿ ಬಳಸುವುದು, ನೀರು ಪೋಲು ಆಗುವುದನ್ನು ತಪ್ಪಿಸುವುದು ಹಾಗೂ ನೀರಿನ ಶುಲ್ಕ ಪಾವತಿಸದವರ ನೀರಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತ ಮಾಡುವುದು ಇತ್ಯಾದಿ ವಿಷಯಗಳ ಬಗ್ಗೆ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಜ.15 ರಂದು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಾಸ್ತಾಪಿಸಿದ ಸುಂದರಿಯವರು ಈಗಾಗಲೇ ಕೆಲವೊಂದು ಮನೆಗಳಲ್ಲಿ ಎರಡೆರಡು ನಳ್ಳಿ ನೀರಿನ ಸಂಪರ್ಕ ಇದೆ ಅಲ್ಲದೆ ಬೋರ್‌ವೆಲ್ ಇದ್ದವರ ಮನೆಗೂ ನಳ್ಳಿ ನೀರಿನ ಸಂಪರ್ಕ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಈ ಬಗ್ಗೆ ನೀರಿನ ಸಮಿತಿ ಸಭೆ ಕರೆದು ಎಲ್ಲೆಲ್ಲಿ ಈ ರೀತಿ ಇದೆ ಎಂಬುದನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಅಂತಹ ಸಂಪರ್ಕಗಳನ್ನು ಕಡಿತ ಮಾಡುವುದು ಎಂದು ತಿಳಿಸಿದರು. ನೀರಿನ ಶುಲ್ಕ ಪಾವತಿಸದೆ ಬಾಕಿ ಇರಿಸಿಕೊಂಡವರಿಗೆ ಈಗಾಗಲೇ ಶುಲ್ಕ ಪಾವತಿಗೆ ಸೂಚನೆ ನೀಡಿದ್ದೇವೆ. ಅತೀ ಹೆಚ್ಚು ಶುಲ್ಕ ಪಾವತಿಗೆ ಬಾಕಿ ಇರುವವರ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತ ಮಾಡಬೇಕಾಗುತ್ತದೆ ಆದ್ದರಿಂದ ನೀರಿನ ಶುಲ್ಕವನ್ನು ಶೀಘ್ರವಾಗಿ ಪಾವತಿಸುವಂತೆ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳ ತಿಳಿಸಿದರು. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕರವರುಗಳು ವಿವಿಧ ಸಲಹೆಗಳನ್ನು ನೀಡಿದರು.


ಪುತ್ತೂರು-ದೇವಸ್ಯ-ಗುಮ್ಮಟೆಗದ್ದೆ ಬಸ್ಸು ಸಂಚಾರವಿಲ್ಲದೆ ತೊಂದರೆ
ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರ ನಿಷೇಧದ ಬಳಿಕ ಈ ಭಾಗದ ಜನರ ಬೇಡಿಕೆಯಂತೆ ಪುತ್ತೂರಿನಿಂದ ದೇವಸ್ಯ ಮಾರ್ಗವಾಗಿ ಗುಮ್ಮಟೆಗದ್ದೆಗೆ ಸರಕಾರಿ ಬಸ್ಸು ಬಂದು ಹೋಗುತ್ತಿತ್ತು. ಆದರೆ ಇದೀಗ ಕಳೆದೊಂದು ತಿಂಗಳಿನಿಂದ ಈ ಬಸ್ಸು ಸಂಚಾರ ನಿಂತಿರುವುದರಿಂದ ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಮುಖ್ಯವಾಗಿ ಶಾಲಾ,ಕಾಲೇಜು ಹೋಗುವ ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ವಿಚಾರವನ್ನು ನಳಿನಾಕ್ಷಿಯವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಡಿಸಿ ಹಾಗೇ ಶಾಸಕರಿಗೆ ಮನವಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.


ಶಾಲಾ ಶಿಕ್ಷಕರ ಕೊರತೆ ಇದೆ
ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬೆತ್ತಡ್ಕ, ಅಜ್ಜಿಕಲ್ಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ಕೊರತೆ ಕಂಡು ಬಂದಿದೆ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಾದರೂ ಗ್ರಾ.ಪಂ ವ್ಯಾಪ್ತಿಯ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸುವುದು ಅವಶ್ಯಕವಾಗಿದೆ. ಅದರಲ್ಲೂ ದರ್ಬೆತ್ತಡ್ಕ ಮತ್ತು ಅಜ್ಜಿಕಲ್ಲು ಶಾಲೆಗೆ ತುರ್ತಾಗಿ ಶಿಕ್ಷಕರ ನೇಮಕವನ್ನು ಮಾಡುವಂತೆ ಶಿಕ್ಷಣ ಇಲಾಖೆಗೆ ಬರೆದುಕೊಳ್ಳುವ ಎಂದು ಮಹೇಶ್ ರೈ ಕೇರಿ ತಿಳಿಸಿದರು. ಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಇರುವ ಬಗ್ಗೆ ಮಾಹಿತಿ ನೀಡಿದ ಚಿತ್ರಾ ಬಿ.ಸಿಯವರು ಈ ಬಗ್ಗೆ ಶಾಲಾ ಶಿಕ್ಷಕರು ಗಮನ ಹರಿಸುವಂತೆ ತಿಳಿಸಿದರು.


ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿರುವ ಅಜ್ಜಿಕಲ್ಲು ಪರಿಸರ
ಅಜ್ಜಿಕಲ್ಲು ಪರಿಸರದಲ್ಲಿ ಮೊಬೈಲ್ ಟವರ್ ಇಲ್ಲದೇ ಇರುವುದರಿಂದ ಈ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಇಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳು ಕೂಡ ನೆಟ್‌ವರ್ಕ್ ಮೂಲಕವೇ ಆಗುತ್ತಿರುವುದು ತೊಂದರೆಯುಂಟಾಗಿದೆ. ಅಜ್ಜಿಕಲ್ಲು ಶಾಲೆಯ ಪರಿಸರದಲ್ಲಿಯೂ ನೆಟ್‌ವರ್ಕ್ ಸಮಸ್ಯೆ ಇದ್ದು ಶಾಲಾ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಲಾ ಶಿಕ್ಷಕರು ಕೂಡ ನಮ್ಮ ಗಮನಕ್ಕೆ ತಂದಿದ್ದಾರೆ ಎಂಬ ವಿಚಾರವನ್ನು ಅಶ್ರಫ್ ಉಜಿರೋಡಿ ಸಭೆಯ ಗಮನಕ್ಕೆ ತಂದರು.


ಸ್ವಚ್ಛತೆಗೆ ಮೊದಲ ಆದ್ಯತೆ
ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅತೀ ಅವಶ್ಯ ಆದ್ದರಿಂದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವುದು ಗ್ರಾಮದ ಯಾವುದೇ ಭಾಗಗಳಲ್ಲಿ ಕಸ,ತ್ಯಾಜ್ಯ ಹಾಕುವುದು ಕಂಡು ಬಂದರೆ ತಕ್ಷಣವೇ ಪಂಚಾಯತ್ ಗಮನಕ್ಕೆ ತಿಳಿಸುವಂತೆ ಅಧ್ಯಕ್ಷರು ವಿನಂತಿಸಿಕೊಂಡರು. ಪರ್ಪುಂಜದಿಂದ ಕುಂಬ್ರದ ತನಕ ರಸ್ತೆ ಬದಿಗಳಲ್ಲಿ ಕಸ,ಕಡ್ಡಿಗಳು ರಾಶಿ ಬಿದ್ದಿದ್ದು ಇದನ್ನು ಸ್ವಚ್ಛಗೊಳಿಸುವ ಬಗ್ಗೆ ಅಶ್ರಫ್ ಉಜಿರೋಡಿ ಹಾಗೂ ವಿನೋದ್ ಶೆಟ್ಟಿ ಮುಡಾಲ ತಿಳಿಸಿದರು. ಓರ್ವ ಸ್ವಚ್ಛತಗಾರರನ್ನು ನೇಮಿಸಿಕೊಳ್ಳುವ ಬಗ್ಗೆಯೂ ಅಶ್ರಫ್ ಉಜಿರೋಡಿ ತಿಳಿಸಿದರು.


ವಾರದ ಸಂತೆ ಮಾಡಬೇಕು
ಕುಂಬ್ರದಲ್ಲೂ ಒಂದು ವಾರದ ಸಂತೆ ನಡೆಯಬೇಕು, ಪಂಚಾಯತ್‌ನ ಹಳೆಯ ಕಟ್ಟಡದ ಆವರಣದಲ್ಲಿ ವಾರದ ಸಂತೆ ನಡೆಸುವ ಎಂದು ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಸಭೆಯ ಗಮನಕ್ಕೆ ತಂದರು. ತೆರಿಗೆ ವಸೂಲಾತಿ ಬಗ್ಗೆ ಗ್ರಾಮ ವ್ಯಾಪ್ತಿಯಲ್ಲಿ ಅಭಿಯಾನ ನಡೆಸುವ ಬಗ್ಗೆ ಚರ್ಚೆ ನಡೆಯಿತು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸಾರ್ವಜನಿಕ ಅರ್ಜಿಗಳು ಸೇರಿದಂತೆ ಸರಕಾರದ ಸುತ್ತೋಲೆಗಳನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿ ಜಯಂತಿಯವರು ನಿರ್ಣಯಗಳನ್ನು ದಾಖಲಿಸಿಕೊಂಡರು. ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಲತೀಫ್ ಕುಂಬ್ರ, ಪ್ರದೀಪ್ ಸೇರ್ತಾಜೆ, ರೇಖಾ ಯತೀಶ್, ವನಿತಾ, ನಳಿನಾಕ್ಷಿ, ಶಾರದಾ, ಚಿತ್ರಾ ಬಿ.ಸಿ, ಸುಂದರಿ ವಿವಿಧ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ, ಲೋಕನಾಥ, ಮೋಹನ್ ಸಹಕರಿಸಿದ್ದರು.


ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸಿ
ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವ ಸಂಘಟಕರು ಪಂಚಾಯತ್‌ನಿಂದ ಅನುಮತಿಗಾಗಿ ಬಂದಾಗ ನಾವು ಕೆಲವೊಂದು ಷರತ್ತುಗಳನ್ನು ವಿಧಿಸಿ ಅನುಮತಿ ಕೊಡುತ್ತೇವೆ. ಆದರೆ ಸಂಘಟಕರು ತಮ್ಮ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಬಹಳ ಅವಶ್ಯಕ. ರಸ್ತೆ ಬ್ಲಾಕ್ ಆಗುವ ರೀತಿಯಲ್ಲಿ ಕಾರ್ಯಕ್ರಮ ನಡೆಸುವುದು, ಅಗತ್ಯಕ್ಕಿಂತ ಹೆಚ್ಚು ಶಬ್ದ ಮಾಲಿನ್ಯವಾಗುವ ರೀತಿಯಲ್ಲಿ ಧ್ವನಿವರ್ಧಕ ಬಳಸುವುದು ಇತ್ಯಾದಿಗಳನ್ನು ಮಾಡದೇ ಪಂಚಾಯತ್‌ನೊಂದಿಗೆ ಸಹಕರಿಸಬೇಕು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು. ಅನುಮತಿ ಕೊಡುವ ಮುಂಚೆ ಸರಿಯಾದ ಕ್ರಮ ವಹಿಸಿ ಅನುಮತಿ ಕೊಡುವುದು ಎಂದು ನಿರ್ಣಯಿಸಲಾಯಿತು.
“ ಕುಡಿಯುವ ನೀರಿನ ಹಿತಮಿತ ಬಳಕೆಯೊಂದಿಗೆ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಡುವ ನಿಟ್ಟಿನಲ್ಲಿ ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿದೆ. ನೀರಿನ ಶುಲ್ಕ ಸೇರಿದಂತೆ ಪಂಚಾಯತ್‌ಗೆ ಸಲ್ಲತಕ್ಕ ತೆರಿಗೆಗಳನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಗ್ರಾಮದ ಅಭಿವೃದ್ದಿಗೆ ಕೈಜೋಡಿಸಬೇಕಾಗಿ ವಿನಂತಿ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾ.ಪಂ

LEAVE A REPLY

Please enter your comment!
Please enter your name here