ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಮಹಾರಥೋತ್ಸವ:ವಾಹನ ಸಂಚಾರದಲ್ಲಿ ಬದಲಾವಣೆ – ಬಿಗಿ ಪೊಲೀಸ್ ಬಂದೋಬಸ್ತ್

0

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ಜ.21ರಂದು ರಾತ್ರಿ ನಡೆಯಲಿದೆ. ರಥೋತ್ಸವ ಕಾರ್ಯಕ್ರಮದಲ್ಲಿ ಊರ ಪರವೂರಿನ ಸಾವಿರಾರು ಭಕ್ತಾದಿಗಳು ಭಾಗವಹಿಸುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.


ಜ.21ರಂದು ಬೆಳಗ್ಗೆ ದರ್ಶನ ಬಲಿ, ರಾಜಾಂಗಣದ ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರಲಿದೆ. ಬಳಿಕ ಸುಡುಮದ್ದು ಪ್ರದರ್ಶನ ಮಹಾರಥೋತ್ಸವ ನಡೆಯಲಿದೆ. ಬಳಿಕ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.


ಏಳನೇ ದಿನವಾದ ಜ.20ರಂದು ಬೆಳಿಗ್ಗೆ 5 ಗಂಟೆಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಉತ್ಸವ ನಡೆದು ಬಳಿಕ ಹೂತೇರು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ವಿಟ್ಲ ಮಾದರಿ ಶಾಲಾ ವಠಾರದಲ್ಲಿ ವಿ.ಆರ್.ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ – ವಿಟ್ಲರವರ ಸಾರಥ್ಯದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ಒರಿಯಾಂಡಲಾ ಸರಿಬೋಡು ತುಳು ಹಾಸ್ಯಮಯ ನಾಟಕ ನಡೆಯಿತು.


ನಾಳೆ ಕವಾಟೋದ್ಘಾಟನೆ:
ಜ.22ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಟಲು ಕಾಣಿಕೆ, ತುಲಾಭಾರ ಸೇವೆ ನಡೆಯಲಿದೆ. ರಾತ್ರಿ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆಯ ನಂತರ ಶ್ರೀದೇವರಿಗೆ ಅಷ್ಟಾವಧಾನ ಸೇವೆ ನಡೆಯಲಿದೆ. ನಂತರ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ದೇವರ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ ನಡೆಯಲಿದೆ.


ಬಿಗಿ ಪೊಲೀಸ್ ಬಂದೋಬಸ್ತು:
ವಿಟ್ಲ ರಥೋತ್ಸವದ ಪ್ರಯುಕ್ತ ಜಾತ್ರಾ ಗದ್ದೆ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿವಿಧ ಕಡೆಗಳಿಂದ ಹೆಚ್ಚುವರಿಯಾಗಿ ಪೊಲೀಸರನ್ನು ಕರೆಸಲಾಗಿದೆ ಮಾತ್ರವಲ್ಲದೆ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ರಥೋತ್ಸವದ ವೇಳೆ ಜನಜಂಗುಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸುವ ಸಾಧ್ಯತೆ ಇದ್ದು ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಹಾಗೂ ಮಕ್ಕಳ ಬಗ್ಗೆ ಕೂಡಾ ಜಾಗೃತರಾಗಿರಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಗೆ ಅವಕಾಶ ಬಂದೋಬಸ್ತ್ ಏರ್ಪಡಿಸಲಾಗಿದೆ -ಎಚ್ಚರ ಅಗತ್ಯ
ಈಗಾಗಲೇ ಕೆಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಆಯಕಟ್ಟಿನ ಸ್ಥಳದಲ್ಲಿ ಹೆಚ್ಚುವರಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ಅಹಿತಕರ ಘಟನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ
ಹೆಚ್ಚಿನ ಪೊಲೀಸರು ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇವಸ್ಥಾನದ ಸಮೀಪ ಸಾರ್ವಜನಿಕರಿಗೆ ಸಹಾಯವಾಗಲೆಂದು ಪೊಲೀಸ್ ಔಟ್ ಪೋಸ್ಟನ್ನು ತೆರೆಯಲಾಗಿದೆ. ಜಾತ್ರೋತ್ಸವದ ಗದ್ದೆಯಲ್ಲಿ ಅಥವಾ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಠಾಣೆಯನ್ನು ಅಥವಾ ಪೊಲೀಸ್ ಔಟ್ ಪೋಸ್ಟ್ ಅನ್ನು ಸಂಪರ್ಕಿಸಬಹುದು. ಅದೇ ರೀತಿ ದೇವಸ್ಥಾನಕ್ಕೆ ಬರುವ ವೇಳೆ ಕನಿಷ್ಠ ಒಬ್ಬರಾದರೂ ಮನೆಯಲ್ಲಿ ಇರುವುದು ಒಳಿತು. ದೇವಸ್ಥಾನಕ್ಕೆ ಬರುವ ಸಮಯ ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸಿ.
ಹೆಚ್.ಈ. ನಾಗರಾಜ್, ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ

LEAVE A REPLY

Please enter your comment!
Please enter your name here