ಪೆರಾಬೆ: ಪೆರಾಬೆ ಗ್ರಾ.ಪಂ.ನ 2024-25ನೇ ಸಾಲಿನ ವಿಶೇಷಚೇತನರ ಸಮನ್ವಯ ಗ್ರಾಮಸಭೆ ಜ.20ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಮಾಜಿ ನೋಡಲ್ ಅಧಿಕಾರಿ ಸುಬ್ರಮ್ಮಣ್ಯ ಪಿ.ವಿ.ಅವರು ಮಾತನಾಡಿ, ಸಮಾಜದ ಅತ್ಯಂತ ಕೆಳ ಮಟ್ಟದಲ್ಲಿರುವ ವಿಶೇಷಚೇತನರನ್ನು ಗುರುತಿಸಿ ಅವರಿಂದ ಸರಕಾರದ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಿದಾಗ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಟಾನ ಆಗುತ್ತದೆ. ವಿಶೇಷಚೇತನರಿಗೆ ಅನುಕಂಪದ ಬದಲು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಅವಕಾಶ ನೀಡಬೇಕು. ಪ್ರತಿ ಗ್ರಾಮ ಪಂಚಾಯತ್ಗಳಲ್ಲಿ ಗ್ರಾಮೀಣ ಪ್ರದೇಶದ ವಿಶೇಷಚೇತನರಿಗೆ ಸರಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕುಂತೂರು ಗ್ರಾಮದ ಆರೋಗ್ಯ ಸಮುದಾಯ ಅಧಿಕಾರಿ ರಮ್ಯರವರು ಎಂಡೋಸಲ್ಫಾನ್ ಸಂತ್ರಸ್ತರಿಗೆ ಮತ್ತು ವಿಶೇಷಚೇತನರಿಗೆ ಪ್ರತಿ ತಿಂಗಳಿಗೊಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಅವರು ಸಭೆಯ ಅಧ್ಯಕ್ಷತೆ ವಹಿಸಿ ವಿಶೇಷಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿರವರು ಪಂಚಾಯತ್ನ ಶೇ.೫ರ ನಿಧಿಯ ಬಗ್ಗೆ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಮಾಲತಿ ಅವರು ಸಂಜೀವಿನಿ ಸ್ವ ಸಹಾಯ ಸಂಘಗಳಲ್ಲಿನ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಸೇಲ್ಕೋ ಸೋಲಾರ್ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವರವರು ವಿಶೇಷಚೇತನರಿಗೆ ಸೋಲಾರ್ ಆಧಾರಿತ ಸ್ವ ಉದ್ಯೋಗದ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಫಯಾಜ್, ಸದಾನಂದ, ಕಾವೇರಿ, ಮೋಹಿನಿ, ಸೆಲ್ಕೊ ಸೋಲಾರ್ನ ವ್ಯವಸ್ಥಾಪಕ ಸಂಜಿತ್ ರೈ, ಕಡಬದ ಚಿದಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶೇಷಚೇತನರು ಮತ್ತು ಪೋಷಕರು ಸಭೆಯಲ್ಲಿ ಭಾಗವಹಿಸದರು. ಪೆರಾಬೆ ಗ್ರಾಮ ಪಂಚಾಯತ್ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಿಕಲಚೇತನ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ವಂದಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮೋನಪ್ಪ, ದೀಪಿಕಾ, ಪ್ರಶಾಂತಿ, ಚೇತನ ಸಹಕರಿಸಿದರು.